Friday, 22nd November 2024

Jr NTR: ನಿಮಗಿಂತ ಹೆಚ್ಚು ನೋವು ನನಗಾಗಿದೆ; ಫ್ಯಾನ್ಸ್‌ ಬಳಿ ಜೂನಿಯರ್ ಎನ್‌ಟಿಆರ್ ಹೀಗೆ ಹೇಳಿದ್ದೇಕೆ?

Jr NTR

ಹೈದರಾಬಾದ್‌: ಟಾಲಿವುಡ್‌ ಸ್ಟಾರ್‌ ಜೂನಿಯರ್ ಎನ್‌ಟಿಆರ್ (Jr NTR) ಅಭಿನಯದ ‘ದೇವರ: ಪಾರ್ಟ್ 1’ (Devara: Part 1) ಚಿತ್ರದ ಮೇಲೆ ಬೆಟ್ಟದಷ್ಟು ನಿರೀಕ್ಷೆ ಇದೆ. ಬಾಕ್ಸ್‌ ಆಫೀಸ್‌ನಲ್ಲಿ ಧೂಳೆಬ್ಬಿಸಿದ ʼಆರ್‌.ಆರ್‌.ಆರ್‌.ʼ ಸಿನಿಮಾದ ಬಳಿಕ ಜೂನಿಯರ್ ಎನ್‌ಟಿಆರ್ ನಟನೆಯ ಚಿತ್ರ ಇದಾಗಿದ್ದು, ಅಭಿಮಾನಿಗಳ ಕುತೂಹಲ ಕೆರಳಿಸಿದೆ. ಅಲ್ಲದೆ ಈಗಾಗಲೇ ರಿಲೀಸ್‌ ಆಗಿರುವ ಟ್ರೈಲರ್‌, ಹಾಡುಗಳು ನಿರೀಕ್ಷೆಗಳನ್ನು ಇನ್ನಷ್ಟು ಹೆಚ್ಚಿಸಿದೆ. ಇದಕ್ಕೆ ಪುಷ್ಟಿ ನೀಡುವಂತೆ ಮಾಸ್‌ ನಿರ್ದೇಶಕ ಕೊರಟಾಲ ಶಿವ ಅವರೊಂದಿಗೆ ಎನ್‌ಟಿಆರ್ ಎರಡನೇ ಬಾರಿಗೆ ಕೈಜೋಡಿಸಿರುವುದು ಕೂಡ ಅಭಿಮಾನಿಗಳನ್ನು ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದೆ. ಇಷ್ಟೆಲ್ಲ ನಿರೀಕ್ಷೆ ಹುಟ್ಟು ಹಾಕಲು ಯಶಸ್ವಿಯಾಗಿರುವ ಚಿತ್ರತಂಡ ಕೊನೆ ಕ್ಷಣದಲ್ಲಿ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ.

ಅಷ್ಟಕ್ಕೂ ಆಗಿದ್ದೇನೆಂದರೆ ಭಾನುವಾರ (ಸೆಪ್ಟೆಂಬರ್‌ 22) ಸಂಜೆ ಹೈದರಾಬಾದ್‌ನ ನೊವೊಟೆಲ್‌ನಲ್ಲಿ ‘ದೇವರ: ಪಾರ್ಟ್ 1’ ಚಿತ್ರದ ಪ್ರೀ-ರಿಲೀಸ್ ಇವೆಂಟ್‌ಗೆ ವೇದಿಕೆ ಸಿದ್ಧವಾಗಿತ್ತು. ನಿರ್ದೇಶಕ ಕೊರಟಾಲ ಶಿವ, ನಾಯಕ ಜೂನಿಯರ್ ಎನ್‌ಟಿಆರ್‌ ಮತ್ತು ನಾಯಕಿ ಜಾನ್ವಿ ಕಪೂರ್, ವಿಶೇಷ ಅತಿಥಿಗಳಾದ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಮತ್ತು ನಿರ್ಮಾಪಕ ನಾಗ ವಂಶಿ ಆಗಮಿಸಿದ್ದರು. ಆದರೆ ಕಾರ್ಯಕ್ರಮ ಆರಂಭವಾಗುವ ಕೆಲವೇ ಗಂಟೆಗಳ ಮೊದಲು ಕಾರ್ಯಕ್ರಮವನ್ನೇ ರದ್ದುಗೊಳಿಸಲಾಯಿತು. ತಮ್ಮ ನೆಚ್ಚಿನ ನಟನನ್ನು ಕಣ್ತುಂಬಿಕೊಳ್ಳಲು ಆಗಮಿಸಿದ್ದ ನೂರಾರು ಅಭಿಮಾನಿಗಳು ನಿರಾಸೆಗೊಳಗಾದರು.

ಕಾರಣವೇನು?

ನಿರೀಕ್ಷೆ ಮಾಡಿದ್ದಕ್ಕಿಂತಲೂ ಅಧಿಕ ಸಂಖ್ಯೆಯಲ್ಲಿ ಅಭಿಮಾನಿಗಳು ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಆಗಮಿಸಿದ್ದರು. ಭದ್ರತಾ ಸಿಬ್ಬಂದಿಯಿಂದ ಅವರನ್ನು ನಿಯಂತ್ರಿಸುವುದೇ ಸವಾಲಾಯಿತು. ಹಾಗಾಗಿ ಪ್ರೀ-ರಿಲೀಸ್ ಇವೆಂಟ್ ಅನ್ನು ಆಯೋಜಕರು ರದ್ದು ಪಡಿಸಬೇಕಾಯಿತು. ಜನ ಸಂದಣಿಯಿಂದ ಅಳವಡಿಸಿದ್ದ ಬ್ಯಾರಿಕೇಡ್‌ ಕೂಡ ಮುರಿದು ಹೋಗಿತ್ತು. ಜತೆಗೆ ಬಿರುಸಾಗಿ ಸುರಿದ ಮಳೆಯೂ ಪರಿಸ್ಥಿತಿಯನ್ನು ಇನ್ನಷ್ಟು ಬಿಗಡಾಯಿಸಿತು.

ಜೂನಿಯರ್‌ ಎನ್‌ಟಿಆರ್‌ ಹೇಳಿದ್ದೇನು?

ಕಾರ್ಯಕ್ರಮ ರದ್ದಾದ ಹಿನ್ನಲೆಯಲ್ಲಿ ಜೂನಿಯರ್‌ ಎನ್‌ಟಿಆರ್‌ ಕೂಡ ಬೇಸರ ವ್ಯಕ್ತಪಡಿಸಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ವಿಡಿಯೊ ಪೋಸ್ಟ್‌ ಮಾಡಿದ ಅವರು, “ಈ ದಿನ ʼದೇವರʼ ಚಿತ್ರದ ಪ್ರೀ-ರಿಲೀಸ್ ಇವೆಂಟ್ ನಡೆಯಬೇಕಿತ್ತು. ಆದರೆ ರದ್ದಾಗಿದೆ. ಇದು ನಿಜಕ್ಕೂ ನೋವಿನ ಸಂಗತಿ. ಅವಕಾಶ ಸಿಕ್ಕಾಗಲೆಲ್ಲ ನಿಮ್ಮೊಂದಿಗೆ ಸಮಯ ಕಳೆಯಬೇಕು ಎಂದುಕೊಳ್ಳುತ್ತೇನೆ. ನಿಮ್ಮೆಲ್ಲರಿಗೂ ನಾನು ಸಾಕಷ್ಟು ವಿಚಾರಗಳನ್ನು ಹೇಳಬೇಕು ಎಂದುಕೊಂಡಿದ್ದೆ. ಭದ್ರತಾ ದೃಷ್ಟಿಯಿಂದ ಈ ಈವೆಂಟ್‌ ಅನ್ನು ರದ್ದು ಮಾಡಲಾಗಿದೆ. ನಿಮಗಿಂತ ಹೆಚ್ಚು ನೋವು ನನಗೆ ಆಗಿದೆ. ಇದು ನಿರ್ಮಾಪಕ, ಆಯೋಜಕರ ತಪ್ಪಲ್ಲ. ಇದಕ್ಕೆ ಯಾರನ್ನೂ ಹೊಣೆಗಾರರನ್ನಾಗಿ ಮಾಡಲು ಸಾಧ್ಯವಿಲ್ಲ. ಸೆ. 27ರಂದು ಎಲ್ಲರೂ ʼದೇವರʼ ಸಿನಿಮಾ ನೋಡಿ” ಎಂದು ಹೇಳಿದ್ದಾರೆ.

ನಾಯಕಿ ಜಾನ್ವಿ ಕಪೂರ್‌ ಕೂಡ ನೋವು ತೋಡಿಕೊಂಡಿದ್ದಾರೆ. ʼʼಶೀಘ್ರದಲ್ಲೇ ನಿಮ್ಮಲ್ಲೆರನ್ನು ಭೇಟಿಯಾಗುವ ವಿಸ್ವಾಸವಿದೆ. ಥಿಯೇಟರ್‌ಗಳನ್ನು ಸೆಪ್ಟೆಂಬರ್‌ 27ರಂದು ಸಿಗೋಣʼʼ ಎಂದು ಹೇಳಿದ್ದಾರೆ.

‘ದೇವರ’ ಸಿನಿಮಾವನ್ನು ಎರಡು ಪಾರ್ಟ್‌ಗಳಲ್ಲಿ ತೆರೆಗೆ ತರಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ. ಮೊದಲ ಭಾಗ ಸೆ. 27ರಂದು ಬಿಡುಗಡೆಯಾಗಲಿದೆ. 2025ರಲ್ಲಿ ಎರಡನೇ ಭಾಗ ರಿಲೀಸ್‌ ಆಗಲಿದೆ. ಬಾಲಿವುಡ್‌ ನಟಿ ಜಾನ್ವಿ ಕಪೂರ್‌ ಅಭಿನಯದ ಮೊದಲ ತೆಲುಗು ಚಿತ್ರ ಇದು ಎನ್ನುವುದು ಮತ್ತೊಂದು ವಿಶೇಷ. ಜತೆಗೆ ಬಾಲಿವುಡ್‌ ನಟ ಸೈಫ್‌ ಆಲಿ ಖಾನ್‌ ವಿಲನ್‌ ಪಾತ್ರದಲ್ಲಿ ಅಬ್ಬರಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Parvati Nair: ಕೆಲಸದವನ ಮೇಲೆ ಹಲ್ಲೆ: ನಟಿ ಪಾರ್ವತಿ ನಾಯರ್ ವಿರುದ್ಧ ಎಫ್‌ಐಆರ್