ಬೆಂಗಳೂರು: ಮಗುವಿಗೆ ತೊಟ್ಟಿಲು ಶಾಸ್ತ್ರ ಮಾಡಿದ ನಂತರ, ದಿವಂಗತ ಚಿರು ಸರ್ಜಾ ಪತ್ನಿ, ನಟಿ ಮೇಘನಾ ರಾಜ್ ಸರ್ಜಾ ಅವರು, ಮಗ ಹುಟ್ಟಿದ ಮೇಲೆ ಖುಶಿಯಾಗಿದ್ದೀನಿ ಎಂದು ಪ್ರತಿಕ್ರಿಯಿಸಿದ್ದಾರೆ.
ದಿ.ಚಿರಂಜೀವಿ ಸರ್ಜಾ ಹಾಗೂ ನಟಿ ಮೇಘನಾ ರಾಜ್ ಪುತ್ರನ ತೊಟ್ಟಿಲು ಶಾಸ್ತ್ರ ಅದ್ಧೂರಿಯಾಗಿ ನೆರವೇರಿದೆ. ಚಿರು ಕಳೆದು ಕೊಂಡು ದುಃಖದಲ್ಲಿದ್ದ ಸರ್ಜಾ ಕುಟುಂಬಕ್ಕೆ ಚಿರು ಮಗುವಿನ ಆಗಮನ ನೋವನ್ನು ಮರೆಸುನ ಸಂಭ್ರಮದ ಕ್ಷಣವಾಗಿದ್ದು, ಇದೀಗ ತೊಟ್ಟಿಲು ಶಾಸ್ತ್ರ ನೆರವೇರಿದೆ.
ಸುಂದರ್ ರಾಜ್ ಹಾಗೂ ಪ್ರಮಿಳಾ ಜೋಷಾಯ್ ನಿವಾಸದಲ್ಲಿ ಶಾಸ್ತ್ರೋಕ್ತವಾಗಿ ಚಿರು ಪುತ್ರನ ತೊಟ್ಟಿಲು ಶಾಸ್ತ್ರ ನೆರವೇರಿದ್ದು, ಕುಟುಂಬ ಸದಸ್ಯರು ಭಾಗಿಯಾಗಿದ್ದರು.
ಇನ್ನು ಮಗುವಿಗಾಗಿ ಗದಗ ಮಹಿಳಾ ಸಂಘದ ವತಿಯಿಂದ ಬಣ್ಣ ಬಣ್ಣದ ಚಿತ್ತಾರವುಳ್ಳ ವಿಶೇಷವಾದ ಹ್ಯಾಂಡ್ ಮೇಡ್ ತೊಟ್ಟಿಲು ನೀಡಲಾಗಿದ್ದು, ಅಭಿಮಾನಿಗಳು ನೀಡಿರುವ ಈ ತೊಟ್ಟಿಲಿನಲ್ಲಿಯೇ ತೊಟ್ಟಿಲು ಶಾಸ್ತ್ರ ನೆರವೇರಿಸಲಾಗಿದೆ.
ಸುದ್ದಿಗೋಷ್ಟಿಯಲ್ಲಿ ಮೇಘನಾರಾಜ್ ಸರ್ಜಾ ಭಾವುಕರಾಗಿ, ಕಣ್ಣೀರು ಹಾಕುತ್ತಲೇ ಮಾತು ಆರಂಭಿಸಿ, ನನ್ನ ಜೀವನಕ್ಕೆ ಹೊಸ ಅಧ್ಯಾಯ ಆರಂಭವಾಗಿದೆ. ಫೀನಿಕ್ಸ್ ರೀತಿ ಎದ್ದು ಬರುತ್ತೇನೆ ಅಂತಿದ್ದರು. ಚಿರುಗೆ ನೋವು, ಅಳು ನೋಡಲು ಇಷ್ಟ ಆಗುತ್ತಿರಲಿಲ್ಲ. ಚಿರುವನ್ನು ಮರೆಯುವುದು ಅಸಾಧ್ಯ. ಮಗು ನೋಡಿದಾಗೆಲ್ಲ ಚಿರು ನೆನಪಾಗುತ್ತಾರೆ. ಚಿರು ದುಃಖದ ದೃಶ್ಯ ನೋಡ್ತಾನೆ ಇರಲಿಲ್ಲ. ಚಿರು ಅಂದರೆ ನನಗೆ ಸಂತಸ ತರುತ್ತಿತ್ತು. ಚಿರು ಕನಸನ್ನು ನಾನು ನನಸು ಮಾಡುತ್ತೇನೆ. ಮಗು ಚಿರು ರೀತಿಯೇ ಇದೆ ಎಂದು ಎಲ್ಲ ಹೇಳುತ್ತಾರೆ. ನನ್ನ ಮಗನೇ ನನಗೆ ದೊಡ್ಡ ಶಕ್ತಿ ಎಂದು ಸಂತಸದಿಂದ ಹೇಳಿದರು.
ನನ್ನ ಅಪ್ಪ-ಅಮ್ಮನೇ ನನ್ನ ಬೆನ್ನೆಲುಬು. ಚಿರು ಬದುಕಿರಬೇಕಿತ್ತು ಅಂತ ತುಂಬಾ ಅನ್ನಿಸುತ್ತೆ. ನನ್ನನ್ನು ಸದಾ ಸಂತೋಷ ದಲ್ಲಿಡಲು ಪ್ರಯತ್ನಿಸಿದರು. ಚಿರು ಹೆಸರು ಗಳಿಸಿದ್ದು ಸಿನಿಮಾದಿಂದಲ್ಲ, ವ್ಯಕ್ತಿತ್ವದಿಂದ. ಮಗುವಿಗೆ ಶೀಘ್ರದಲ್ಲೇ ನಾಮಕರಣ ಮಾಡುತ್ತೇವೆ ಎಂದು ಹೇಳು ಮುಗುಳ್ನಕ್ಕರು.