ತಿರುವನಂತಪುರಂ: ‘ಮಲಯಾಳಂ ಸಿನಿಮಾದ ಅಮ್ಮ’ ಎಂದೇ ಜನಪ್ರಿಯರಾಗಿದ್ದ ಹಿರಿಯ ನಟಿ ಕವಿಯೂರ್ ಪೊನ್ನಮ್ಮ (Kaviyoor Ponnamma) ಶುಕ್ರವಾರ (ಸೆಪ್ಟೆಂಬರ್ 20) ಕೊಚ್ಚಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಅವರಿಗೆ 79 ವರ್ಷ ವಯಸ್ಸಾಗಿತ್ತು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರನ್ನು ಕೆಲವು ದಿನಗಳ ಹಿಂದೆ ಆಸ್ಪತೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ನಿಧನರಾದರು. ಆ ಮೂಲಕ ಹಲವು ದಶಕಗಳ ಕಾಲ ಬೆಳ್ಳಿ ತೆರೆಯಲ್ಲಿ ಮಿಂಚಿದ ಕಲಾವಿದೆಯೊಬ್ಬರು ಮರೆಯಾದಂತಾಗಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸೇರಿದಂತೆ ಸಿನಿಮಾ, ರಾಜಕೀಯ ರಂಗದ ನಾಯಕರು ಹಿರಿಯ ಕಲಾವಿದೆ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
1945ರ ಸೆಪ್ಟೆಂಬರ್ 10ರಂದು ಪತ್ತನಂತಿಟ್ಟ ಜಿಲ್ಲೆಯ ತಿರುವಲ್ಲ ತಾಲೂಕಿನ ಕವಿಯೂರ್ ಎಂಬಲ್ಲಿ ಜನಿಸಿದ ಪೊನ್ನಮ್ಮ ಇದುವರೆಗೆ 700ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಬಹುಮುಖ ಪ್ರತಿಭೆಯಾಗಿದ್ದ ಅವರು ನಾಟಕ, ಧಾರಾವಾಹಿ, ಡಾಕ್ಯುಮೆಂಟ್ರಿ, ಸಾಕ್ಷ್ಯಚಿತ್ರಗಳಲ್ಲಿಯೂ ನಟಿಸಿದ್ದಾರೆ. ಗಾಯಕಿಯಾಗಿಯೂ ಅವರು ಗುರುತಿಸಿಕೊಂಡಿದ್ದಾರೆ.
An important chapter in Malayalam cinema comes to a close with the passing of Kaviyoor Ponnamma, who embodied the essence of motherhood on screen for decades. Her effortless portrayals of Malayali women have left an indelible mark on our collective memory. Heartfelt condolences… pic.twitter.com/obEkqtezMq
— Pinarayi Vijayan (@pinarayivijayan) September 20, 2024
ತಾಯಿ ಮತ್ತು ಅಜ್ಜಿಯ ಪಾತ್ರ ಎಂದರೆ ಥಟ್ಟನೆ ಮಲೆಯಾಳಿಗಳ ಮುಂದೆ ಬರುವುದೇ ಕವಿಯೂರ್ ಪೊನ್ನಮ್ಮ ಅವರ ಮುಖ. ಈ ಪಾತ್ರಗಳಲ್ಲಿ ಅವರು ಮೂಡಿಸಿರುವ ಛಾಪು ಅಂತಹದ್ದು. ಹಲವು ಸೂಪರ್ ಸ್ಟಾರ್‌ಗಳಿಗೆ ಅವರು ತಾಯಿಯಾಗಿ ನಟಿಸಿದ್ದರೂ ಮಾಲಿವುಡ್ ಸೂಪರ್ ಸ್ಟಾರ್ ಮೋಹಲ್‌ಲಾಲ್ ಅವರೊಂದಿಗೆ ನಟಿಸಿರುವ ಪಾತ್ರ ಇಂದಿಗೂ ಬಹು ಜನಪ್ರಿಯವಾಗಿದೆ. ಇವರಿಬ್ಬರು ನಿಜವಾದ ತಾಯಿ-ಮಗ ಎನ್ನುವಷ್ಟರ ಮಟ್ಟಿಗೆ ಪ್ರಭಾವ ಬೀರಿದ್ದಾರೆ.
ಮೋಹನ್‌ಲಾಲ್ ಸಂತಾಪ
ಮೋಹನ್‌ಲಾಲ್ ಅವರು ಪೊನ್ನಮ್ಮ ಅವರ ನಿಧನಕ್ಕೆ ಸಂತಾಪ ಸೂಚಿಸಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಪೊನ್ನಮ್ಮ ಅವರು ನಿಜವಾದ ತಾಯಿಯಂತೆಯೇ ಸ್ನೇಹ ತೋರುತ್ತಿದ್ದರು ಎಂದು ಬರೆದುಕೊಂಡಿದ್ದಾರೆ. ʼʼಪೊನ್ನಮ್ಮ ಅವರೊಂದಿಗೆ ಮಗನಾಗಿ ನಾನು ಅಭಿನಯಿಸುತ್ತಿರಲಿಲ್ಲ, ಬದಲಾಗಿ ಜೀವಿಸುತ್ತಿದ್ದೆʼʼ ಎಂದು ಭಾವುಕರಾಗಿದ್ದಾರೆ. ʼಕಿರೀಟಂʼ, ʼಭರತಂʼ, ʼವಿಯೆಟ್ನಾಂ ಕಾಲೋನಿʼ, ʼದಶರಥಂʼ, ʼನಾಟುರಾಜಾವವುʼ, ʼವಡಕ್ಕುನಾತನ್ʼ, ʼಒಪ್ಪಂʼ ಮೊದಲಾದ ಸಿನಿಮಾಗಳಲ್ಲಿನ ಇವರ ತಾಯಿ-ಮಗನ ಪಾತ್ರ ಬಹು ಜನಪ್ರಿಯವಾಗಿದೆ. ಇಂದಿಗೂ ಈ ಪಾತ್ರ ಪ್ರೇಕ್ಷಕರನ್ನು ಕಾಡುತ್ತಿದೆ.
1958ರಲ್ಲಿ ತೆರೆಕಂಡ ʼಮರಿಯಕುಟ್ಟಿʼ ಎಂಬ ಮಲಯಾಳಂ ಸಿನಿಮಾ ಮೂಲಕ ಪೊನ್ನಮ್ಮ ಅವರು ಚಿತ್ರರಂಗ ಪ್ರವೇಶಿಸಿದರು. 1988ರಲ್ಲಿ ತೆರೆಕಂಡ ʼಸತ್ಯʼ ಎನ್ನುವ ತಮಿಳು ಮತ್ತು 1998ರಲ್ಲಿ ಬಿಡುಗಡೆಗೊಂಡ ʼಪ್ರಿಯುರಾಲುʼ ಎನ್ನುವ ತೆಲುಗು ಸಿನಿಮಾದಲ್ಲಿಯೂ ಅಭಿನಯಿಸಿದ್ದಾರೆ. ಜತೆಗೆ ಹಲವು ಮಲಯಾಳಂ ಚಿತ್ರಗಳ ಹಾಡುಗಳಿಗೆ ಧ್ವನಿಯಾಗಿದ್ದಾರೆ. ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ನಾಟಕಗಳಲ್ಲಿಯೂ ತಮ್ಮ ಪ್ರತಿಭೆ ತೋರಿದ್ದಾರೆ. ಕೆಲವು ಜಾಹೀರಾತಿಗಳಲ್ಲಿಯೂ ಪೊನ್ನಮ್ಮ ಕಾಣಿಸಿಕೊಂಡಿರುವುದು ವಿಶೇಷ.
4 ಬಾರಿ ರಾಜ್ಯ ಪ್ರಶಸ್ತಿ
ಪೊನ್ನಮ್ಮ ಅವರು ಕೇರಳ ಸರ್ಕಾರ ನೀಡುವ ರಾಜ್ಯ ಚಲನಚಿತ್ರ ಪ್ರಶಸ್ತಿ ಪುರಸ್ಕೃತರೂ ಹೌದು. ಅವರನ್ನು ಅರಸಿಕೊಂಡು 4 ಬಾರಿ ಈ ಪ್ರಶಸ್ತಿ ಬಂದಿದೆ. 1971, 1972, 1973 ಮತ್ತು 1994ರಲ್ಲಿ ಅವರು ಪ್ರತಿಷ್ಠಿತ ರಾಜ್ಯ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.
ಈ ಸುದ್ದಿಯನ್ನೂ ಓದಿ: Salman Khan: ವೆಡ್ಡಿಂಗ್ ಕಾರ್ಡ್ ಹಂಚಿ ಆಗಿತ್ತು; ಮತ್ತೊಬ್ಬಳ ಜತೆ ಬೆಡ್‌ರೂಂನಲ್ಲಿ ರೆಡ್‌ಹ್ಯಾಂಡಾಗಿ ಸಿಕ್ಕಿ ಬಿದ್ದಿದ್ದ ಸಲ್ಲು; ಸಂಗೀತಾ ಜತೆ ಬ್ರೇಕಪ್ ಆಗಿದ್ದೇಕೆ?