Monday, 18th November 2024

Kantara Chapter 1: ರಿಷಬ್‌ ಶೆಟ್ಟಿ ಫ್ಯಾನ್ಸ್‌ಗೆ ಮತ್ತೊಂದು ಸರ್‌ಪ್ರೈಸ್‌ ನೀಡಿದ ಹೊಂಬಾಳೆ ಫಿಲ್ಮ್ಸ್‌; ‘ಕಾಂತಾರ: ಚಾಪ್ಟರ್‌ 1’ ಟೀಸರ್‌ ಔಟ್‌

Kantara Chapter 1

ಬೆಂಗಳೂರು: ಭಾನುವಾರ (ನ. 17) ‘ಕಾಂತಾರ: ಚಾಪ್ಟರ್‌ 1’ (Kantara Chapter 1) ರಿಲೀಸ್‌ ಡೇಟ್‌ ಅನೌನ್ಸ್‌ ಮಾಡಿದ್ದ ಹೊಂಬಾಳೆ ಫಿಲ್ಮ್ಸ್‌ (Hombale Films) ಸೋಮವಾರ (ನ. 18) ಮತ್ತೊಂದು ಸರ್‌ಪ್ರೈಸ್‌ ನೀಡಿದ್ದು, ಫಸ್ಟ್‌ ಲುಕ್‌ ಟೀಸರ್‌ ಬಿಡುಗಡೆ ಮಾಡಿದೆ. ಡಿವೈನ್‌ ಸ್ಟಾರ್‌ ರಿಷಬ್‌ ಶೆಟ್ಟಿ (Rishab Shetty) ನಟಿಸಿ, ನಿರ್ದೇಶಿಸುತ್ತಿರುವ ಈ ಬಹು ನಿರೀಕ್ಷಿತ ಕನ್ನಡದ ಪ್ಯಾನ್‌ ಇಂಡಿಯಾ ಚಿತ್ರ ಟೀಸರ್‌ ಮೂಲಕ ಮತ್ತೊಮ್ಮೆ ಅಭಿಮಾನಿಗಳ ಗಮನ ಸೆಳೆದಿದೆ. ಚಿತ್ರದ ಮೇಲಿನ ಕುತೂಹಲ ಇನ್ನಷ್ಟು ಹೆಚ್ಚಾಗಿದೆ.

2022ರ ಬ್ಲಾಕ್‌ ಬಸ್ಟರ್‌ ಚಿತ್ರ ʼಕಾಂತಾರʼದ ಪ್ರೀಕ್ವೆಲ್‌ ಆಗಿರುವ ʼಕಾಂತಾರ: ಚಾಪ್ಟರ್‌ 1ʼ ಬಿಡುಗಡೆ ಇನ್ನೂ 10 ತಿಂಗಳು ಕಾಯಬೇಕು. ಅದಕ್ಕೂ ಮೊದಲು ಚಿತ್ರತಂಡ ಈ ಸಣ್ಣ ಝಲಕ್‌ ಹೊರ ಬಿಟ್ಟಿದೆ. 2025ರ ಅ. 2ರಂದು ಸಿನಿಮಾ ವಿಶ್ವಾದ್ಯಂತ ಬಿಡುಗಡೆಯಾಗಲಿದೆ.

ಟೀಸರ್‌ನಲ್ಲಿ ಏನಿದೆ?

ʼʼಗತಕಾಲದ ಪವಿತ್ರ ಪ್ರತಿಧ್ವನಿ ಬಂದತ್ತ ಹೆಜ್ಜೆ ಹಾಕಿʼʼ ಎಂದು ಸೋಷಿಯಲ್‌ ಮೀಡಿಯಾದಲ್ಲಿ ಬರೆದುಕೊಂಡಿರುವ ಹೊಂಬಾಳೆ ಫಿಲ್ಮ್ಸ್‌ 1 ನಿಮಿಷ 22 ಸೆಕೆಂಡ್‌ಗಳ ವಿಡಿಯೊ ಹಂಚಿಕೊಂಡಿದೆ. ʼʼಓ ಬೆಳಕೂʼʼ- ರಿಷಬ್‌ ಶೆಟ್ಟಿ ಅವರ ಹಿನ್ನೆಲೆ ಧ್ವನಿಯೊಂದಿಗೆ ಈ ರೋಮಾಂಚನಕಾರಿ ವಿಡಿಯೊ ಆರಂಭವಾಗುತ್ತದೆ. ʼʼಆದರೆ ಇದು ಬೆಳಕಲ್ಲ; ದರ್ಶನ. ಹಿಂದೆ ನಡೆದದ್ದು, ಮುಂದೆ ನಡೆಯಲಿರುವುದು ಎಲ್ಲವನ್ನೂ ತೋರಿಸುವ ಬೆಳಕುʼʼ ಎಂದು ಧ್ವನಿ ಮುಂದುವರಿಯುತ್ತದೆ. ಆಗಸದಲ್ಲಿ ತುಂಬು ಚಂದಿರ ಮೂಡಿದ ರಾತ್ರಿಯಲ್ಲಿ ಶಿವ (ರಿಷಬ್‌ ಶೆಟ್ಟಿ) ಕಾಡಿನಲ್ಲಿ ಟಾರ್ಚ್‌ನ ಬೆಳಕು ಬೀರಿ ನಾಪತ್ತೆಯಾದ ತಂದೆಯನ್ನು ಹುಡುಕಲು ಹೊರಟಿದ್ದಾನೆ. ಆತನ ಸುತ್ತ ಬೆಂಕಿಯ ಜ್ವಾಲೆ ಹರಡಿರುವುದು ಕಂಡು ಬಂದಿದೆ.

ಜತೆಗೆ ಕತ್ತಲೆ ಹಿನ್ನೆಲೆಯಲ್ಲಿ ಗುಹೆಯೊಂದರಲ್ಲಿ ಕೈಯಲ್ಲಿ ತ್ರಿಶೂಲ ಹಿಡಿದು ಮೈ ತುಂಬ ರಕ್ತ ಮೆತ್ತಿಕೊಂಡಿರುವ ಶಿವನ ಮತ್ತೊಂದು ಮುಖವೂ ಅನಾವರಣಗೊಂಡಿದೆ. ರುದ್ರಾಕ್ಷಿ ಧರಿಸಿ, ಉದ್ದದ ಕೂದಲು ಹೊಂದಿದ, ಕೆಂಗಣ್ಣಿನ ಈ ಅವತಾರ ಕುತೂಹಲ ಮೂಡಿಸುತ್ತಿದೆ. ಜತೆಗೆ ಕದಂಬ ಕಾಲದಲ್ಲಿ ನಡೆಯುವ ಕಥೆ ಇದು ಎನ್ನುವ ಸೂಚನೆಯನ್ನೂ ಟೀಸರ್‌ನಲ್ಲಿ ನೀಡಲಾಗಿದೆ. ಅಜನೀಶ್‌ ಲೋಕನಾಥ್‌ ಅವರ ಹಿನ್ನೆಲೆ ಸಂಗೀತವೂ ಗಮನ ಸೆಳೆಯುತ್ತದೆ. ಟೀಸರ್‌ನಲ್ಲಿ ಇದಕ್ಕಿಂತ ಹೆಚ್ಚಿನ ವಿವರ ನೀಡಿಲ್ಲ. ಅದಾಗ್ಯೂ ಅಭಿಮಾನಿಗಳ ಕಾತುರ ಹೆಚ್ಚಿಸುವಲ್ಲಿ ಇದು ಸಫಲವಾಗಿದೆ.

ಸದ್ಯ ರಿಷಬ್‌ ಶೆಟ್ಟಿ ಬೆಟ್ಟರೆ ಬೇರೆ ಯಾವೆಲ್ಲ ಕಲಾವಿದರು ನಟಿಸುತ್ತಾರೆ ಎನ್ನುವ ಗುಟ್ಟನ್ನು ಚಿತ್ರತಂಡ ಬಿಟ್ಟುಕೊಟ್ಟಿಲ್ಲ. ಈಗಾಗಲೇ ಕುಂದಾಪುರದಲ್ಲಿ ಹಾಕಿರುವ ಬೃಹತ್‌ ಸೆಟ್‌ನಲ್ಲಿ ಚಿತ್ರೀಕ್ರಣ ಭರದಿಂದ ಸಾಗುತ್ತಿದೆ. ʼಕಾಂತಾರʼದ ಕಥೆ ನಡೆಯುವುದಕ್ಕೆ ಮುನ್ನ ಏನಾಗಿತ್ತು ಎನ್ನುವುದನ್ನು ರಿಷಬ್‌ ಶೆಟ್ಟಿ ಈ ಭಾಗದಲ್ಲಿ ವಿವರಿಸಲಿದ್ದಾರೆ. ಕ್ರಿ.ಶ. 301-400ರ ಕಾಲಘಟ್ಟದ ಕಥೆ ತೆರೆ ಮೇಲೆ ಅನಾವರಣಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ. ಈ ಸಿನಿಮಾ ಪಂಜುರ್ಲಿ ದೈವ ಮತ್ತು ಗುಳಿಗ ದೈವಗಳ ಮೂಲದ ಕಥೆಯನ್ನು ಒಳಗೊಂಡಿದೆ ಎನ್ನಲಾಗುತ್ತಿದೆ. ಈ ಕಾರಣಕ್ಕಾಗಿಯೇ ಕುತೂಹಲ ಕೆರಳಿಸಿದೆ.

ಕಡಿಮೆ ಬಜೆಟ್‌ನಲ್ಲಿ ತಯಾರಾದ ʼಕಾಂತಾರʼ ಬಾಕ್ಸ್‌ ಆಪೀಸ್‌ನಲ್ಲಿ 400 ಕೋಟಿ ರೂ.ಗಿಂತ ಅಧಿಕ ಕಲೆಕ್ಷನ್‌ ಮಾಡಿ ಬಾಕ್ಸ್‌ ಆಫೀಸ್‌ ಅನ್ನೇ ಶೇಕ್‌ ಮಾಡಿತ್ತು. ಬೇರೆ ಬೇರೆ ಭಾಷೆಗಳಿಗೆ ಡಬ್‌ ಆಗಿ ದೇಶದ ಗಮನ ಸೆಳೆದಿತ್ತು. ಹೀಗಾಗಿ ʼಕಾಂತಾರ: ಚಾಪ್ಟರ್‌ 1ʼ ಕನ್ನಡ ಸೇರಿ ಒಟ್ಟು 7 ಭಾಷೆಗಳಲ್ಲಿ ತೆರೆಗೆ ಬರಲಿದೆ.

ಈ ಸುದ್ದಿಯನ್ನೂ ಓದಿ: Kantara Chapter 1: ಬಿಗ್‌ ಅಪ್‌ಡೇಟ್‌ ಕೊಟ್ಟ ‘ಕಾಂತಾರ ಚಾಪ್ಟರ್‌ 1’ ಚಿತ್ರತಂಡ; ರಿಲೀಸ್‌ ಡೇಟ್‌ ಅನೌನ್ಸ್‌