ಬಿಗ್ ಬಾಸ್ (Bigg Boss) ಮನೆಗೆ ಕಾಲಿಟ್ಟ ನಂತರ ಒಮ್ಮೆಯಾದರು ಕ್ಯಾಪ್ಟನ್ ಪಟ್ಟ ಅಲಂಕರಿಸಬೇಕು ಎಂಬುದು ಪ್ರತಿಯೊಬ್ಬ ಸ್ಪರ್ಧಿಯ ಕನಸು. ಹಾಗೆ ಒಂದು ವಾರದ ನಾಯಕನಾದರೆ ಆತನಿಗೆ ಕ್ಯಾಪ್ಟನ್ ರೂಮ್, ವಿಶೇಷ ಸೌಲಭ್ಯ ದೊರೆಯುತ್ತದೆ, ಇಮ್ಯುನಿಟಿ ಮತ್ತು ವಿಶೇಷ ಅಧಿಕಾರಗಳು ಸಿಗುತ್ತವೆ. ಕಳೆದ ಕೆಲವು ವಾರಗಳಿಂದ ಬಿಗ್ ಬಾಸ್ ಮನೆಯಲ್ಲಿ ಗೋಲ್ಡ್ ಸುರೇಶ್ ತಾನು ಕ್ಯಾಪ್ಟನ್ ಆಗಬೇಕೆಂದು ಸಾಕಷ್ಟು ಪಣತೊಟ್ಟಿದ್ದರು. ಆದರೆ, ಅದು ಸಾಧ್ಯವಾಗಿರಲಿಲ್ಲ. ಆದರೆ, ಅವರ ಕನಸು ನನಸಾಯಿತು ಎಂಬೊತ್ತಿಗೆ ಮತ್ತೊಂದು ಆಘಾತ ಉಂಟಾಯಿತು.
ಬಿಬಿಕೆ 11 ಶುರುವಾಗಿ 80 ದಿನಗಳು ಆಗಿವೆ. ಆದರೂ ಬಲಿಷ್ಠ ಸ್ಪರ್ಧಿ ಎಂದು ಗುರುತಿಕೊಂಡಿರುವ ಗೋಲ್ಡ್ ಸುರೇಸ್ ಈವರೆಗೆ ಕ್ಯಾಪ್ಟನ್ ಆಗಿರಲಿಲ್ಲ. ಇದರ ಬಗ್ಗೆ ಸ್ವತಃ ಅವರೇ ಬೇಸರ ವ್ಯಕ್ತಪಡಿಸಿದ್ದರು. ನಾನು ಒಮ್ಮೆ ಈ ಮನೆಯ ನಾಯಕನಾಗಬೇಕು ಎಂದು ಹೇಳಿಕೊಂಡಿದ್ದರು. ಅದರಂತೆ ಕಳೆದ ವಾರ ಕ್ಯಾಪ್ಟನ್ಸಿ ಟಾಸ್ಕ್ನಲ್ಲಿ ಇವರು ಗೆದ್ದು ಮನೆಯ ನಾಯಕನಾದರು. ಈ ವಾರ ಪೂರ್ತಿ ಅವರ ಕ್ಯಾಪ್ಟನ್ಸಿ ಹೇಗಿರುತ್ತದೆ ಎಂದು ನೋಡಲು ಎಲ್ಲರೂ ಕಾದು ಕುಳಿತಿದ್ದರು.
ಆದರೆ, ಆ ಕನಸು ಕನಸಾಗಿಯೇ ಉಳಿದಿದೆ. ಈ ಹಿಂದಿನ ವಾರಗಳಲ್ಲಿ ಟಾಸ್ಕ್ ಆಡುವಾಗ ಅವರಿಗೆ ಗಾಯ ಆಗಿತ್ತು. ಕಾಲಿಗೆ ಪಟ್ಟಾಗಿದ್ದರಿಂದ ಅನೇಕ ಟಾಸ್ಕ್ನಿಂದ ಅವರು ಹೊರಗೆ ಉಳಿಯಬೇಕಾಗಿತ್ತು. ಆದರೆ ಈ ಎಲ್ಲ ಅಡೆತಡೆಗಳನ್ನು ದಾಟಿಕೊಂಡು ಬಂದು ಅವರು ಈ ವಾರ ಕ್ಯಾಪ್ಟನ್ ಪಟ್ಟ ಅಲಂಕರಿಸುವಲ್ಲಿ ಯಶಸ್ವಿ ಆಗಿದ್ದರು. ಆದರೆ, ಇದನ್ನು ಸಂಪೂರ್ಣವಾಗಿ ಅನುಭವಿಸುವ ಭಾಗ್ಯ ಇವರಿಗೆ ಇಲ್ಲದಂತಾಗಿದೆ.
ಗೋಲ್ಡ್ ಸುರೇಶ್ ಅವರಿಗೆ ಮನೆಯಿಂದ ಒಂದು ತುರ್ತು ಮೆಸೇಜ್ ಬಂದ ಕಾರಣದಿಂದ ಅವರು ಬಿಗ್ ಬಾಸ್ನಿಂದ ಹೊರಬಂದಿದ್ದಾರೆ. ಗೋಲ್ಡ್ ಸುರೇಶ್ ಕುಟುಂಬದಲ್ಲಿ ತುರ್ತು ಪರಿಸ್ಥಿತಿ ಉಂಟಾಗಿದೆ. ಹಾಗಾಗಿ ಅವರ ಅವಶ್ಯಕತೆ ಬಿಗ್ ಬಾಸ್ ಮನೆಯಿಂದ ಅವರ ಕುಟುಂಬದವರಿಗೆ ಜಾಸ್ತಿ ಇದೆ. ಹೆಚ್ಚು ತಡ ಮಾಡದೇ ವಸ್ತುಗಳನ್ನು ಪ್ಯಾಕ್ ಮಾಡಿಕೊಂಡು ಕೂಡಲೇ ಬಿಗ್ ಬಾಸ್ ಮನೆಯಿಂದ ಹೊರಗೆ ಬನ್ನಿ ಎಂದು ಬಿಗ್ ಬಾಸ್ ಸುರೇಶ್ಗೆ ಸೂಚನೆ ನೀಡಿದರು. ಕಷ್ಟಪಟ್ಟು ಯಾರಿಗೂ ನೋವು ಮಾಡದೆ ತನ್ನ ಆಟವಾಡುತ್ತಿದ್ದ ಸುರೇಶ್ ದಿಢೀರ್ ಮನೆತೊರೆದಿದ್ದು ಎಲ್ಲರಿಗೂ ಅಘಾತ ಉಂಟಾಗಿದೆ. ಸದ್ಯ ದೊಡ್ಮನೆಯಿಂದ ಹೊರಹೋಗಿರುವ ಇವರು ಪುನಃ ಬರುತ್ತಾರ ನೋಡಬೇಕಿದೆ.