ಬೆಂಗಳೂರು: ‘ಫೈರ್ ಫ್ಲೈ’ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಪುತ್ರಿ ನಿವೇದಿತಾ ನಿರ್ಮಾಣದ ಮೊದಲ ಸಿನಿಮಾ. ಯುವ ಪ್ರತಿಭೆ ವಂಶಿ ನಟಿಸಿ, ನಿರ್ದೇಶಿಸುತ್ತಿರುವ ಈ ಚಿತ್ರದ ಮೊದಲ ಝಲಕ್ ರಿಲೀಸ್ ಆಗಿದ್ದು, ವಿಕ್ಕಿಯಾಗಿ ನಾಯಕ ವಂಶಿಯನ್ನು ಫೈರ್ ಫ್ಲೈ (FireFly Movie) ಬಳಗ ಸಿನಿಮಾ ಪ್ರೇಮಿಗಳಿಗೆ ಪರಿಚಯಿಸಿದೆ.
ವಿವೇಕಾನಂದ ಎಂದು ಪರಿಚಯಿಸಿಕೊಳ್ಳುವ ನಾಯಕ ತಾನೊಬ್ಬ ಅವಾರ್ಡ್ ವಿನ್ನಿಂಗ್ ಮ್ಯಾಥ್ಸ್ ಟೀಚರ್ ಎಂದು ಹೇಳಿಕೊಳ್ಳುತ್ತಾನೆ. ವಿಕ್ಕಿ ಪ್ರಪಂಚದಲ್ಲಿ ಬೆಳಗ್ಗೆ 7, ಮಧ್ಯಾಹ್ನ 1 ಮತ್ತು ರಾತ್ರಿ 8 ಗಂಟೆಗೆ ಏನ್ ನಡೆಯುತ್ತದೆ. ವಿಕ್ಕಿ ವಿಚಿತ್ರ ವರ್ತನೆಯನ್ನು ಸಖತ್ ಫನ್ನಿಯಾಗಿ ಈ ಚಿತ್ರದಲ್ಲಿ ಕಟ್ಟಿಕೊಡಲಾಗಿದೆ. 2 ನಿಮಿಷ 49 ಸೆಕೆಂಡ್ ಇರುವ ಫೈರ್ ಫ್ಲೈ ಟೀಸರ್ ಕುತೂಹಲದಿಂದ ಕೂಡಿದ್ದು, ವಿಕ್ಕಿ ಯಾರು ಅನ್ನೋದನ್ನು ಹೇಳಿರುವ ಚಿತ್ರತಂಡ, ಅಸಲಿಗೆ ಆತ ಯಾಕೆ ವಿಚಿತ್ರವಾಗಿ ವರ್ತನೆ ಮಾಡ್ತಾನೆ ಅನ್ನೋದರ ಗುಟ್ಟುಬಿಟ್ಟು ಕೊಟ್ಟಿಲ್ಲ.
ವಂಶಿ ನಾಯಕನಾಗಿ, ನಿರ್ದೇಶಕನಾಗಿ ಮಿಂಚಿದ್ದು, ತಾಂತ್ರಿಕವಾಗಿ ಟೀಸರ್ ಶ್ರೀಮಂತಿಕೆಯಿಂದ ಕೂಡಿದೆ. ಚಿತ್ರದ ಫ್ರೇಮ್, ಕಲರಿಂಗ್, ಕಂಟೆಂಟ್, ಕ್ವಾಲಿಟಿಯಲ್ಲಿ ಕಾಂಪ್ರಮೈಸ್ ಆಗದೆ ಒಳ್ಳೆ ಔಟ್ ಫುಟ್ ನೀಡಲಾಗಿದೆ. ಚರಣ್ ರಾಜ್ ಸಂಗೀತ, ಅಭಿಲಾಷ್ ಕಳತ್ತಿ ಕ್ಯಾಮೆರಾವರ್ಕ್ ರಘು ನಿಡುವಳ್ಳಿ ಸಂಭಾಷಣೆ, ಸುರೇಶ್ ಆರುಮುಗಂ ಸಂಕಲನ ಫೈರ್ ಫ್ಲೈ ಟೀಸರ್ ಅಂದವನ್ನು ಮತ್ತಷ್ಟು ಹೆಚ್ಚಿಸಿದೆ.
ಫೈರ್ ಫ್ಲೈ ನಾಯಕನಾಗಿ ಅಭಿನಯಿಸಿರುವ ವಂಶಿಗೆ ಜೋಡಿಯಾಗಿ ರಚನಾ ಇಂದರ್, ಉಳಿದಂತೆ ಅಚ್ಯುತ್ ಕುಮಾರ್, ಸುಧಾರಾಣಿ, ಶೀತಲ್ ಶೆಟ್ಟಿ, ಮೂಗು ಸುರೇಶ್, ಚಿತ್ಕಲಾ ಬಿರಾದಾರ್, ಸಿಹಿ ಕಹಿ ಚಂದ್ರು ತಾರಾಬಳಗದಲ್ಲಿದ್ದಾರೆ. ಈ ಸಿನಿಮಾವನ್ನು ಶ್ರೀ ಮುತ್ತು ಸಿನಿ ಸರ್ವಿಸ್ ಸಂಸ್ಥೆ ನಿರ್ಮಾಣ ಮಾಡುತ್ತಿದೆ. ಈ ಮೂಲಕ ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ಕೂಡ ಕೊಡಲು ಮುಂದಾಗಿದೆ.
ಫೈರ್ ಫ್ಲೈ ಮೂಲಕವೇ ನಿರ್ದೇಶಕ ವಂಶಿ ಪೂರ್ಣ ಪ್ರಮಾಣದ ನಾಯಕರಾಗುತ್ತಿದ್ದಾರೆ. ಇವರ ಮೊದಲ ಪ್ರಯತ್ನದ ಬಗ್ಗೆ ಟಾಕ್ ಇದ್ದೇ ಇದೆ. ಚಿತ್ರದ ಮೊದಲ ಝಲಕ್ ನಲ್ಲಿ ಫನ್-ಎಮೋಷನ್, ಎಂಟರ್ ಟೈನ್ಮೆಂಟ್ ಎಲ್ಲವೂ ಇದೆ. ಶೂಟಿಂಗ್ ಮುಗಿಸಿರುವ ಚಿತ್ರತಂಡ ಈ ವರ್ಷಾಂತ್ಯಕ್ಕೆ ಸಿನಿಮಾವನ್ನು ತೆರೆಗೆ ತರುವ ಯೋಜನೆ ಹಾಕಿಕೊಂಡಿದೆ.
ಈ ಸುದ್ದಿಯನ್ನೂ ಓದಿ | Renukaswamy Murder Case: ರೇಣುಕಾಸ್ವಾಮಿ ಕೊಲೆ ಪ್ರಕರಣದ ಚಾರ್ಜ್‌ಶೀಟ್ ವಿವರ ಪ್ರಸಾರಕ್ಕೆ ತಡೆ ಹಾಕಿದ ಹೈಕೋರ್ಟ್
ವಿಕ್ಕಿ ವರುಣ್ – ಧನ್ಯಾ ರಾಮ್‌ಕುಮಾರ್ ಅಭಿನಯದ ʼಕಾಲಾಪತ್ಥರ್ʼ ಚಿತ್ರಕ್ಕೆ ಶಿವಣ್ಣ ಸಾಥ್; ಗಮನ ಸೆಳೆವ ಟ್ರೈಲರ್ ಇಲ್ಲಿದೆ
ಬೆಂಗಳೂರು: ಭುವನ್ ಮೂವೀಸ್ ಲಾಂಛನದಲ್ಲಿ ಭುವನ್ ಸುರೇಶ್ ಹಾಗೂ ನಾಗರಾಜ್ ಬಿಲ್ಲಿನಕೋಟೆ ನಿರ್ಮಿಸಿರುವ, ‘ಕೆಂಡಸಂಪಿಗೆʼ, ʼಕಾಲೇಜ್ ಕುಮಾರʼ ಖ್ಯಾತಿಯ ವಿಕ್ಕಿ ವರುಣ್ ನಿರ್ದೇಶಿಸಿ, ನಾಯಕನಾಗಿ ನಟಿಸಿರುವ ʼಕಾಲಾಪತ್ಥರ್ʼ (Kaalapatthar) ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಕರುನಾಡ ಚಕ್ರವರ್ತಿ ಶಿವರಾಜಕುಮಾರ್ (Shiva Rajkumar) ಈ ಚಿತ್ರದ ಟ್ರೈಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.
ಟ್ರೈಲರ್ ಬಿಡುಗಡೆ ಮಾಡಿ ಮಾತನಾಡಿದ ಶಿವರಾಜಕುಮಾರ್ ಅವರು, “ಕಾಲಾಪತ್ಥರ್ʼ ಚಿತ್ರದ ಟ್ರೈಲರ್ ತುಂಬಾ ಚೆನ್ನಾಗಿದೆ. ಈ ಚಿತ್ರ ಖಂಡಿತ ಸೂಪರ್ ಹಿಟ್ ಆಗಲಿದೆʼʼ ಎಂದು ಹಾರೈಸಿದರು.
ʼʼನಾನು ನಟ ಆಗಬೇಕೆಂದುಕೊಂಡವನಲ್ಲ. ನಿರ್ದೇಶಕನಾಗಬೇಕೆಂದು ಚಿತ್ರರಂಗಕ್ಕೆ ಬಂದವನು. ದುನಿಯಾ ಸೂರಿ ಅವರ ಬಳಿ ಸಹಾಯಕನಾಗಿ ಕೆಲಸ ಮಾಡಿದ್ದೇನೆ. ಈ ಸಮಯದಲ್ಲಿ ಅವರನ್ನು ನೆನಪಿಸಿಕೊಳ್ಳುತ್ತೇನೆ. ಇನ್ನು ʼಕಡ್ಡಿಪುಡಿʼ ಚಿತ್ರದ ಸಮಯದಲ್ಲಿ ಶಿವಣ್ಣ ಅವರು ಮಾತಾನಾಡಿಸಿದ್ದು ಹಾಗೂ ಅವರ ಜೊತೆ ಒಂದು ದೃಶ್ಯದಲ್ಲಿ ಅಭಿನಯಿಸಿದ್ದು ಮರೆಯಲಾಗದ ಕ್ಷಣ. ಇಂದು ಅವರೇ ನಾನು ನಿರ್ದೇಶಿಸಿರುವ ಚಿತ್ರದ ಟ್ರೈಲರ್ ಬಿಡುಗಡೆ ಮಾಡಿದ್ದು ಮತ್ತಷ್ಟು ಸಂತಸ ತಂದಿತ್ತಿದೆ. ಅವಕಾಶ ಕೊಟ್ಟ ನಿರ್ಮಾಪಕರಿಗೆ ಹಾಗೂ ಚಿತ್ರತಂಡದವರಿಗೆ ಧನ್ಯವಾದ. ಸೆಪ್ಟೆಂಬರ್ 13 ರಂದು ಚಿತ್ರ ಬಿಡುಗಡೆಯಾಗುತ್ತಿದೆ. ಥಿಯೇಟರ್‌ನಲ್ಲೇ ಸಿನಿಮಾ ನೋಡಿʼʼ ಎಂದು ನಿರ್ದೇಶಕ ಹಾಗೂ ನಟ ವಿಕ್ಕಿ ವರುಣ್ ಮನವಿ ಮಾಡಿದರು.
ಚಿತ್ರದ ನಾಯಕಿ ಧನ್ಯಾ ರಾಮ್‌ಕುಮಾರ್ ಮಾತನಾಡಿ, ʼʼಶಿವಣ್ಣ ಮಾವ ಟ್ರೈಲರ್ ಬಿಡುಗಡೆ ಮಾಡಿಕೊಟ್ಟು ಆಶೀರ್ವಾದ ಮಾಡಿದ್ದಾರೆ. ವಿನಯ್ ರಾಜಕುಮಾರ್ ಸಹ ಬಂದಿದ್ದಾರೆ. ಮೊದಲಿನಿಂದಲೂ ನನ್ನ ಕುಟುಂಬ ನನಗೆ ಸಹಕಾರ ನೀಡುತ್ತಾ ಬಂದಿದೆ. ಈ ಚಿತ್ರದಲ್ಲಿ ನನ್ನ ಹಿಂದಿನ ಚಿತ್ರಗಳಿಗಿಂತ ವಿಭಿನ್ನ ಪಾತ್ರವಿದೆʼʼ ಎಂದು ತಿಳಿಸಿದರು.
ಈ ಸುದ್ದಿಯನ್ನೂ ಓದಿ: Gaangeaya movie: ‘ಗಾಂಗೇಯ’ ಚಿತ್ರದ ಹಾಡುಗಳು ರಿಲೀಸ್; ಭರದಿಂದ ಸಾಗಿದ ಶೂಟಿಂಗ್
ನಿರ್ಮಾಪಕರಾದ ಭುವನ್ ಸುರೇಶ್, ನಾಗರಾಜ್ ಬಿಲ್ಲನಕೋಟೆ ಎಲ್ಲರೂ ಚಿತ್ರ ನೋಡಿ ಪ್ರೋತ್ಸಾಹಿಸಿ ಎಂದರು. ಚಿತ್ರದಲ್ಲಿ ನಟಿಸಿರುವ ಹಿರಿಯ ನಿರ್ದೇಶಕ ಟಿ.ಎಸ್.ನಾಗಾಭರಣ, ರಾಜೇಶ್ ನಟರಂಗ, ಚಕ್ರವರ್ತಿ ಚಂದ್ರಚೂಡ್ ಮುಂತಾದ ಕಲಾವಿದರು ಹಾಗೂ ತಂತ್ರಜ್ಞರು ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದರು.