Thursday, 12th December 2024

Kajal Aggarwal: ಸ್ಟಾರ್‌ ನಟ, ನಿರ್ದೇಶಕನ ಚಿತ್ರದೊಂದಿಗೆ ಬಾಲಿವುಡ್‌ಗೆ ಭರ್ಜರಿ ಕಂಬ್ಯಾಕ್‌ ಮಾಡಿದ ಕಾಜಲ್ ಅಗರ್​ವಾಲ್‌

Kajal Aggarwal

ಮುಂಬೈ: ದಕ್ಷಿಣ ಭಾರತದ ಜನಪ್ರಿಯ ನಟಿ, ಬಹುಭಾಷಾ ಕಲಾವಿದೆ ಕಾಜಲ್ ಅಗರ್​ವಾಲ್ (Kajal Aggarwal) ಬಹು ದಿನಗಳ ಬಳಿಕ ಸ್ಟಾರ್‌ ಚಿತ್ರವೊಂದನ್ನು ಒಪ್ಪಿಕೊಂಡಿದ್ದು, ಅಭಿಮಾನಿಗಳಿಗೆ ಭರ್ಜರಿ ಖುಷಿಯ ಸುದ್ದಿಯೊಂದನ್ನು ನೀಡಿದ್ದಾರೆ. ಆ ಮೂಲಕ 3 ವರ್ಷಗಳ ಬಳಿಕ ಬಾಲಿವುಡ್‌ಗೆ ಕಂಬ್ಯಾಕ್‌ ಮಾಡಿದ್ದಾರೆ. ಅದೂ ಸೂಪರ್‌ ಸ್ಟಾರ್‌ ಚಿತ್ರದಲ್ಲಿ ಎನ್ನುವುದು ವಿಶೇಷ. ಹಾಗಾದರೆ ಯಾವ ಚಿತ್ರದಲ್ಲಿ ಕಾಜಲ್‌ ಅಭಿನಯಿಸುತ್ತಿದ್ದಾರೆ? ನಾಯಕ ಯಾರು? ನಿಮ್ಮೆಲ್ಲ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

ದಕ್ಷಿಣ ಭಾರತದ ಜನಪ್ರಿಯ ನಿರ್ದೇಶಕ ಎ.ಆರ್‌.ಮುರುಗದಾಸ್‌ (A.R. Murugadoss) ಮೊದಲ ಬಾರಿಗೆ ಸಲ್ಮಾನ್‌ ಖಾನ್‌ (Salman Khan)ಗೆ ಆ್ಯಕ್ಷನ್‌ ಕಟ್‌ ಹೇಳುತ್ತಿರುವ ಚಿತ್ರ ʼಸಿಖಂದರ್‌ʼ (Sikandar). ಸಲ್ಲುಗೆ ಜೋಡಿಯಾಗಿ ಕನ್ನಡತಿ ರಶ್ಮಿಕಾ ಮಂದಣ್ಣ (Rashmika Mandanna) ಕಾಣಿಸಿಕೊಳ್ಳುತ್ತಿದ್ದಾರೆ. ಈ ಇಬ್ಬರು ಈಗಾಗಲೇ ಆರಂಭವಾಗಿರುವ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಈ ಮಧ್ಯೆ ಕಾಜಲ್‌ ಅಗರ್‌ವಾಲ್‌ ಚಿತ್ರತಂಡವನ್ನು ಸೇರಿದ್ದಾರೆ.

ಹೌದು, ಸಲ್ಮಾನ್‌-ರಶ್ಮಿಕಾ ನಟನೆಯ ʼಸಿಖಂದರ್‌ʼನಲ್ಲಿ ಕಾಜಲ್‌ ಅಗರ್‌ವಾಲ್‌ ಕೂಡ ನಟಿಸುತ್ತಿದ್ದಾರೆ. ಇಬ್ಬರು ನಾಯಕಿಯರ ಜೊತೆ ಸಲ್ಮಾನ್‌ ರೊಮ್ಯಾನ್ಸ್‌ ನಡೆಸಲಿದ್ದಾರೆ. ಈ ಮಾಹಿತಿಯನ್ನು ಸ್ವತಃ ಕಾಜಲ್‌ ಅಗರ್‌ವಾಲ್‌ ಅವರೇ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

ಮೊದಲ ಕಾಂಬಿನೇಷನ್‌

ಸಾಜಿದ್​ ನಾಡಿಯಾವಾಲ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ʼಸಿಖಂದರ್‌ʼ ಚಿತ್ರ ಹಲವು ಪ್ರಥಮಗಳಿಗೆ ಸಾಕ್ಷಿಯಾಗುತ್ತಿದೆ. ತಮಿಳು ಮತ್ತು ಹಿಂದಿಯ ʼಘಜನಿʼ, ತಮಿಳಿನ ʼ7 ಆಮ್ ಅರಿವುʼ, ʼತುಪಾಕಿʼ, ʼಕತ್ತಿʼ, ʼದರ್ಬಾರ್‌ʼ, ಹಿಂದಿಯ ʼಹಾಲಿ ಡೇʼ, ತೆಲುಗಿನ ʼಸ್ಪೈಡರ್‌ʼ ಮುಂತಾದ ಹಿಟ್‌ ಚಿತ್ರಗಳಿಗೆ ಆ್ಯಕ್ಷನ್‌ ಕಟ್‌ ಹೇಳಿದ್ದ ಎ.ಆರ್‌.ಮುರುಗದಾಸ್‌ ಮೊದಲ ಬಾರಿ ಸಲ್ಮಾನ್‌ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಅಲ್ಲದೆ ರಶ್ಮಿಕಾ ಮತ್ತು ಕಾಜಲ್‌ ಮೊದಲ ಬಾರಿಗೆ ಸಲ್ಮಾನ್‌ ಖಾನ್‌ ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರೆ. 2025ರ ಈದ್‌ ವೇಳೆಗೆ ಈ ಸಿನಿಮಾ ಬಿಡುಗಡೆಯಾಗಲಿದೆ.

ಒಂದು ಕಾಲದಲ್ಲಿ ದಕ್ಷಿಣ ಭಾರತದ ಚಿತ್ರರಂಗ ಆಳಿದ್ದ ಕಾಜಲ್‌ ಮದುವೆ, ಮಗುವಾದ ಬಳಿಕ ಬಣ್ಣದ ಲೋಕದಿಂದ ಕೆಲ ಕಾಲ ಬ್ರೇಕ್‌ ತೆಗೆದುಕೊಂಡಿದ್ದರು. 2020ರಲ್ಲಿ ಅವರು ಗೌತಮ್‌ ಕಿಚ್ಲು ಎಂಬವರನ್ನು ವರಿಸಿದ್ದರು. ಸದ್ಯ ಅವರು ಮತ್ತೆ ಸಕ್ರೀಯರಾಗಿದ್ದಾರೆ. ಇತ್ತೀಚೆಗೆ ಕಾಜಲ್‌ ಅಭಿನಯದ ʼಸತ್ಯಭಾಮʼ ತೆಲುಗು ಚಿತ್ರ ತೆರೆಕಂಡಿತ್ತು. ಆದರೆ ಇದು ಬಾಕ್ಸ್‌ ಆಫೀಸ್‌ನಲ್ಲಿ ಮಕಾಟೆ ಮಲಗಿತ್ತು. ಸದ್ಯ ಅವರು ಹಿಂದಿಯ ʼಉಮಾʼ, ʼಸಿಖಂದರ್‌ʼ, ತಮಿಳಿನ ʼಇಂಡಿಯನ್‌ 3ʼ, ತೆಲುಗಿನ ʼಕಣ್ಣಪ್ಪʼ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ.

ಕಾಲಿವುಡ್‌ನಲ್ಲಿಯೂ ಆ್ಯಕ್ಷನ್‌ ಕಟ್‌

ಸದ್ಯ ಮುರುಗದಾಸ್‌ ಕಾಲಿವುಡ್‌ ಚಿತ್ರವೊಂದನ್ನು ಕೈಗೆತ್ತಿಕೊಂಡಿದ್ದಾರೆ. ಶಿವ ಕಾರ್ತಿಕೇಯನ್‌ ಅಭಿನಯದ ಈ ಆ್ಯಕ್ಷನ್‌ ಎಂಟರ್‌ಟೈನರ್‌ನಲ್ಲಿ ನಾಯಕಿಯಾಗಿ ಕನ್ನಡತಿ ರುಕ್ಮಿಣಿ ವಸಂತ್‌ ನಟಿಸುತ್ತಿದ್ದಾರೆ. ವಿಶೇಷ ಎಂದರೆ ಮಲಯಾಳಂ ಸೂಪರ್‌ ಸ್ಟಾರ್‌ ಮೋಹನ್‌ಲಾಲ್‌ ಪ್ರಧಾನ ಪಾತ್ರದಲ್ಲಿ ನಟಿಸಲಿದ್ದಾರೆ. ಜತೆಗೆ ಬಾಲಿವುಡ್‌ನ ವಿದ್ಯುತ್ ಜಮ್ವಾಲ್ ಕೂಡ ಅಭಿನಯಿಸಲಿದ್ದಾರೆ ಎನ್ನಲಾಗುತ್ತಿದೆ.

ಈ ಸುದ್ದಿಯನ್ನೂ ಓದಿ: Bigg Boss Kannada: ಶೀಘ್ರದಲ್ಲಿ ಬಿಗ್‌ಬಾಸ್‌ ಕನ್ನಡ ಸೀಸನ್‌ 11 ಆರಂಭ; ಪ್ರೋಮೊ ಔಟ್‌