Sunday, 27th October 2024

Firefly Movie: ಶಿವಣ್ಣ ಪುತ್ರಿ ನಿರ್ಮಾಣದ ಚೊಚ್ಚಲ ಚಿತ್ರ ‘ಫೈರ್ ಫ್ಲೈ’ ಶೂಟಿಂಗ್‌ ಪೂರ್ಣ; ಯಾವಾಗ ತೆರೆಗೆ?

Firefly Movie

ಬೆಂಗಳೂರು: ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್‌ (Shiva Rajkumar) ಪುತ್ರಿ ನಿವೇದಿತಾ (Niveditha) ನಿರ್ಮಾಣದ ಮೊದಲ ಸಿನಿಮಾ ‘ಫೈರ್‌ ಫ್ಲೈ’ (Firefly Movie)ಗೆ ಕುಂಬಳಕಾಯಿ ಪ್ರಾಪ್ತಿಯಾಗಿದ್ದು, ಚಿತ್ರೀಕರಣ ಪೂರ್ಣಗೊಂಡಿದೆ. ಕುಂಬಳಕಾಯಿ ಇವೆಂಟ್‌ನಲ್ಲಿ ಶಿವರಾಜ್ ಕುಮಾರ್, ಗೀತಾ ಶಿವರಾಜ್ ಕುಮಾರ್, ನಿವೇದಿತಾ ಶಿವರಾಜ್ ಕುಮಾರ್, ನಿರ್ದೇಶಕ ವಂಶಿ, ಸಂಗೀತ ನಿರ್ದೇಶಕ ಚರಣ್ ರಾಜ್, ನಾಯಕಿ ರಚನಾ ಇಂದರ್‌ ಸೇರಿದಂತೆ ಇಡೀ ತಂಡ ಭಾಗಿಯಾಗಿತ್ತು.

ಈ ಸಿನಿಮಾದಲ್ಲಿ ಯುವ ಪ್ರತಿಭೆ ವಂಶಿ ನಾಯಕನಾಗಿ ನಟಿಸುತ್ತಿದ್ದಾರೆ. ಇದರೊಂದಿಗೆ ನಿರ್ದೇಶಕನಾಗಿಯೂ ಕೆಲಸ ಮಾಡಿದ್ದಾರೆ. ಈ ಸಿನಿಮಾದಲ್ಲಿ ವಂಶಿ ಜತೆ ಹಿರಿಯ ಕಲಾವಿದೆ ಸುಧಾರಾಣಿ, ಅಚ್ಯುತ್ ಕುಮಾರ್, ನಿರೂಪಕಿ ಕಂ ನಟಿ ಶೀತಲ್ ಶೆಟ್ಟಿ ಸೇರಿದಂತೆ ಹಲವು ದಿಗ್ಗಜರು ಕೂಡ ಅಭಿನಯಿಸಿದ್ದಾರೆ. ಇನ್ನು ವಂಶಿಗೆ‌ ನಾಯಕಿಯಾಗಿ ರಚನಾ ಇಂದರ್ ಮೊದಲ ಬಾರಿ ಜತೆಯಾಗಿದ್ದಾರೆ.

ʼಫೈರ್ ಫ್ಲೈ’ ಸಿನಿಮಾಗೆ ಅಭಿಲಾಷ್ ಕಳತ್ತಿ ಕ್ಯಾಮರಾ ವರ್ಕ್ ಇದ್ದರೆ, ಚರಣ್ ರಾಜ್ ಈ ಸಿನಿಮಾಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ರಘು ನಿಡುವಳ್ಳಿ ಅವರ ಸಂಭಾಷಣೆಯಿದೆ. ಈ ಸಿನಿಮಾವನ್ನು ಶ್ರೀ ಮುತ್ತು ಸಿನಿ ಸರ್ವಿಸ್ ಸಂಸ್ಥೆ ನಿರ್ಮಾಣ ಮಾಡುತ್ತಿದೆ. ಈ ಮೂಲಕ ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ಕೂಡ ಕೊಡಲು ಮುಂದಾಗಿದೆ.

ಮೊದಲ ಬಾರಿಗೆ ನಾಯಕ

ʼಫೈರ್ ಫ್ಲೈʼ ಮೂಲಕವೇ ನಿರ್ದೇಶಕ ವಂಶಿ ಪೂರ್ಣ ಪ್ರಮಾಣದ ನಾಯಕರಾಗುತ್ತಿದ್ದಾರೆ. ಇವರ ಮೊದಲ ಪ್ರಯತ್ನದ ಬಗ್ಗೆ ಟಾಕ್ ಇದ್ದೇ ಇದೆ. ಬಿಡುಗಡೆಯಾದ ಚಿತ್ರದ ಮೊದಲ ಝಲಕ್‌ನಲ್ಲಿ ಫನ್-ಎಮೋಷನ್, ಎಂಟರ್ ಟೈನ್‌ಮೆಂಟ್‌ ಎಲ್ಲವೂ ಇದೆ. ಶೂಟಿಂಗ್ ಮುಗಿಸಿರುವ ಚಿತ್ರತಂಡ ಈ ವರ್ಷಾಂತ್ಯಕ್ಕೆ ಸಿನಿಮಾವನ್ನು ತೆರೆಗೆ ತರುವ ಯೋಜನೆ ಹಾಕಿಕೊಂಡಿದೆ.

ಈ ಚಿತ್ರದ ಮೊದಲ ಝಲಕ್ ರಿಲೀಸ್ ಆಗಿದ್ದು, ಗಮನ ಸೆಳೆಯುತ್ತಿದೆ. ವಿವೇಕಾನಂದ ಎಂದು ಪರಿಚಯಿಸಿಕೊಳ್ಳುವ ನಾಯಕ ತಾನೊಬ್ಬ ಅವಾರ್ಡ್ ವಿನ್ನಿಂಗ್ ಮ್ಯಾಥ್ಸ್ ಟೀಚರ್ ಎಂದು ಹೇಳಿಕೊಳ್ಳುತ್ತಾನೆ. ವಿಕ್ಕಿ ಪ್ರಪಂಚದಲ್ಲಿ ಬೆಳಗ್ಗೆ 7, ಮಧ್ಯಾಹ್ನ 1 ಮತ್ತು ರಾತ್ರಿ 8 ಗಂಟೆಗೆ ಏನ್ ನಡೆಯುತ್ತದೆ. ವಿಕ್ಕಿ ವಿಚಿತ್ರ ವರ್ತನೆಯನ್ನು ಸಖತ್ ಫನ್ನಿಯಾಗಿ ಈ ಚಿತ್ರದಲ್ಲಿ ಕಟ್ಟಿಕೊಡಲಾಗಿದೆ. 2 ನಿಮಿಷ 49 ಸೆಕೆಂಡ್ ಇರುವ ʼಫೈರ್ ಫ್ಲೈʼ ಟೀಸರ್ ಕುತೂಹಲದಿಂದ ಕೂಡಿದ್ದು, ವಿಕ್ಕಿ ಯಾರು ಅನ್ನೋದನ್ನು ಹೇಳಿರುವ ಚಿತ್ರತಂಡ, ಅಸಲಿಗೆ ಆತ ಯಾಕೆ ವಿಚಿತ್ರವಾಗಿ ವರ್ತನೆ ಮಾಡ್ತಾನೆ ಅನ್ನೋದರ ಗುಟ್ಟು ಬಿಟ್ಟು ಕೊಟ್ಟಿಲ್ಲ.

ಪುನೀತ್ ರಾಜ್‌ಕುಮಾರ್‌ ಅವರ ‘ಪಿಆರ್‌ಕೆ ಪ್ರೊಡಕ್ಷನ್ಸ್’ ನಿರ್ಮಾಣದ ‘ಮಯಾ ಬಜಾರ್’ ಸಿನಿಮಾದಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದ ವಂಶಿ ‘ಪೆಂಟಗನ್’ ಚಿತ್ರದಲ್ಲೂ ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದರು. ಈಗ ನಿವೇದಿತಾ ನಿರ್ಮಾಣ ಮಾಡುತ್ತಿರುವ ಮೊದಲ ಚಿತ್ರಕ್ಕೆ ನಿರ್ದೇಶನ ಮಾಡುವ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಮತ್ತು ಪೂರ್ಣಪ್ರಮಾಣದ ಹೀರೋ ಆಗಿ ಚಿತ್ರರಂಗಕ್ಕೆ ಮತ್ತೊಮ್ಮೆ ಪರಿಚಯವಾಗುತ್ತಿದ್ದಾರೆ.

ಈ ಸುದ್ದಿಯನ್ನೂ ಓದಿ: Gaangeaya movie: ‘ಗಾಂಗೇಯ’ ಚಿತ್ರದ ಹಾಡುಗಳು ರಿಲೀಸ್‌; ಭರದಿಂದ ಸಾಗಿದ ಶೂಟಿಂಗ್‌