Saturday, 23rd November 2024

ವಿವಾದಕ್ಕೆ ಸಿಲುಕಿದ ಆಲಿಯಾ ನಟನೆಯ ಗಂಗೂಬಾಯಿ ಕಥಿವಾಡಿ

ಮುಂಬೈ: ಬಾಲಿವುಡ್ ನಟಿ ಆಲಿಯಾ ಭಟ್ ಅಭಿನಯದ ಗಂಗೂಬಾಯಿ ಕಥಿವಾಡಿ ಸಿನಿಮಾದಲ್ಲಿ ಪ್ರದೇಶದ ಹೆಸರನ್ನು ಬಳಸಿಕೊಳ್ಳಲಾಗಿದೆ ಎಂದು ಆರೋಪಿಸಿ ಶಾಸಕರೊಬ್ಬರು ಸಿನಿಮಾ ವಿರುದ್ಧ ಬಾಂಬೆ ಹೈಕೋರ್ಟ್ ಮೊರೆ ಹೋಗಿದ್ದಾರೆ.

ಫೆ. 25ರಂದು ಸಿನಿಮಾವು ಬಿಡುಗಡೆಯಾಗಲಿದ್ದು, ಮೂರೇ ದಿನ ಬಾಕಿ ಇರುವಾಗಲೇ ಮತ್ತೊಂದು ವಿವಾದಕ್ಕೆ ಸಿಲುಕಿದೆ.

ಮಹಾರಾಷ್ಟ್ರದ ಶಾಸಕ ಅಮೀನ್ ಪಟೇಲ್ ಮತ್ತು ದಕ್ಷಿಣ ಮುಂಬೈನ ಕಾಮತಿಪುರ ಪ್ರದೇಶದ ನಿವಾಸಿ ಯೊಬ್ಬರು ಬಾಲಿವುಡ್ ಚಿತ್ರದಲ್ಲಿ ಪ್ರದೇಶದ ಹೆಸರನ್ನು ಬಳಸಿರುವುದನ್ನು ವಿರೋಧಿಸಿ ಬಾಂಬೆ ಹೈಕೋರ್ಟ್‌ ಮೊರೆ ಹೋಗಿದ್ದಾರೆ ಮತ್ತು ಅದನ್ನು ಸೆನ್ಸಾರ್ ಗೂ ಕೋರಿದ್ದಾರೆ.

ಈ ಹಿಂದೆ ಹಲವಾರು ವೇಶ್ಯಾವಾಟಿಕೆ ನಡೆಸುತ್ತಿದ್ದ ಕಾಮಾಟಿಪುರದ ನಿವಾಸಿ ಶ್ರದ್ಧಾ ಸುರ್ವೆ ಎಂಬುವವರು ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಗಳಾದ ಗೌತಮ್ ಪಟೇಲ್ ಮತ್ತು ಮಾಧವ್ ಜಾಮ್‌ದಾರ್ ಅವರ ವಿಭಾಗೀಯ ಪೀಠದ ಮುಂದೆ ಮಂಗಳವಾರ ಪ್ರಸ್ತಾಪಿಸಲಾಗಿದೆ.

ಶುಕ್ರವಾರ ಚಿತ್ರ ಬಿಡುಗಡೆಯಾಗಲಿರುವ ಕಾರಣ ತುರ್ತು ವಿಚಾರಣೆಯನ್ನು ಕೋರಿದೆ. ಶಾಸಕ ಅಮೀನ್ ಪಟೇಲ್ ಅವರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ದೀಪಂಕರ್ ದತ್ತಾ ಮತ್ತು ನ್ಯಾಯಮೂರ್ತಿ ಎಂಎಸ್ ಕಾರ್ಣಿಕ್ ಅವರ ವಿಭಾಗೀಯ ಪೀಠದ ಮುಂದೆ ಪ್ರಸ್ತಾಪಿಸಲಾಯಿತು. ಬುಧವಾರ ಅರ್ಜಿಯ ವಿಚಾರಣೆ ನಡೆಸುವುದಾಗಿ ಪೀಠ ಹೇಳಿದೆ.

ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಈ ಚಲನಚಿತ್ರವು ಬರಹಗಾರ ಎಸ್.ಹುಸೇನ್ ಜೈದಿ ಅವರ ಪುಸ್ತಕ ಮಾಫಿಯಾ ಕ್ವೀನ್ಸ್ ಆಫ್ ಮುಂಬೈನ ಅಧ್ಯಾಯವನ್ನು ಆಧರಿಸಿದೆ. 1960ರ ದಶಕದಲ್ಲಿ ಕಾಮಾಟಿಪುರದ ಗಂಗೂಬಾಯಿ ಪಾತ್ರದಲ್ಲಿ ಆಲಿಯಾ ಭಟ್ ಕಾಣಿಸಿಕೊಂಡಿದ್ದಾರೆ.