ದರ್ಶನಕ್ಕೆ ದ್ವಾರಕೀಶ ಅವರ ಪಾರ್ಥೀವ ಶರೀರವು ಬುಧವಾರ ಬೆಳಗಿನ ಜಾವದವರೆಗು ಅವರ ನಿವಾಸದಲ್ಲಿಯೇ ಇರಲಿದ್ದು, ಗಣ್ಯರ ಮತ್ತು ಕುಟುಂಬಸ್ಥರು ಅಂತಿಮ ದರ್ಶನ ಪಡೆದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಬೆಳಿಗ್ಗೆ 7.30 ರ ನಂತರ ರವೀಂದ್ರ ಕಲಾಕ್ಷೇತ್ರದಲ್ಲಿ ಕಲಾವಿದರು ಹಾಗೂ ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. 11 ಗಂಟೆವರೆಗೂ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗಿದ್ದು, 11 ಗಂಟೆಯ ನಂತರ ಶವವನ್ನು ಚಾಮರಾಜಪೇಟೆಯ ಟಿಆರ್ಮೀಲ್ ಚಿತಾಗಾರಕ್ಕೆ ತರಲಾಗುತ್ತದೆ. ಇಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.
ದ್ವಾರಕೀಶ್ ಅವರ ನಿಧನವಾರ್ತೆ ತಿಳಿಯುತ್ತಿದ್ದಂತೆ ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳು ಹಾಗೂ ಅವರ ಅಭಿಮಾನಿಗಳು ಸಂತಾಪ ಸೂಚಿಸಿದರು.
‘ರಾತ್ರಿ ಲೂಸ್ ಮೋಷನ್ ಆಯ್ತು. ರಾತ್ರಿ ನಿದ್ದೆ ಮಾಡಿರಲಿಲ್ಲ. ಬೆಳಿಗ್ಗೆ ಕಾಫಿ ಕುಡಿದು ಎರಡು ಗಂಟೆ ಮಲಗುತ್ತೇನೆ ಎಂದು ನಿದ್ರಿಸಿದ್ದರು. ಮಲಗಿದವರು ಎದ್ದೇ ಇಲ್ಲ. ಅವರಿಗೆ ಹೃದಯಾಘಾತ ಆಗಿದೆ’ ಎಂದು ದ್ವಾರಕೀಶ್ ಪುತ್ರ ಯೋಗಿ ಅವರು ಮಾಹಿತಿ ನೀಡಿದ್ದಾರೆ.
ದ್ವಾರಕೀಶ್ ಅವರು ನಟನಾಗಿ ಚಿತ್ರರಂಗಕ್ಕೆ ಕಾಲಿಟ್ಟರು. ನಂತರ ನಿರ್ಮಾಪಕನಾಗಿ, ನಿರ್ದೇಶಕನಾಗಿ ಅವರು ಚಿತ್ರರಂಗದಲ್ಲಿ ಗುರುತಿಸಿಕೊಂಡರು. ‘ಮಮತೆಯ ಬಂಧನ’ ಅವರ ನಿರ್ಮಾಣದ ಮೊದಲ ಸಿನಿಮಾ. ‘ವೀರ ಸಂಕಲ್ಪ’ ಅವರ ನಟನೆಯ ಮೊದಲ ಸಿನಿಮಾ.
ನಿರ್ದೇಶಕರಾಗಿಯೂ ದ್ವಾರಕೀಶ್ ಹೆಸರು ಮಾಡಿದ್ದರು. ‘ನೀ ಬರೆದ ಕಾದಂಬರಿ’ ಅವರ ನಿರ್ದೇಶನದ ಮೊದಲ ಸಿನಿಮಾ. ಆ ಬಳಿಕ, ‘ಆಫ್ರಿಕಾದಲ್ಲಿ ಶೀಲಾ’, ‘ಕಿಲಾಡಿಗಳು’ ಮೊದಲಾದ ಸಿನಿಮಾಗಳನ್ನು ಅವರು ನಿರ್ದೇಶಿಸಿದರು.