Friday, 22nd November 2024

HMMA 2024: ಪ್ರತಿಷ್ಠಿತ ಅಂತಾರಾಷ್ಟ್ರೀಯ ಪ್ರಶಸ್ತಿಗೆ ಎ.ಆರ್‌.ರೆಹಮಾನ್‌ ನಾಮ ನಿರ್ದೇಶನ; ‘ಆಡುಜೀವಿತಂ’ ಚಿತ್ರದ ಸಂಗೀತಕ್ಕಾಗಿ ಈ ಗೌರವ

HMMA 2024

ತಿರುವನಂತಪುರಂ: ಸಂಗೀತ ಮಾಂತ್ರಿಕ ಎ.ಆರ್‌.ರೆಹಮಾನ್‌ (A.R. Rahman) ಮತ್ತೊಮ್ಮೆ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಮಿಂಚಲು ಸಜ್ಜಾಗಿದ್ದಾರೆ. ಅಮೆರಿಕದ ಪ್ರತಿಷ್ಠಿತ ಹಾಲಿವುಡ್‌ ಮ್ಯೂಸಿಕ್‌ ಇನ್‌ ಮೀಡಿಯಾ ಅವಾರ್ಡ್ಸ್‌ 2024 (HMMA 2024)ನಲ್ಲಿ ಅವರು 2 ವಿಭಾಗಗಳಲ್ಲಿ ನಾಮ ನಿರ್ದೇಶನಗೊಂಡಿದ್ದಾರೆ. ಈ ವರ್ಷ ತೆರೆಕಂಡ ಮಲಯಾಳಂನ ʼಆಡುಜೀವಿತಂ: ದಿ ಗೋಟ್‌ ಲೈಫ್‌ʼ (Aadujeevitham: The Goat Life) ಚಿತ್ರದಲ್ಲಿನ ಸಂಗೀತಕ್ಕಾಗಿ ಅವರ ಹೆಸರು ಪ್ರಶಸ್ತಿ ರೇಸ್‌ನಲ್ಲಿ ಕಾಣಿಸಿಕೊಂಡಿದೆ.

ಫೀಚರ್‌ ಚಿತ್ರದ ಹಾಡು (Song-Feature Film) ವಿಭಾಗದಲ್ಲಿ ಎ.ಆರ್‌.ರೆಹಮಾನ್‌ ಸಂಗೀತ ಸಂಯೋಜಿಸಿರುವ ʼಆಡುಜೀವಿತಂʼ ಸಿನಿಮಾದ ಪೆರಿಯೋನೆ ಸ್ಪರ್ಧಿಸುತ್ತಿದೆ. ಜತೆಗೆ ಇದೇ ಚಿತ್ರದ ಹಿನ್ನೆಲೆ ಸಂಗೀತಕ್ಕಾಗಿ ಸ್ವತಂತ್ರ ಸಿನಿಮಾದ ಸ್ಕೋರ್‌ (ವಿದೇಶಿ ಚಿತ್ರ) (Score-Independent Film (Foreign Language) ವಿಭಾಗದಲ್ಲಿ ಎ.ಆರ್‌.ರೆಹಮಾನ್‌ ನಾಮ ನಿರ್ದೇಶನಗೊಂಡಿದ್ದಾರೆ. ಮಲಯಾಳಂ ಸೂಪರ್‌ ಸ್ಟಾರ್‌ ಪೃಥ್ವಿರಾಜ್‌ ಸುಕುಮಾರನ್‌ ನಾಯಕನಾಗಿ ಕಾಣಿಸಿಕೊಂಡಿರುವ ʼಆಡುಜೀವಿತಂʼ ಚಿತ್ರಕ್ಕೆ ರಾಷ್ಟ್ರ ಚಲನಚಿತ್ರ ಪ್ರಶಸ್ತಿ ಪುರಸ್ಕೃತ ಬ್ಲೆಸಿ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಬೆನ್ಯಾಮಿನ್‌ ಅವರ 2008ರ ಇದೇ ಹೆಸರಿನ ಕಾದಂಬರಿ ಆಧರಿಸಿ ಈ ಚಿತ್ರವನ್ನು ನಿರ್ಮಿಸಲಾಗಿದೆ.

ಸಂತಸ ಹಂಚಿಕೊಂಡ ಚಿತ್ರತಂಡ

ಪ್ರತಿಷ್ಟಿತ ಎಚ್‌ಎಂಎಂಎ 2024 ಪ್ರಶಸ್ತಿಗೆ ನಾಮ ನಿರ್ದೇಶನಗೊಂಡಿರುವ ವಿಚಾರವನ್ನು ಚಿತ್ರತಂಡ ಘೋಷಿಸಿದೆ. ʼʼಪ್ರತಿಷ್ಟಿತ ಪ್ರಶಸ್ತಿಗೆ ನಮ್ಮ ಚಿತ್ರ ಆಯ್ಕೆಗೊಂಡಿರುವುದನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದೇವೆʼʼ ಎಂದು ಸಿನಿಮಾ ತಂಡ ಸೋಷಿಯಲ್‌ ಮೀಡಿಯಾದಲ್ಲಿ ಬರೆದುಕೊಂಡಿದೆ. ನ. 20ರಂದು ಅಮೆರಿಕದ ಲಾಸ್‌ ಏಂಲೀಸ್‌ನಲ್ಲಿ ಪ್ರಶಸ್ತಿ ಘೋಷಣೆಯಾಗಲಿದೆ.

ಏನಿದು ಎಚ್‌ಎಂಎಂಎ ಪ್ರಶಸ್ತಿ?

ಹಾಲಿವುಡ್‌ ಮ್ಯೂಸಿಕ್‌ ಇನ್‌ ಮೀಡಿಯಾ ಅಕಾಡೆಮಿ ಈ ಪ್ರಶಸ್ತಿಯನ್ನು ಪ್ರತಿವರ್ಷ ಪ್ರದಾನ ಮಾಡುತ್ತಿದೆ. ಸಿನಿಮಾ, ಟಿವಿ, ವಿಡಿಯೊ ಗೇಮ್ಸ್‌, ಟ್ರೈಲರ್‌, ಜಾಹೀರಾತು, ಸಾಕ್ಷ್ಯಚಿತ್ರ, ವಿಶೇಷ ಕಾರ್ಯಕ್ರಮ ಇತ್ಯಾದಿ ವಿಭಾಗಗಳಲ್ಲಿ ಅತ್ಯುತ್ತಮ ಸಂಗೀತಕ್ಕಾಗಿ ಪ್ರಶಸ್ತಿ ನೀಡಲಾಗುತ್ತದೆ. 2009ರಲ್ಲಿ ಇದನ್ನು ಆರಂಭಿಸಲಾಯಿತು.

ಪ್ರೇಕ್ಷಕರ ಮನಗೆದ್ದ ʼಆಡುಜೀವಿತಂʼ

ಈ ವರ್ಷದ ಮಾರ್ಚ್‌ 28ರಂದು ಮಲಯಾಳಂ, ಕನ್ನಡ ಜತೆಗೆ ಹಲವು ಭಾಷೆಗಳಲ್ಲಿ ʼಆಡುಜೀವಿತಂʼ ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಬಾಕ್ಸ್‌ ಆಫೀಸ್‌ನಲ್ಲಿ ಹಿಟ್‌ ಆಗುವುದರ ಜತೆಗೆ ವಿಮರ್ಶಕರ ಗಮನವನ್ನೂ ಸೆಳೆದಿದೆ. ಕೇರಳದ ಯುವಕನೊಬ್ಬ ಉದ್ಯೋಗ ಅರಸಿಕೊಂಡು ಕೊಲ್ಲಿ ದೇಶಕ್ಕೆ ಹೋಗಿ ಅಲ್ಲಿ ಕುರಿ, ಆಡು ಸಾಕುತ್ತ ಜೀತದಾಳಿನಂತೆ ಬದುಕುವ ಸತ್ಯ ಘಟನೆಯನ್ನು ಆಧರಿಸಿ ಈ ಚಿತ್ರವನ್ನು ತಯಾರಿಸಲಾಗಿದೆ. ಈ ಚಿತ್ರದಲ್ಲಿನ ಪೃಥ್ವಿರಾಜ್‌ ಅವರ ಅಭಿನಯಕ್ಕೆ ಪ್ರೇಕ್ಷಕರು ಮನ ಸೋತಿದ್ದಾರೆ.

ಬರೋಬ್ಬರಿ 9 ಕೇರಳ ಚಲನಚಿತ್ರ ರಾಜ್ಯ ಪ್ರಶಸ್ತಿಯನ್ನು ʼಆಡುಜೀವಿತಂʼ ಮುಡಿಗೇರಿಸಿಕೊಂಡಿದೆ. ಅತ್ಯುತ್ತಮ ನಟ (ಪೃಥ್ವಿರಾಜ್‌), ಅತ್ಯುತ್ತಮ ನಿರ್ದೇಶಕ (ಬ್ಲೆಸಿ) ಮುಂತಾದ ಪ್ರಮುಖ ಪ್ರಶಸ್ತಿ ಲಭಿಸಿದೆ. ಜತೆಗೆ ರಾಷ್ಟ್ರ ಪ್ರಶಸ್ತಿ ರೇಸ್‌ನಲ್ಲಿಯೂ ಪ್ರಬಲ ಪೈಪೋಟಿ ನೀಡುವ ಸೂಚನೆ ಸಿಕ್ಕಿದೆ. ʼಸ್ಲಂ ಡಾಗ್‌ ಮಿಲಿಯನೇರ್‌ʼ ಚಿತ್ರಕ್ಕಾಗಿ 2 ಆಸ್ಕರ್‌ ಪ್ರಶಸ್ತಿ ಮುಡಿಗೇರಿಸಿಕೊಂಡ ಎ.ಆರ್‌.ರೆಹಮಾನ್‌ ಇದೀಗ ಮತ್ತೊಮ್ಮೆ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಮಿಂಚಲು ಸಜ್ಜಾಗಿದ್ದಾರೆ.

ಈ ಸುದ್ದಿಯನ್ನೂ ಓದಿ: Highest-Paid Singer: ಈ ಸಿಂಗರ್‌ ಸಂಭಾವನೆ ಪ್ರತಿ ಹಾಡಿಗೆ 3 ಕೋಟಿ ರೂ.; ಸೋನು ನಿಗಂ, ಶ್ರೇಯಾ ಘೋಷಾಲ್‌ ಹಿಂದಿಕ್ಕಿದ ಗಾಯಕ ಯಾರು?