Thursday, 12th December 2024

Kangana Ranaut: ಜಯಲಲಿತಾ, ಇಂದಿರಾ ಗಾಂಧಿ ಬಳಿಕ ಈ ರಾಜಕಾರಣಿ ಪಾತ್ರದತ್ತ ಕಂಗನಾ ಚಿತ್ತ

Kangana Ranaut

ಮುಂಬೈ: ಬಾಲಿವುಡ್‌ ನಟಿ, ಸಂಸದೆ ಕಂಗನಾ ರಾಣಾವತ್‌ (Kangana Ranaut) ನಿರ್ದೇಶಿಸಿ, ನಟಿಸಿರುವ ʼಎಮರ್ಜೆನ್ಸಿʼ (Emergency) ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿ (Indira Gandhi) ಅವರ ಜೀವನವನ್ನಾಧರಿಸಿದ ಈ ಸಿನಿಮಾ ಈಗಾಗಲೇ ಹಲವರ ಗಮನ ಸೆಳೆದಿದ್ದು, ಸೆಪ್ಟೆಂಬರ್‌ 6ರಂದು ಬಿಡುಗಡೆಯಾಗಬೇಕಿದೆ. ಈ ಮಧ್ಯೆ  ಚಿತ್ರ ಬಿಡುಗಡೆಗೆ ಕೆಲವು ಸಂಘಟನೆಗಳು ಬೆದರಿಕೆಯನ್ನೂ ಒಡ್ಡಿವೆ. ಹಲವು ಸಿಖ್‌ ಸಂಘಟನೆಗಳು ಚಿತ್ರ ಬಿಡುಗಡೆಯನ್ನು ವಿರೋಧಿಸಿದರೆ, ಸೆನ್ಸಾರ್‌ ಮಂಡಳಿ ಇನ್ನೂ ಹಸಿರು ನಿಶಾನೆ ತೋರಿಲ್ಲ. ಈ ಎಲ್ಲದರ ಬಗ್ಗೆ ಮಾತನಾಡಿರುವ ಕಂಗನಾ ರಾಣಾವತ್‌ ಹಲವು ಆಸಕ್ತಿದಾಯಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

2021ರಲ್ಲಿ ತೆರೆಕಂಡ ʼತಲೈವಿʼ (Thalaivii) ತಮಿಳು ಸಿನಿಮಾದಲ್ಲಿ ಕಂಗನಾ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ, ಕರ್ನಾಟಕ ಮೂಲದ ರಾಜಕಾರಣಿ ಜೆ.ಜಯಲಲಿತಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಇಂದಿರಾ ಗಾಂಧಿ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಮುಂದೆ  ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿ ಪಾತ್ರದಲ್ಲಿ ನಟಿಸಬೇಕು ಎನ್ನುವ ಬಯಕೆ ಇದೆ ಎಂದು ಅವರು ತಿಳಿಸಿದ್ದಾರೆ.

https://www.instagram.com/reel/C_VBsLro5ao/?utm_source=ig_web_copy_link&igsh=MzRlODBiNWFlZA==

ಕಂಗನಾ ಹೇಳಿದ್ದೇನು?

ʼʼಜಯಲಲಿತಾ, ಝಾನ್ಸಿ ರಾಣಿ ಲಕ್ಷ್ಮೀಬಾಯಿ ಮತ್ತು ಇಂದಿರಾ ಗಾಂಧಿ ಪಾತ್ರದಲ್ಲಿ ಅಭಿನಯಿಸಿದ್ದೇನೆ. ನಾನು ಎಂದಿಗೂ ಇಂದಿರಾ ಗಾಂಧಿಯಾಗಿ ನಟಿಸಲು ಬಯಸಲಿಲ್ಲ. ಆದರೆ ಅನಿವಾರ್ಯವಾಗಿ ಈ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆʼʼ ಎಂದು ಹೇಳಿದ್ದಾರೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಬಿಎಸ್‌ಪಿ ನಾಯಕಿ ಮಾಯಾವತಿ ಪೈಕಿ ಮುಂದೆ ಯಾರ ಪಾತ್ರದಲ್ಲಿ ಕಾಣಿಸಿಕೊಳ್ಳಲು ಬಯಸುತ್ತೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಕಂಗನಾ, ʼʼಕಲಾವಿದರಿಗೆ ಯಾವ ಪಾತ್ರವೂ ಅಸಾಧ್ಯವಲ್ಲ. ನಿರ್ದೇಶಕರು ಬಯಸಿದ ಪಾತ್ರ ಮಾಡಲು ನಾವು ತಯಾರಿರುತ್ತೇವೆ. ಈ ಪೈಕಿ ನಾನು ಮಾಯಾವತಿ ಪಾತ್ರದಲ್ಲಿ ನಟಿಸಲು ಹೆಚ್ಚು ಇಷ್ಟಪಡುತ್ತೇನೆʼʼ ಎಂದು ಹೇಳಿದ್ದಾರೆ.

ಪ್ರಮಾಣ ಪತ್ರ ಸಿಕ್ಕಿಲ್ಲ

ಮಾಜಿ ಪ್ರದಾನಿ ಇಂದಿರಾ ಗಾಂಧಿ ಅವರು 1975-1977ರ ನಡುವೆ 21 ತಿಂಗಳ ಕಾಲ ದೇಶದಲ್ಲಿ ಹೇರಿದ್ದ ತುರ್ತು ಪರಿಸ್ಥಿತಿಯ ಮೇಲೆ ʼಎಮರ್ಜೆನ್ಸಿʼ ಚಿತ್ರ ಬೆಳಕು ಚೆಲ್ಲಲಿದೆ. ಕಂಗನಾ ರಾಣಾವತ್‌ ನಿರ್ದೇಶನದ ಈ ಸಿನಿಮಾದಲ್ಲಿ ಸತೀಶ್‌ ಕೌಶಿಕ್‌, ಅನುಪಮ್‌ ಖೇರ್‌, ಶ್ರೇಯಸ್‌ ತಲ್ಪಾಡೆ ಮತ್ತು ಮಹಿಮಾ ಚೌಧರಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಮಧ್ಯೆ ಸೆನ್ಸಾರ್‌ ಮಂಡಳಿ ಇನ್ನೂ ಪ್ರಮಾಣ ಪತ್ರ ನೀಡದಿರುವುದು ಚಿತ್ರದ ಬಿಡುಗಡೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

ಕಂಗನಾ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದರಿಂದ ಸಿನಿಮಾ ಬಿಡುಗಡೆ ಹಲವು ಬಾರಿ ಮುಂದೂಡಿ ಸೆಪ್ಟೆಂಬರ್‌ 6ಕ್ಕೆ ಬಂದು ನಿಂತಿತ್ತು. ಆದರೆ ಇನ್ನೂ ಸೆನ್ಸಾರ್‌ ಮಂಡಳಿಯ ಸರ್ಟಿಫಿಕೆಟ್‌ ಲಭಿಸದೇ ಇರುವುದು ಚಿತ್ರತಂಡಕ್ಕೆ ಮತ್ತೆ ಆತಂಕ ತಂದಿತ್ತಿದೆ. ಈಗಾಗಲೇ ಬಿಡುಗಡೆಯಾಗಿರುವ ಟ್ರೈಲರ್‌ ಸಿನಿ ರಸಿಕರ ಗಮನ ಸೆಳೆದಿದ್ದು, ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚಿಸಿದೆ. ಚಿತ್ರ ಬಿಡುಗಡೆಗಾಗಿ ಕೋರ್ಟ್‌ ಮೆಟ್ಟಿಲೇರಲೂ ಸಿದ್ದ ಎಂದಿರುವ ಕಂಗನಾ ಈಗಾಗಲೇ ಕಾನೂನು ಹೋರಾಟದ ಸುಳಿವು ನೀಡಿದ್ದಾರೆ.