Sunday, 15th December 2024

ಗಂಧದಗುಡಿಯಲ್ಲಿ ಕರುನಾಡಿನ ವೈಭವ

ಗಂಧದಗುಡಿ ಕರುನಾಡಿನ ಸಿರಿ ವೈಭವವನ್ನು ಹೊತ್ತುಬಂದಿದೆ. ಗಂಧದಗುಡಿಯನ್ನು ನೋಡಿದಾಗ ನಲವತ್ತಾರು ವರ್ಷದ ಅಪ್ಪು ಸಿನಿ ಪಯಣ ನಮ್ಮ ಮುಂದೆ ಹಾದು ಹೋಗುತ್ತದೆ.

ಡಾ.ಪುನೀತ್ ರಾಜ್ ಕುಮಾರ್ ಅವರಿಗೆ ಕರುನಾಡಿನ ಮೇಲಿರುವ ಪ್ರೀತಿ, ಪ್ರಕೃತಿ ಮಾತೆಯ ಮಡಿಲಲ್ಲಿ ಮಲಗುವ ಆಸೆ, ಇಲ್ಲಿನ ಜನತೆ ಬಗೆಗೆಗಿನ ಕಾಳಜಿ, ಭವಿಷ್ಯದ ಕುರಿತಾದ ಕುತೂಹಲ, ಅಂತರಂಗದ ಮಾತುಗಳನ್ನು ನಿಜಕ್ಕೂ ಅರಿಯ ಬೇಕಾದರೆ ಗಂಧದಗುಡಿಯನ್ನು ನೋಡಲೇಬೇಕು.

ನಾಗರಹೊಳೆ ಕಾಡಿನಿಂದ ಕಾಳಿ ನದಿವರೆಗೆ: ಕರ್ನಾಟಕದ ವನ್ಯ ಸಂಪತ್ತಿನ ಸಮಗ್ರ ಮಾಹಿತಿ ಇಲ್ಲಿದೆ. ನಾಗರಹೊಳೆಯಿಂದ ಪ್ರಾರಂಭವಾಗಿ ಅಣ್ಣಾವ್ರ ಹುಟ್ಟೂರು ಗಾಜನೂರಿನ ವರೆಗೂ ಗಂಧದಗುಡಿಯ ಸೊಬಗಿನ ಪಯಣ ಸಾಗುತ್ತದೆ. ನೇತ್ರಾಣಿ, ಬಿಆರ್‌ಟಿ ಟೈಗರ್ ರಿಸರ್ವ್, ಡೆಕ್ಕನ್ ಹೀಗೆ ಪಶ್ಚಿಮಘಟ್ಟ ಶ್ರೇಣಿ, ಕರಾವಳಿ ತೀರ, ಮಲೆನಾಡು, ತುಂಗಭದ್ರಾ, ಕಾಳಿ ನದಿಯವರೆ ಗಿನ ಜರ್ನಿ ಇಲ್ಲಿದೆ. ಮಧ್ಯೆ ಜೋಗದ ಅಬ್ಬರ, ಅಂಡರ್ ವಾಟರ್ ಅದ್ಭುತ, ಆನೆಗಳ ಬಿಡಾರ ಹೀಗೆ ಹಲವು ವಿಸ್ಮಯಗಳ ಭಂಡಾರವನ್ನೇ ಚಿತ್ರ ಹೊತ್ತು ಬಂದಿದೆ.

ಇದೆಲ್ಲಾ ನಮ್ಮ ರಾಜ್ಯದ ವೈಭವವೇ ಎಂದು ಬೆರಗಾಗುವುದು ಖಚಿತ. ಗಂಧದಗುಡಿ ಯಲ್ಲಿ ಪುನೀತ್ ರಾಜಕುಮಾರ್ ಅವರು ಪುನೀತ್ ಅವರಾಗಿಯೇ ಕಾಣಿಸಿಕೊಂಡಿದ್ದಾರೆ. ಕಾಡಿಗೂ ರಾಜ್ ಕುಟುಂಬಕ್ಕೂ ಇರುವ ನಂಟು ರಾಜ್ ಕುಟುಂಬಕ್ಕೂ ಕಾಡಿಗೂ ಇರುವ ನಂಟು ಇಲ್ಲಿ ಬಿತ್ತರವಾಗಿದೆ. ವನ್ಯ ಸಂಪತ್ತನ್ನು ಸಂರಕ್ಷಿಸುವುದು ನಮ್ಮ ಹೊಣೆ ಎಂಬ ಸಾರವನ್ನು ಸಾರಿ, ಅರಣ್ಯ ಸಂಪತ್ತಿನ ರಕ್ಷಣೆಗೆ ನಾಂದಿ ಹಾಡಿದ ಸಿನಿಮಾ ಗಂಧದಗುಡಿ, ಅದೇ ಅಭಿಲಾಷೆಯನ್ನು ಹೊತ್ತ ಚಿತ್ರವೇ ಅಪ್ಪುವಿನ ಗಂಧದ ಗುಡಿ. ಚಂದನವನದಲ್ಲಿ ಹೊಸತನವನ್ನು, ಹೊಸ ಭರವಸೆಗಳನ್ನು ಮೂಡಿಸಿದೆ.

ಹೊಸತನಕ್ಕೆ ನಾಂದಿ ಹಾಡಿದೆ. ಶಿವಣ್ಣ ಕೂಡ ಅದೇ ಗಂಧದಗುಡಿ ಭಾಗ ೨ ಚಿತ್ರದಲ್ಲಿ ನಟಿಸಿದ್ದರು. ಇದೀಗ ಪವರ್ ಸ್ಟಾರ್
ಪುನೀತ್ ರಾಜಕುಮಾರ್ ಕೂಡ ಗಂಧದಗುಡಿಯ ಭಾಗವಾಗಿದ್ದಾರೆ. ಇದರಲ್ಲಿ ನೈಜ ಪ್ರಕೃತಿಯ ಚಲನವಲನ ಹಾಗೂ ಅದರ ಬಗೆಗಿನ ಕಾಳಜಿ, ಪ್ರೀತಿ ಚಿತ್ರದಲ್ಲಿ ವಿಸ್ತಾರವಾಗಿ ಕಂಡುಬರುತ್ತದೆ. ಅದು ಚಿತ್ರದುದಕ್ಕೂ ಹಾಸು ಹೊಕ್ಕಾಗಿದೆ.

ಅಪ್ಪು ಸರಳತೆಯ ಪ್ರತಿಬಿಂಬ: ಚಿತ್ರದುದ್ದಕ್ಕೂ ಪುನೀತ್ ಅವರ ಸರಳತೆಯನ್ನು ಕಾಣಬಹುದು. ಅವರ ಸರಳ ವ್ಯಕ್ತಿತ್ವವನ್ನು ಕೆಲವರಷ್ಟೇ ಪ್ರತ್ಯಕ್ಷವಾಗಿ ನೋಡಿರಬಹುದು ಆದರೆ ಈ ಚಿತ್ರದ ಮೂಲಕ ಎಲ್ಲರೂ ಅನುಭವಿಸಬಹುದು. ಭಕ್ತ ಪ್ರಹ್ಲಾದ ಚಿತ್ರದಲ್ಲಿ ಹಾವನ್ನು ಕುತ್ತಿಗೆಯಲ್ಲಿ ಹಾಕಿ ಅದರ ಉಸಿರಾಟವನ್ನು ಕೇಳಿದ ಅಪ್ಪುವಿಗೆ ಹಾವಿನ ಬಗೆಗಿನ ಭಯ, ಕಾಡಿನಲ್ಲಿ ಹಾವಿನ ಒಡನಾಟ ಅದರ ತಿಳುವಳಿಕೆಯೊಂದಿಗೆ ಸ್ವಲ್ಪ ಮಟ್ಟಿನ ಆತ್ಮ ವಿಶ್ವಾಸ ಬರುವುದನ್ನು ಇಲ್ಲಿ ಕಾಣಬಹುದಾಗಿದೆ.

ಅಲ್ಲೂ ತಮಾಷೆಯಿಂದ ಮುಕ್ತವಾಗಿ ಎಲ್ಲವನ್ನು ಹೇಳಿಕೊಳ್ಳುವ ಮುಗ್ಧತೆಯನ್ನು ಕಾಣಬಹುದು. ಚಿಕ್ಕ ವಿಚಾರವನ್ನು ಸಂಕೋಚವಿಲ್ಲದೆ ಕೇಳಿ ತಿಳಿದು, ಕುರಿಗಾಹಿಗಳೊಂದಿಗೆ, ಕಾಡಿನ ಸಂರಕ್ಷಕರೊಂದಿಗೆ ಉಂಡು, ಅಲೆದು, ಅಭಿಮಾನಿಗಳೊಂದಿಗೆ ಬೆರೆತ ಅಪ್ಪು ಸರಳತೆಯ ಪ್ರತಿ ರೂಪವಾಗಿ ಕಂಗೊಳಿಸಿದ್ದಾರೆ. ಆನೆ, ಹುಲಿಯನ್ನು ನೋಡುವ ತವಕ ಅವರ ನೈಜ ವ್ಯಕ್ತಿತ್ವವನ್ನೇ ಅನಾವರಣಗೊಳಿಸುತ್ತದೆ. ಚಿತ್ರದ ಕೊನೆಯಲ್ಲಿ ಕಾಳಿ ನದಿಗೆ ಮನಃಪೂರ್ವಕವಾಗಿ ಕೃತಜ್ಞತೆಯನ್ನು ಸಲ್ಲಿಸುತ್ತಾ ವಿದಾಯ ಹೇಳುತ್ತಾರೆ.

ಅಮೋಘ ನಿರ್ದೇಶನ : ಗಂಧದಗುಡಿ ಚಿತ್ರವನ್ನು ನಿರ್ದೇಶಕ ಅಮೋಘವರ್ಷ ನಿರ್ದೇಶಿಸಿ ಅದನ್ನು ಅಷ್ಟೇ ಅಮೋಘವಾಗಿ ತೆರೆಗೆ ತಂದಿದ್ದಾರೆ. ನಮ್ಮ ನೆಲ, ಜಲ, ಕಾನನದ ಸೊಗಡು, ನೈಜತೆ ವೈಭವವನ್ನು ನಮ್ಮ ಮುಂದೆ ತೆರೆದಿಟ್ಟಿದ್ದಾರೆ. ಹಿಂದೆಂದೂ ಕಾಣದ ವೈಭವೋಪೇತ ಸಿನಿಮಾವನ್ನು ತೆರೆಯಲ್ಲಿ ಕಟ್ಟಿಕೊಟ್ಟಿದ್ದಾರೆ. ಪ್ರಾಣಿಗಳ ಬಗ್ಗೆ ಕಾಳಜಿ ಇರಲಿ ಆದರೆ ಕಾಡು ಪ್ರಾಣಿ ಗಳೊಂದಿಗೆ ಯಾವತ್ತೂ ಹೀರೋಯಿಸಂ ಪ್ರದರ್ಶನ ಸಲ್ಲದು. ಅದು ಅಪಾಯಕಾರಿ ಎಂಬ ದೊಡ್ಡ ಸಂದೇಶವನ್ನೇ ಚಿತ್ರದ
ಮೂಲಕ ಸಾರಿದ್ದಾರೆ. ಜೀವನದಲ್ಲಿ ಒಮ್ಮೆಯಾದರೂ ಗಂಧದ ಗುಡಿಯನ್ನು ನೋಡಲೇಬೇಕು. ನಿಸರ್ಗದ ಸಿರಿ ಸಂಪತ್ತನ್ನು ಕಣ್ತುಂಬಿಕೊಳ್ಳಲೇಬೇಕು.

*

ಅಪ್ಪು ಪ್ರಕೃತಿಯ ಯೋಗಿ. ಪ್ರಕೃತಿ ಬಗೆಗಿನ ಅವರ ಕಾಳಜಿ, ಪ್ರೀತಿ ಮೆಚ್ಚಲೇಬೇಕು. ಇದುಕೇವಲ ಸಿನಿಮಾವಲ್ಲ ಇಲ್ಲಿ ಜೀವನ ಆಸೆಗಳನ್ನು ಅಡಕವಾಗಿದೆ. ಅಪ್ಪು ಮಗುವಾಗಿ ಬಂದು ಮಗುವಾಗಿ ಹೋದರು. ಜೀವಮ ಎಂದರೆ ಏನು ಕಂಡುಕೊಂಡರು ನಮಗೂ ಹೇಳಿಕೊಟ್ಟು ಮರೆಯಾ ದರು. ಜಂಟಾಟ, ಆಸೆಗಳಯ ಬದಿಗಿಟ್ಟ ಸರಳತೆಯಿಂದ ಬದುಕಿ ಎಂಬುದನ್ನು ಗಂಧದ ಗುಡಿಯ ಮೂಲಕ ಸಾರಿದ್ದಾರೆ.

– ಸಂತೋಷ್ ಆನಂದ್ ರಾಮ್ ನಿರ್ದೇಶಕ

ಸಿನಿಮಾದ ಕಂಟೆಂಟ್ ಹಾಗೂ ಅದನ್ನು ಅಷ್ಟೇ ಅಚ್ಚುಕಟ್ಟಾಗಿ ತೆರೆಗೆ ತಂದಿದ್ದು ನನಗೆ ತುಂಬಾ ಸಂತೋಷವಾಗಿದೆ. ಪ್ರಕೃತಿಯ ನಡುವಿನ ಮಾನವನ ಜೀವನ ವನ್ಯ, ಪ್ರಾಣಿ ,ಜನಸಂಪತ್ತು ಎಲ್ಲವನ್ನೂ ಮನಮುಟ್ಟುವಂತೆ ಹೃದಯ ಸ್ಪರ್ಶಿಯಾಗಿ ವಿವರಿಸಿದ್ದಾರೆ. ಅಪ್ಪು ಎಲ್ಲಿಯೂ ಹೋಗಿಲ್ಲ ನಮ್ಮ ಹೃದಯ ದಲ್ಲಿ ಚಿರಸ್ಥಾಯಿಯಾಗಿದ್ದಾರೆ.
– ಸುಧಾ ಮೂರ್ತಿ

ಅಪ್ಪು ಗಂಧದಗುಡಿಯ ಮೂಲಕ ಅಪ್ಪನನ್ನೇ ಮೀರಿಸಿದ್ದಾನೆ. ಗಂಧದಗುಡಿಯ ಮೂಲಕ ಪ್ರಕೃತಿಯ ಸಿರಿ ಸಂಪತ್ತನ್ನು ನಮ್ಮ ಕಣ್ಣಮುಂದೆ ಇಟ್ಟಿದ್ದಾರೆ. ಅಪ್ಪು ಜಗಮೆಚ್ಚಿದ ಮಗ.ಕರುನಾಡಿನ ಹೆಮ್ಮೆಯ ಪುತ್ರ

– ಚಿನ್ನೇಗೌಡ

ಅಪ್ಪು ಬೇರೆ ಸಿನಿಮಾದಲ್ಲಿ ಬೇರೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾನೆ. ಆದರೆ ಗಂಧದಗುಡಿಯಲ್ಲಿ ಅಪ್ಪು, ಅಪ್ಪುವಾಗೆ ಕಾಣಿಸಿ ಕೊಂಡಿದ್ದಾನೆ. ಅದು ಮನಸಿಗೆ ನಾಟುತ್ತದೆ. ಪ್ರಕೃತಿ, ಪ್ರಾಣಿ ಸಂಪತ್ತನ್ನು ಉಳಿಸಿ ಎಂದು ಈ ಚಿತ್ರದಲ್ಲಿ ಹೇಳಿದ್ದಾನೆ. ಇಂದು ಎಲ್ಲೆಡೆಯೂ ಪ್ರಕೃತಿ ನಾಶದಿಂದ ಅಕಾಲಿಕ ಮಳೆ ಸುರಿಯುತ್ತಿದೆ ಇದರಿಂದ ಎಲ್ಲರೂ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಪ್ರಕೃತಿ ಸಂರಕ್ಷಿಸಿದರೆ ನಾವು ಸುರಕ್ಷಿತವಾಗಿರಬಹುದು ಎಂಬುದನ್ನು ಅಪ್ಪು ಹೇಳಿದ್ದಾನೆ.
– ಶಿವರಾಜ್ ಕುಮಾರ್

ಅಪ್ಪು ಸಿನಿಮಾ ಮಾಡಲು ಮಾತ್ರ ಬಂದಿಲ್ಲ. ಅವನು ಬಂದಿದ್ದು ಏನನ್ನೋ ತಿಳಿ ಹೇಳಲು. ಗಂಧದಗುಡಿಯ ಮೂಲಕ ಅದನ್ನು ಹೇಳಿ ಹೊರಟಿದ್ದಾನೆ. ಅದಕ್ಕಾಗಿಯೇ ಬೆಟ್ಟದ ಹೂವಿನಿಂದ ಹಿಡಿದು ಗಂಧದಗುಡಿಯವರೆಗೂ ಸಾಗಿಬಂದಿದ್ದಾನೆ. ಅಪ್ಪು ಸಂದೇಶವನ್ನು ನಾವು ಅಳವಡಿಸಿಕೊಂಡು, ಎಲ್ಲರಿಗೂ ಅದನ್ನು ತಲುಪಿಸಬೇಕಾಗಿದೆ. ಅಪ್ಪು ಕನಸಿನಲ್ಲಿ ಬಂದು ಸಂದೇಶ ಕೊಡು ಅದನ್ನು ನಾವೆಲ್ಲರೂ ಅಳವಡಿಸಿಕೊಳ್ಳುತ್ತೇವೆ.
– ರಾಘವೇಂದ್ರ ರಾಜ್ ಕುಮಾರ್

ನಮ್ಮೊಳಗಿರುವ ಮಾನವೀಯತೆಯನ್ನು ಅಪ್ಪು ಸರ್ ಬಡಿದೆಬ್ಬಿಸಿದ್ದಾರೆ. ಚಿತ್ರವನ್ನು ನೋಡಿಬಂದ ಪ್ರತಿಯೊಬ್ಬರು ಕಂಬನಿ
ಮಿಡಿಯುತ್ತಿದ್ದಾರೆ. ಅಪ್ಪು ನಡೆದಾಡಿದ ಹಾದಿಯನ್ನು ಒಮ್ಮೆಯಾದೂ ಸ್ಪರ್ಶಿಸಬೇಕು. ನಾವು ಅವರು ಹಾಕಿಕೊಟ್ಟ ದಾರಿಯಲ್ಲಿ ಸಾಗಬೇಕು.ಪ್ರಕೃತಿ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಗಿಡಗಳನ್ನು ನೆಡಬೇಕು.
ಅನುಶ್ರೀ