Wednesday, 23rd October 2024

Kanguva First Review: ಬಿಡುಗಡೆ ಮುನ್ನವೇ ಹೊರಬಿತ್ತು ʼಕಂಗುವಾʼ ರಿವ್ಯೂ; ಹೇಗಿದೆ ಕಾಲಿವುಡ್‌ ಸ್ಟಾರ್‌ ಸೂರ್ಯ ಸಿನಿಮಾ?

Kanguva First Review

ಚೆನ್ನೈ: ಈ ವರ್ಷದ ಬಹು ನಿರೀಕ್ಷಿತ ಚಿತ್ರಗಳಲ್ಲಿ ತಮಿಳಿನ ʼಕಂಗುವʼ (Kanguva) ಕೂಡ ಒಂದು. ಕಾಲಿವುಡ್‌ ಸೂಪರ್‌ ಸ್ಟಾರ್‌ ಸೂರ್ಯ (Suriya) ಅಭಿನಯದ ಈ ಸಿನಿಮಾ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ತೆರೆ ಕಾಣಲಿದ್ದು, ಈಗಾಗಲೇ ಪೋಸ್ಟರ್‌, ಟ್ರೈಲರ್‌ ರಿಲೀಸ್‌ ಆಗಿ ಕುತೂಹಲ ಕೆರಳಿಸಿದೆ. 300 ಕೋಟಿ ರೂ. ವೆಚ್ಚದಲ್ಲಿ ಬಹು ಅದ್ಧೂರಿಯಾಗಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ತಮಿಳಿನ ಜನಪ್ರಿಯ ನಿರ್ದೇಶಕ ಶಿವ (Siva) ಆ್ಯಕ್ಷನ್‌ ಕಟ್ ಹೇಳಿದ್ದಾರೆ. ತಮಿಳಿನ ಜತೆಗೆ ವಿವಿಧ ಭಾಷೆಗಳಲ್ಲಿ ಈ ಸಿನಿಮಾ ನವೆಂಬರ್‌ 14ರಂದು ಬಿಡುಗಡೆಯಾಗಲಿದೆ. ಇದಕ್ಕಾಗಿ ಚಿತ್ರತಂಡ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದೆ. ಬಿಡುಗಡೆಗೆ 20 ದಿನ ಇರುವ ಮೊದಲೇ ಇದೀಗ ಚಿತ್ರದ ವಿಮರ್ಶೆ ಹೊರ ಬಿದ್ದಿದೆ (Kanguva First Review).

ಮಕ್ಕಳ ದಿನವಾದ ನವೆಂಬರ್‌ 14ರಂದು ಆ್ಯಕ್ಷನ್‌ ಫ್ಯಾಕ್ಡ್‌ ʼಕಂಗುವʼ ರಿಲೀಸ್‌ ಆಗಲಿದೆ. ಹೀಗಾಗಿ ಪ್ರಮೋಷನ್‌ ಕಾರ್ಯ ಭರದಿಂದ ಸಾಗಿದೆ. ಸಿನಿಮಾದ ಸಾಹಿತಿ ಮದನ್‌ ಕರ್ಕೆ ಚಿತ್ರವನ್ನು ಈಗಾಗಲೇ ವೀಕ್ಷಿಸಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ. ಅವರು ಈ ಸಿನಿಮಾದ ಚಿತ್ರಕಥೆಯಲ್ಲಿಯೂ ತೊಡಗಿಸಿಕೊಂಡಿದ್ದಾರೆ.

ಹೇಗಿದೆ ʼಕಂಗುವʼ?

ಚಿತ್ರ ವೀಕ್ಷಿಸಿದ ಮದನ್‌ ಈ ಬಗ್ಗೆ ಹೀಗೆ ಬರೆದುಕೊಂಡಿದ್ದಾರೆ: ʼʼಕಂಗುವʼ ಚಿತ್ರವನ್ನು ಸಂಪೂರ್ಣವಾಗಿ ವೀಕ್ಷಿಸಿದೆ. ಡಬ್ಬಿಂಗ್‌ ವೇಳೆಯಲ್ಲಿಯೂ ನಾನು ಸಿನಿಮಾವನ್ನು ಹಲವು ಬಾರಿ ನೋಡಿದ್ದೆ. ಪ್ರತಿ ಬಾರಿ ನೋಡಿದಾಗಲೂ ಚಿತ್ರ ಹೊಸತನದಿಂದ ಕೂಡಿದೆ ಎನಿಸುತ್ತಿದೆʼʼ ಎಂದು ಅವರು ಹೇಳಿದ್ದಾರೆ.

“ಪ್ರತಿ ದೃಶ್ಯದ ವೈಭವ, ಅದರಲ್ಲಿ ಅಡಗಿರುವ ಕಲೆ, ಕಾಡುವ ಕಥೆ ಮತ್ತು ಸಂಗೀತ ನಿಮ್ಮನ್ನು ಬೇರೆಯದೇ ಲೋಕಕ್ಕೆ ಕೊಂಡೊಯ್ಯುತ್ತದೆ. ಅದರಲ್ಲಿಯೂ ಸೂರ್ಯ ಅದ್ಭುತವಾಗಿ ನಟಿಸಿದ್ದಾರೆ. ಅವರ ಅತ್ಯುತ್ತಮ ಚಿತ್ರಗಳಲ್ಲಿ ಇದೂ ಒಂದುʼʼ ಎಂದು ಹೇಳಿ ಕುತೂಹಲವನ್ನು ಇನ್ನೂ ಹೆಚ್ಚಿಸಿದ್ದಾರೆ. ಈ ಮೂಲಕ ಚಿತ್ರದ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಾಗುವಂತೆ ಮಾಡಿದ್ದಾರೆ.

ಕೆ.ಇ.ಜ್ಞಾನವೇಲ್‌ ರಾಜಾ ಅವರ ಸ್ಟುಡಿಯೋ ಗ್ರೀನ್‌ ಈ ಚಿತ್ರವನ್ನು ನಿರ್ಮಿಸಿದ್ದು, ಬಾಲಿವುಡ್‌ ಬೆಡಗಿ ದಿಶಾ ಪಠಾಣಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಕಾಲಿವುಡ್‌ನ ಮೊದಲ ಚಿತ್ರದಲ್ಲೇ ಸೂರ್ಯನಿಗೆ ಜೋಡಿಯಾಗುವ ಅವಕಾಶ ಅವರಿಗೆ ಒಲಿದಿದ್ದು,ಈ ಬಗ್ಗೆ ಸಾಕಷ್ಟು ಕನಸು ಕಟ್ಟಿಕೊಂಡಿದ್ದಾರೆ. ಇನ್ನು ಬಾಲಿವುಡ್‌ನ ಬಾಬ್ಬಿ ಡಿಯೋಲ್‌ ವಿಲನ್‌ ಪಾತ್ರದಲ್ಲಿ ಅಬ್ಬರಿಸಿದ್ದಾರೆ. ದೇವಿ ಶ್ರೀ ಪ್ರಸಾದ್‌ ಸಂಗೀತ ಸಂಯೋಜಿಸಿದ್ದಾರೆ.

ಗಮನ ಸೆಳೆದ ಟ್ರೈಲರ್‌

ಟ್ರೈಲರ್‌ನಲ್ಲಿನ ಭರ್ಜರಿ ಸಾಹಸ ದೃಶ್ಯಗಳು ಸೂರ್ಯನ ಅಭಿಮಾನಿಗಳ ಗಮನ ಸೆಳೆದಿದೆ. ಬುಡಕಟ್ಟು ಜನರ ದೃಶ್ಯದೊಂದಿಗೆ ಟ್ರೈಲರ್‌ ಆರಂಭವಾಗುತ್ತದೆ. ಸೂರ್ಯನ ಪಾತ್ರವನ್ನು ಉಗ್ರ ಡೇರ್‌ಡೆವಿಲ್ ಎಂದು ಚಿತ್ರಿಸಲಾಗಿದೆ. ಅವರು ವಿವಿಧ ಶೇಡ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅದರಲ್ಲಿಯೂ ನದಿಯಲ್ಲಿ ಬೃಹತ್‌ ಗಾತ್ರದ ಮೊಸಳೆಯೊಂದಿಗೆ ಸೆಣಸಾಡುವ ದೃಶ್ಯ ಮೈನವಿರೇಳಿಸುವಂತಿದೆ. ರಜನಿಕಾಂತ್‌ ಅಭಿನಯದ ʼಅಣ್ಣಾತೆʼ, ಅಜಿತ್‌ ನಟನೆಯ ʼವೀರಂʼ, ʼವೇದಾಲಂʼ, ʼವಿವೇಗಂʼ, ʼವಿಶ್ವಾಸಂʼ ಮೊದಲಾದ ಸೂಪರ್‌ ಹಿಟ್‌ ಚಿತ್ರಗಳನ್ನು ನಿರ್ದೇಶಿಸಿರುವ ಶಿವ ಇದೇ ಮೊದಲ ಬಾರಿಗೆ ಸೂರ್ಯನೊಂದಿಗೆ ಕೈ ಜೋಡಿಸಿರುವುದರಿಂದ ಸೆಟ್ಟೇರಿದಾಗಿನಿಂದಲೂ ನಿರೀಕ್ಷೆ ಮೂಡಿಸಿದೆ. ಟ್ರೈಲರ್‌ ನೋಡಿಯೇ ಫಿದಾ ಆಗಿದ್ದ ಸೂರ್ಯ ಫ್ಯಾನ್ಸ್‌ ಇದೀಗ ಮೊದಲ ವಿಮರ್ಶೆ ಕೇಳಿ ಚಿತ್ರಕ್ಕಾಗಿ ತುದಿಗಾಲಿನಲ್ಲಿ ನಿಂತಿದ್ದಾರೆ. 3ಡಿಯಲ್ಲಿಯೂ ತೆರೆ ಕಾಣಲಿದೆ.

ಈ ಸುದ್ದಿಯನ್ನೂ ಓದಿ: Prabhas Birthday : ಆ್ಯಕ್ಷನ್‌ ಹೀರೊ ಪ್ರಭಾಸ್‌, ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಬೆಳೆದು ಬಂದಿದ್ದು ಹೇಗೆ? ಇಲ್ಲಿದೆ ಕಂಪ್ಲೀಟ್ ಡೀಟೆಲ್‌