ನವದೆಹಲಿ: ಬಹುಕೋಟಿ ರೂಪಾಯಿ ವಂಚನೆ ಆರೋಪ ಎದುರಿಸುತ್ತಿರುವ ಬೆಂಗಳೂರು ಮೂಲದ ಸುಕೇಶ್ ಚಂದ್ರಶೇಖರ್ ಜೊತೆಗಿನ ಅಕ್ರಮ ಹಣ ವರ್ಗಾವಣೆ ತಡೆ ಪ್ರಕರಣದ ಆರೋಪಿಗಳಲ್ಲಿ ಒಬ್ಬರಾಗಿರುವ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಮೇ 25 ರಿಂದ ಜೂನ್ 12 ರವರೆಗೆ ವಿದೇಶಕ್ಕೆ ತೆರಳಲು ದೆಹಲಿ ನ್ಯಾಯಾಲಯ ಅನುಮತಿ ನೀಡಿತು.
ಜಾಕ್ವೆಲಿನ್ ಅವರು ಐಐಎಫ್‌ಎ ಪ್ರಶಸ್ತಿ ಸಮಾರಂಭದಲ್ಲಿ ಭಾಗವಹಿಸಲು ಮೇ 25 ರಿಂದ ಮೇ 27 ರವರೆಗೆ ಅಬುಧಾಬಿಗೆ ಪ್ರಯಾಣಿಸಬೇಕೆಂದು ಹಾಗೂ ಚಲನಚಿತ್ರ ಚಿತ್ರೀಕರಣಕ್ಕಾಗಿ ಮೇ 28 ರಿಂದ ಜೂನ್ 12 ರವರೆಗೆ ಮಿಲನ್‌ಗೆ ಪ್ರಯಾಣಿಸಲು ಅನುಮತಿ ನೀಡುವಂತೆ ಅರ್ಜಿ ಸಲ್ಲಿಸಿದ್ದರು.
ನವೆಂಬರ್ 15 ರಂದು ನ್ಯಾಯಾಲಯ ಜಾಕ್ವೆಲಿನ್‌ಗೆ ಬಂಧನ ಪೂರ್ವ ಜಾಮೀನು ನೀಡಿತ್ತು. ಸೆಪ್ಟೆಂಬರ್ 26ರಂದು ನ್ಯಾಯಾಲಯ ಆಕೆಗೆ ಬಂಧನದಿಂದ ಮಧ್ಯಂತರ ರಕ್ಷಣೆ ನೀಡಿತ್ತು. ಪ್ರಕರಣದಲ್ಲಿ ಜಾಕ್ವೆಲಿನ್ ಮತ್ತು ಮತ್ತೊಬ್ಬ ಬಾಲಿವುಡ್ ನಟಿ ನೋರಾ ಫತೇಹಿ ಸಾಕ್ಷಿಯಾಗಿ ತಮ್ಮ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ. ಇದಕ್ಕೂ ಮೊದಲು ಜಾಕ್ವೆಲಿನ್‌ಗೆ ಸೇರಿದ 7.2 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಮತ್ತು ಸ್ಥಿರ ಠೇವಣಿಗಳನ್ನು ಇಡಿ ಜಪ್ತಿ ಮಾಡಿತ್ತು.
ಫೆಬ್ರವರಿಯಲ್ಲಿ, ಚಂದ್ರಶೇಖರ್ ಅವರನ್ನು ಬಾಲಿವುಡ್ ನಟರಿಗೆ ಪರಿಚಯಿಸಿದ ಆಪಾದಿತ ಸಹಾಯಕಿ ಪಿಂಕಿ ಇರಾನಿ ವಿರುದ್ಧ ಇಡಿ ತನ್ನ ಮೊದಲ ಪೂರಕ ಚಾರ್ಜ್‌ಶೀಟ್ ಸಲ್ಲಿಸಿತ್ತು. ಪಿಂಕಿ ಜಾಕ್ವೆಲಿನ್‌ಗೆ ದುಬಾರಿ ಉಡುಗೊರೆಗಳನ್ನು ಆಯ್ಕೆ ಮಾಡುತ್ತಿದ್ದರು.
ಪ್ರಕರಣದ ವಿವರ: ರೆಲಿಗೇರ್ ಎಂಟರ್‌ಪ್ರೈಸಸ್‌ನ ಮಾಜಿ ಪ್ರವರ್ತಕ ಶಿವಿಂದರ್ ಮೋಹನ್ ಸಿಂಗ್ ಅವರ ಪತ್ನಿ ಅದಿತಿ ಸಿಂಗ್ ಅವರಿಂದ ವಂಚನೆ ಮತ್ತು ಸುಲಿಗೆ ಮಾಡಿದ ಆರೋಪ ಹೊತ್ತಿರುವ ಸುಖೇಶ್ ಚಂದ್ರಶೇಖರ್ ವಿರುದ್ಧ ದೆಹಲಿ ಪೊಲೀಸ್‌ನ ಆರ್ಥಿಕ ಅಪರಾಧ ವಿಭಾಗ (ಇಒಡಬ್ಲ್ಯು) ದಾಖಲಿಸಿದ ಎಫ್‌ಐಆರ್ ಆಧರಿಸಿ ಇಡಿ ಪ್ರಕರಣ ದಾಖಲಿಸಿದೆ.