ಪಣಜಿ: ದಕ್ಷಿಣ ಭಾರತದ ಟಾಪ್ ನಟಿ ಕೀರ್ತಿ ಸುರೇಶ್ (Keerthy Suresh) ಗುರುವಾರ ತಮ್ಮ ಬಹುಕಾಲದ ಗೆಳೆಯ ಆಂಟನಿ ತಟ್ಟಿಲ್ (Antony Thattil) ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಜೋಡಿ ಗೋವಾದಲ್ಲಿ ಅದ್ಧೂರಿಯಾಗಿ ಕುಟುಂಬಸ್ಥರು ಹಾಗೂ ಸ್ನೇಹಿತರ ಸಮ್ಮುಖದಲ್ಲಿ ವಿವಾಹವಾಗಿದೆ. ಈ ಬಗ್ಗೆ ನಟಿ ತಮ್ಮ ಇನ್ಸ್ಟಾಗ್ರಾಂನಲ್ಲಿ ಪೋಟೋ ಹಂಚಿಕೊಂಡಿದ್ದಾರೆ.
ಕೀರ್ತಿ ಮತ್ತು ಆಂಟೋನಿ ಅಯ್ಯಂಗಾರ್ ಪದ್ಧತಿಯಂತೆ ವಿವಾಹವಾಗಿದ್ದಾರೆ. ನಟಿ ಹಳದಿ ಹಾಗೂ ಹಸಿರು ಬಣ್ಣದ ಸೀರೆಯಲ್ಲಿ ಕಂಗೊಳಿಸಿದರೆ, ಆಂಟೋನಿ ಸಾಂಪ್ರದಾಯಕವಾಗಿ ಪಂಚೆಯಲ್ಲಿ ಕಾಣಿಸಿಕೊಂಡಿದ್ದಾರೆ. ವಿವಾಹಕ್ಕೆ ನಟ ದಳಪತಿ ವಿಜಯ್ ಹಾಗೂ ಅವರ ಪತ್ನಿ ಕೂಡ ಆಗಮಿಸಿದ್ದರು.
ಕೀರ್ತಿ ತಮ್ಮ ಮದುವೆಯ ಫೋಟವನ್ನು ಹಂಚಿಕೊಳ್ಳುತ್ತಿದ್ದಂತೆ ಅಭಿಮಾನಿಗಳು ಸೇರಿದಂತೆ ಹಲವಾರು ಕಲಾವಿದರು ಶುಭ ಕೋರಿದ್ದಾರೆ . ಇತ್ತೀಚೆಗೆ ಕೀರ್ತಿ ಸುರೇಶ್ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಎಲ್ಲೆಡೆ ವೈರಲ್ ಆಗಿತ್ತು. ಈ ಬಗ್ಗೆ ಸ್ವತಃ ಕೀರ್ತಿ ಸುರೇಶ್ ಅವರೇ ಸ್ಪಷ್ಟನೆ ನೀಡಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಮದುವೆಯಾಗುತ್ತಿರುವ ಸಂಗತಿಯನ್ನು ಬಹಿರಂಗಪಡಿಸಿದ್ದರು. ಆಂಟೋನಿ ಜತೆಗೆ ದೀಪಾವಳಿ ಆಚರಿಸುತ್ತಿರುವ ಫೋಟೊವನ್ನು ಕೀರ್ತಿ ಹಂಚಿಕೊಂಡಿದ್ದಾರೆ. ಇದರಲ್ಲಿ ಇಬ್ಬರ ಮುಖ ಕಾಣಿಸುತ್ತಿಲ್ಲ. ಅದಾಗ್ಯೂ ಅವರು ಬರೆದಿರುವ ಕ್ಯಾಪ್ಷನ್ ಅನುಮಾನಕ್ಕೆ ತೆರೆ ಎಳೆದಿದೆ. ʼʼ15 ವರ್ಷ ಮತ್ತು ಕೌಂಟಿಂಗ್. ಆಂಟೋನಿ ಮತ್ತು ಕೀರ್ತಿ ಎಂದೆಂದಿಗೂʼʼ ಎಂದು ಬರೆದುಕೊಂಡಿದ್ದರು. ಆ ಮೂಲಕ ಕೆಲವು ದಿನಗಳಿಂದ ಹರಿದಾಡುತ್ತಿರುವುದು ವದಂತಿಗೆ ಫುಲ್ ಸ್ಟಾಪ್ ಇಟ್ಟು ಮದುವೆಯಾಗಲಿದ್ದೇನೆ ಎಂದು ಹೇಳಿದ್ದರು.
ಅದಾದ ಕೆಲವೇ ದಿನಗಳಲ್ಲಿ ಅವರ ವಿವಾಹ ಆಮಂತ್ರಣ ಪತ್ರಿಕೆ ಎಲ್ಲಡೆ ವೈರಲ್ ಆಗಿತ್ತು. ಆಮಂತ್ರಣ ಪತ್ರಿಕೆಯಲ್ಲಿ, “ನಮ್ಮ ಮಗಳು ಡಿಸೆಂಬರ್ 12 ರಂದು ಮದುವೆಯಾಗುತ್ತಿದ್ದಾಳೆ ಎಂದು ತಿಳಿಸಲು ನಮಗೆ ತುಂಬಾ ಸಂತೋಷವಾಗಿದೆ. ನಿಮ್ಮ ಆಶೀರ್ವಾದವನ್ನು ನಾವು ಹೆಚ್ಚು ಗೌರವಿಸುತ್ತೇವೆ. ನೀವು ಬಂದು ಅವರಿಗೆ ಆಶೀರ್ವದಿಸುತ್ತೀರಿ ಎಂದು ನಾವು ಭಾವಿಸುತ್ತೇವೆ. ನವ ಜೋಡಿ ತಮ್ಮ ಜೀವನದ ಹೊಸ ಅಧ್ಯಾಯವನ್ನು ಪ್ರಾರಂಭಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ತಮ್ಮನ್ನು ಆತ್ಮೀಯವಾಗಿ ಸ್ವಾಗತಿಸುತ್ತೇವೆ ಎಂದು ಕೀರ್ತಿ ಪೋಷಕರಾದ ಜಿ ಸುರೇಶ್ ಕುಮಾರ್, ಮೇನಕಾ ಸುರೇಶ್ ಕುಮಾರ್, ರೇವತಿ ಸುರೇಶ್ ಮತ್ತು ನಿತಿನ್ ನಾಯರ್ ಹೇಳಿದ್ದರು.
ಈ ಸುದ್ದಿಯನ್ನೂ ಓದಿ : Keerthy Suresh : ಕೀರ್ತಿ ಸುರೇಶ್ ವಿವಾಹ ಆಮಂತ್ರಣ ಪತ್ರಿಕೆ ವೈರಲ್ , ಗೋವಾದಲ್ಲಿ ನಡೆಯಲಿದೆ ಅದ್ಧೂರಿ ಮದುವೆ!