ಬೆಂಗಳೂರು: ನಟ ಪುನೀತ್ ರಾಜ್ ಕುಮಾರ್ ಗೆ ಮರಣೋತ್ತರ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಬೇಕು ಎಂಬುದಾಗಿ ಹಿರಿಯ ನಟ ಜಗ್ಗೇಶ್ ಆಗ್ರಹಿಸಿದ್ದಾರೆ.
ಈ ಕುರಿತಂತೆ ತಮ್ಮ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಸಜ್ಜನಿಕೆ ವ್ಯಕ್ತಿತ್ವ, ಸಮಾಜಮುಖಿ ಕಾರ್ಯ ಚಟುವಟಿಕೆ ಮೂಲಕ ಎಲ್ಲರಿಗೂ ಸ್ಫೂರ್ತಿಯಾಗಿದ್ದ ಪುನೀತ್ ಅವರು ಮಾದರಿಯಾಗಿ ಬದುಕಿದ್ದರು. ಕನ್ನಡ ಚಿತ್ರರಂಗಕ್ಕೆ ಅವರ ಕೊಡುಗೆ ಅಪಾರ. ಅನಾಥಾಶ್ರಮ, ಹೆಣ್ಣು ಮಕ್ಕಳಿಗೆ ಶಿಕ್ಷಣ ಸೇರಿದಂತೆ ಇನ್ನಿತರ ಚಟುವಟಿಕೆಯನ್ನು ಹಮ್ಮಿಕೊಂಡಿದ್ದರು.
ಕನ್ನಡ ಹಾಗೂ ಸ್ಥಳೀಯ ಸಂಸ್ಕೃತಿಗೆ ಒತ್ತನ್ನು ನೀಡುವ ಮೂಲಕ ಉತ್ತಮ ಚಿಂತನೆ ಹೊಂದಿದ್ದರು. ಅಲ್ಲದೆ ನೇತ್ರದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಅತಿ ಕಿರಿಯ ವಯಸ್ಸಿಗೆ ಅವರು ಇನ್ನಿಲ್ಲ ಎಂಬುದನ್ನು ನಂಬಲು ಸಾಧ್ಯವಾಗುತ್ತಿಲ್ಲ. ಅವರ ಸೇವೆಯನ್ನು ಪರಿಗಣಿಸಿ ಕರ್ನಾಟಕ ರಾಜ್ಯ ಸರ್ಕಾರವು ಈ ಸಾಲಿನ ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ಮರಣೋತ್ತರ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಬೇಕೆಂದು ಕೋರುತ್ತೇನೆ ಎಂದು ನಟ ಜಗ್ಗೇಶ್ ಹೇಳಿದ್ದಾರೆ.
ಜಿಮ್ ನಲ್ಲಿ ಕಸರತ್ತು ನಡೆಸುತ್ತಿದ್ದ ಸಂದರ್ಭದಲ್ಲಿ, ನಟ ಪುನೀತ್ ರಾಜ್ ಕುಮಾರ್ ಅಸ್ವಸ್ಥಗೊಂಡಿದ್ದರು. ತಮ್ಮ ಕುಟುಂಬ ವೈದ್ಯರ ಬಳಿಗೆ ಕರೆದೊಯ್ದು ತೋರಿಸಿದ್ದ ವೇಳೆ ಅವರಿಗೆ ಹೃದಯಾಘಾತ ಉಂಟಾಗಿತ್ತು. ವಿಕ್ರಂ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಿ ದರೂ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟರು.