Sunday, 15th December 2024

Ghaati Release Date: ಅನುಷ್ಕಾ ಶೆಟ್ಟಿ ಫ್ಯಾನ್ಸ್‌ಗೆ ಗುಡ್‌ನ್ಯೂಸ್‌; ‘ಘಾಟಿ’ ಚಿತ್ರದ ರಿಲೀಸ್‌ ಡೇಟ್‌ ಅನೌನ್ಸ್‌

Ghaati Release Date

ಹೈದರಾಬಾದ್‌: ದಕ್ಷಿಣ ಭಾರತದ ಜನಪ್ರಿಯ ನಟಿ, ಟಾಲಿವುಡ್‌ ಸೂಪರ್‌ ಸ್ಟಾರ್‌ ಅನುಷ್ಕಾ ಶೆಟ್ಟಿ (Anushka Shetty) ಅವರ ಅಭಿಮಾನಿಗಳು ಬಹಳ ದಿನಗಳ ನಂತರ ಖುಷಿ ಪಡುವ ಸುದ್ದಿಯೊಂದು ಹೊರ ಬಿದ್ದಿದೆ. ಮತ್ತೆ ತೆರೆಮೇಲೆ ಅವರನ್ನು ಕಣ್ತುಂಬಿಕೊಳ್ಳಬೇಕೆಂದು ತುದಿಗಾಲಿನಲ್ಲಿ ನಿಂತವರಿಗೆ ʼಘಾಟಿʼ (Ghaati) ಚಿತ್ರತಂಡ ಗುಡ್‌ನ್ಯೂಸ್‌ ನೀಡಿದೆ. ಅನುಷ್ಕಾ ಶೆಟ್ಟಿ ಮತ್ತೊಮ್ಮೆ ಪವರ್‌ಫುಲ್‌ ಪಾತ್ರದಲ್ಲಿ ಕಾಣಿಸಿಕೊಂಡ ಈ ಬಹುನಿರೀಕ್ಷಿತ ಚಿತ್ರದ ರಿಲೀಸ್‌ ಡೇಟ್‌ ಇದೀಗ ಹೊರಬಿದ್ದಿದೆ. ಆದರೆ ಇದಕ್ಕಾಗಿ ನೀವು ಸ್ವಲ್ಪ ದಿನ ಕಾಯಲೇಬೇಕು (Ghaati Release Date).

ಅನುಷ್ಕಾ ಶೆಟ್ಟಿ ಅವರ ಹುಟ್ಟುಹಬ್ಬದ ಪ್ರಯುಕ್ತ ನ. 7ರಂದು ʼಘಾಟಿʼ ಚಿತ್ರದ ಟೀಸರ್‌ ರಿಲೀಸ್‌ ಆಗಿತ್ತು. ಹಿಂದೆಂದೂ ಕಂಡಿರದ ಅವತಾರದಲ್ಲಿ ಅನುಷ್ಕಾ ಇದರಲ್ಲಿ ಕಾಣಿಸಿಕೊಂಡಿದ್ದಾರೆ. ಟೀಸರ್‌ನಲ್ಲಿ ಅನುಷ್ಕಾ ಕೈಯಲ್ಲಿ ಕತ್ತಿ ಹಿಡಿದು ರಕ್ತ ಸುರಿಸಿ  ಇದೊಂದು ಆ್ಯಕ್ಷನ್‌ ಕ್ರೈಂ ಡ್ರಾಮಾ ಎನ್ನುವ ಸೂಚನೆ ನೀಡಿದ್ದರು. ಈ ಮೂಲಕ ಟೀಸರ್‌ ಸಿನಿಪ್ರೇಮಿಗಳ ಗಮನ ಸೆಳೆದಿತ್ತು. ಕ್ರಿಷ್ ಜಾಗರ್ಲಮುಡಿ ನಿರ್ದೇಶನದ ಈ ಚಿತ್ರದ ರಿಲೀಸ್‌ ಡೇಟ್‌ ಇದೀಗ ಅದಿಕೃತವಾಗಿ ಘೋಷಣೆಯಾಗಿದೆ.

ಈ ದಿನದಂದು ತೆರೆಗೆ

ಏನಿದ್ದರೂ ಈ ಸಿನಿಮಾ ಮುಂದಿನ ವರ್ಷವೇ ತೆರೆಗೆ ಬರಲಿದೆ. 2025ರ ಏ. 18ರಂದು ವಿಶ್ವಾದ್ಯಂತ ʼಘಾಟಿʼ ರಿಲೀಸ್‌ ಆಗಲಿದೆ. ಯುವಿ ಕ್ರಿಯೇಷನ್ಸ್ ಪ್ರಸ್ತುತ ಪಡಿಸುತ್ತಿರುವ ಈ ಚಿತ್ರವನ್ನು ರಾಜೀವ್ ರೆಡ್ಡಿ ಮತ್ತು ಸಾಯಿ ಬಾಬು ಜಾಗರ್ಲಮುಡಿ ನಿರ್ಮಿಸುತ್ತಿದ್ದಾರೆ. ತೆಲುಗಿನ ಜತೆಗೆ ಕನ್ನಡ, ತಮಿಳು, ಹಿಂದಿ ಮತ್ತು ಮಲಯಾಳಂನಲ್ಲಿ ತೆರೆಗೆ ಬರಲಿದೆ. ಸಂತ್ರಸ್ತ ಮಹಿಳೆಯೊಬ್ಬಳು ಅಪರಾಧಿಯಾಗಿ ಬಳಿಕ ಸಮಾಜಕ್ಕೆ ಬೆಳಕಾಗಿ ಬದಲಾಗುವ ಪವರ್‌ಫುಲ್‌ ಕಥೆಯನ್ನು ಈ ಚಿತ್ರ ಹೊಂದಿದೆ ಎನ್ನುವುದು ಟೀಸರ್‌ ಮೂಲಕ ಗೊತ್ತಾಗಿದೆ.

ಮತ್ತೊಂದು ಪವರ್‌ಫುಲ್‌ ರೋಲ್‌ನಲ್ಲಿ ಅನುಷ್ಕಾ

ಹಿಂದಿನಿಂದಲೂ ಅನುಷ್ಕಾ ಶೆಟ್ಟಿ ಪವರ್‌ಫುಲ್‌ ಪಾತ್ರಗಳಿಗೆ ಜನಪ್ರಿಯ. ನಾಯಕಿ ಪ್ರಧಾನ ಚಿತ್ರಗಳಲ್ಲಿ ಅವರು ಈ ಹಿಂದೆಯೂ ಮಿಂಚಿದ್ದಾರೆ. ʼಅರುಂಧತಿʼ, ʼವೇದಂʼ, ʼಸೈಜ್‌ ಝೀರೊʼ, [ಭಾಗಮತಿʼ, ʼನಿಶ್ಯಬ್ದಂʼ, ʼಮಿಸ್‌ ಶೆಟ್ಟಿ ಮಿಸ್ಟರ್‌ ಪೊಲಿಶೆಟ್ಟಿʼ ಮುಂತಾದ ಚಿತ್ರಗಳ ಶಕ್ತಿಯುತ ನಾಯಕಿ ಪಾತ್ರಗಳಿಂದ ಗುರುತಿಸಿಕೊಂಡಿದ್ದಾರೆ. ಇದೇ ಸಾಲಿಗೆ ʼಘಾಟಿʼ ಸೇರುವ ಎಲ್ಲ ಲಕ್ಷಣಗಳಿವೆ. ʼವೇದಂʼ ಮತ್ತು ತಮಿಳಿನ ʼವಾನಂʼ ಚಿತ್ರಗಳ ಬಳಿಕ ಮತ್ತೆ ಕ್ರಿಷ್‌ ಅವರ ನಿರ್ದೇಶನದಲ್ಲಿ ಅನುಷ್ಕಾ ನಟಿಸಿದ್ದು ಈಗಾಗಲೇ ಕುತೂಹಲ ಕೆರಳಿಸಿದೆ. ಮನೋಜ್ ರೆಡ್ಡಿ ಕಟ್ಟಾಸನಿ ಛಾಯಾಗ್ರಹಣ, ನಾಗವೆಳ್ಳಿ ವಿದ್ಯಾ ಸಾಗರ್ ಸಂಗೀತ, ತೋಟಾ ತಾರ್ರಣಿ ಕಲಾ ನಿರ್ದೇಶನ ಹಾಗೂ ಚಾಣಕ್ಯ ರೆಡ್ಡಿ ತೂರುಪು ಅವರ ಸಂಕಲನ ಚಿತ್ರಕ್ಕಿದೆ. ಚಿಂತಕಿಂಡಿ ಶ್ರೀನಿವಾಸ ರಾವ್ ಅವರ ಕಥೆಗೆ ಸಾಯಿ ಮಾಧವ್ ಬುರ್ರ ಸಂಭಾಷಣೆ ಬರೆದಿದ್ದಾರೆ.

ಮಾಲಿವುಡ್‌ಗೆ ಕಾಲಿಟ್ಟ ಶೆಟ್ಟರ ಹುಡುಗಿ

ಈ ಮಧ್ಯೆ ಅನುಷ್ಕಾ ಮಲಯಾಳಂಗೂ ಕಾಲಿಟ್ಟಿದ್ದಾರೆ. ಆ ಮೂಲಕ ಕನ್ನಡ ಹೊರತುಪಡಿಸಿ ದಕ್ಷಿಣ ಭಾರತದ ಎಲ್ಲ ಚಿತ್ರರಂಗದಲ್ಲಿಯೂ ನಟಿಸಿದಂತಾಗಿದೆ. ಮೊದಲ ಬಾರಿ ʼಕಂದನಾರ್‌ʼ ಮಲಯಾಳಂ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ರೋಜಿನ್‌ ಥಾಮಸ್‌ ನಿರ್ದೇಶನದ ಈ ಚಿತ್ರದಲ್ಲಿ ಜಯಸೂರ್ಯ, ಪ್ರಭುದೇವ, ವಿನೀತ್‌ ಮತ್ತಿತರರು ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.

ಈ ಸುದ್ದಿಯನ್ನೂ ಓದಿ: Vidaamuyarchi teaser: ಅಜಿತ್‌ ಕುಮಾರ್‌ ನಟನೆಯ ʻವಿಡಾಮುಯಾರ್ಚಿʼ ಟೀಸರ್‌ ಔಟ್‌… ಹಾಲಿವುಡ್‌ ರೇಂಜ್‌ನಲ್ಲಿದೆ ಎಂದ ಪ್ರೇಕ್ಷಕರು