ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಶುರುವಾದಾಗಿನಿಂದ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಾಗುತ್ತಲೇ ಇದೆ. ಸ್ವರ್ಗ ಮತ್ತು ನರಕ ಎಂಬ ವಿಶೇಷ ಕಾನ್ಸೆಪ್ಟ್ನೊಂದಿಗೆ ಶುರುವಾದ ಶೋ ಬಗ್ಗೆ ಇತ್ತೀಚೆಗಷ್ಟೆ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ಹೋಗಿತ್ತು. ಬಳಿಕ ಕಳೆದ ವೀಕೆಂಡ್ನಲ್ಲಿ ಸುದೀಪ್ ಅವರು ಇದು ನನ್ನ ಕೊನೆಯ ಬಿಗ್ ಬಾಸ್ ಸೀಸನ್. ಇನ್ಮುಂದೆ ಶೋ ನಡೆಸಿಕೊಡುವುದಿಲ್ಲ ಎಂದು ಟ್ವೀಟ್ ಮಾಡಿದ್ದರು.
ನಿನ್ನೆ ಬಿಗ್ ಬಾಸ್ ಮಾಜಿ ಸ್ಪರ್ಧಿ, ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ ಫೇಸ್‌ಬುಕ್ ಲೈವ್ ಬಂದು, ‘ಬಿಗ್ ಬಾಸ್ ಶೋನಲ್ಲಿ ಕನ್ನಡ ಬಳಕೆ ಹೆಚ್ಚು ಆಗುತ್ತಿಲ್ಲ. ಈ ಬಾರಿಯ ಸ್ಪರ್ಧಿಗಳಿಗೆ ತುಂಬಾ ಕನ್‌ಫ್ಯೂಶನ್ ಆಗುತ್ತಿದೆ. ಬರೆದಿರುವ ಪಾಯಿಂಟ್ಸ್ ಸರಿಯಾಗಿ ಇಲ್ಲ. ಸರಿಯಾಗಿ ಕಮ್ಯೂನಿಕೇಟ್ ಮಾಡದೆ ಗೊಂದಲ ಆಗುತ್ತಿದೆ. ಈ ತರಹದ ಬೆಳವಣಿಗೆಯಿಂದ ಅಸಮಾಧಾನಗೊಂಡು ಸುದೀಪ್ ಬಿಡಲು ನಿರ್ಧಾರ ಮಾಡಿದ್ದಾರೆ,’ ಎಂದು ಹೇಳಿದ್ದರು.
ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಸುದೀಪ್ ಹಾಗೂ ಕಲರ್ಸ್ ನಡುವೆ ಎಲ್ಲವೂ ಸರಿಯಿಲ್ಲ, ಬಿಗ್ ಬಾಸ್ ಆಯೋಜಕರ ಜೊತೆ ಕಿರಿಕ್ ಆಗಿದೆ ಎಂಬ ಸುದ್ದಿ ಹರಿದಾಡಿತ್ತು. ಆದರೆ, ಇದೀಗ ಸುದೀಪ್ ಟ್ವೀಟ್ ಮಾಡುವ ಮೂಲಕ ಎಲ್ಲ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.
ಸುದೀಪ್ ಟ್ವೀಟ್ನಲ್ಲಿ ಏನಿದೆ?:
‘‘ನನ್ನ ಒಂದು ಟ್ವೀಟ್ಗೆ ನೀವು ಸಂಬಂಧಿಸಿ ಬರುತ್ತಿರುವ ಎಲ್ಲಾ ಸಪೋರ್ಟ್ಗೆ ಅಭಿನಂದನೆ. ಆದರೆ ನನ್ನ ಹಾಗೂ ಚಾನೆಲ್ ನಡುವೆ ಏನೋ ಸಂಘರ್ಷವಾಗಿದೆ ಎಂದು ಹರಿದಾಡುತ್ತಿರುವ ವಿಡಿಯೋ ಹಾಗೂ ಪ್ರತಿಕ್ರಿಯೆಗಳನ್ನು ಸೃಷ್ಟಿಸುತ್ತಿರುವವರಿಗೆ ನಾನು ಕೇಳಿಕೊಳ್ಳುವುದು ಇಷ್ಟೆ. ನಾವು ಒಂದು ದೀರ್ಘವಾದ ಹಾಗೂ ಧನಾತ್ಮಕ ಪ್ರಯಾಣವೊಂದನ್ನು ಮಾಡಿದ್ದೇವೆ. ಇದರಲ್ಲಿ ಒಬ್ಬರಿಗೊಬ್ಬರು ಅಗೌರವದಿಂದ ನಡೆದುಕೊಳ್ಳುವ ಪ್ರಶ್ನೆಯೇ ಹುಟ್ಟುವುದಿಲ್ಲ. ಇದರ ಸುತ್ತ ಹುಟ್ಟುತ್ತಿರುವ ಊಹೆಗಳು ಸುಳ್ಳುಗಳಿಂದ ಕೂಡಿವೆ ಮತ್ತು ಮಾಹಿತಿ ಕೊರತೆಯಿಂದ ಕೂಡಿವೆ. ನನ್ನ ಒಂದು ಟ್ವೀಟ್ ಅತ್ಯಂತ ಪ್ರಾಮಾಣಿಕವಾಗಿದೆ. ನನ್ನ ಮತ್ತು ಕಲರ್ಸ್ ಕನ್ನಡದ ನಡುವಿನ ಸಂಬಂಧ ಒಂದು ಅದ್ಭುತವಾದದ್ದು. ಅವರು ನನ್ನನ್ನು ತುಂಬಾ ಗೌರವದಿಂದ ನಡೆಸಿಕೊಂಡಿಂದ್ದಾರೆ. ಡೈರೆಕ್ಟರ್ ಪ್ರಕಾಶ್ ಒಬ್ಬ ಅದ್ಭುತ ಪ್ರತಿಭೆ ಹೊಂದಿರುವ ವ್ಯಕ್ತಿ. ಅವರ ಬಗ್ಗೆ ನನಗೆ ತುಂಬಾ ಗೌರವವಿದೆ. ನನ್ನೊಂದಿಗೆ ಕೆಲಸ ಮಾಡಿದವರು ಯಾವುದೋ ಅಪವಾದವನ್ನು ಎದುರಿಸುತ್ತಿರುವಾಗ ನಾನು ಹಿಂದೆ ಕುಳಿತುಕೊಂಡು ನೋಡುತ್ತಾ ಸಂಭ್ರಮಿಸುವವರ ಪಟ್ಟಿಗೆ ಸೇರಿದ ವ್ಯಕ್ತಿ ನಾನಲ್ಲ. ಚಿಯರ್ಸ್ & ಲವ್’’ ಎಂದು ಕಿಚ್ಚ ಟ್ವೀಟ್ ಮಾಡಿದ್ದಾರೆ.
I appreciate all the love and support coming my way regarding my tweet; it truly makes me feel cherished. However, I kindly ask those creating comments and videos to refrain from making assumptions about any conflicts between the channel and myself. We have shared a long and…
— Kichcha Sudeepa (@KicchaSudeep) October 15, 2024
ರೂಪೇಶ್ ರಾಜಣ್ಣ ಹೇಳಿದ್ದೇನು?:
ನಿನ್ನೆ ಸಂಜೆ (ಅ. 14) ಫೇಸ್‌ಬುಕ್ ಲೈವ್ ಬಂದು ರಾಜಣ್ಣ ಈ ರೀತಿ ಹೇಳಿದ್ದರು. ‘‘ಸುದೀಪ್ ಸರ್ ನಿನ್ನೆ ಟ್ವೀಟ್ ಮಾಡಿದ್ದರು. ಆ ಬಳಿಕ ಚಕ್ರವರ್ತಿ ಚಂದ್ರಚೂಡ್ ಅವರು ಒಂದು ಪೋಸ್ಟ್ ಹಾಕಿದ್ದರು. ಅದನ್ನ ನೋಡಿ ನಾನು ಅವರಿಗೆ ಕಾಲ್ ಮಾಡಿ ಮಾತಾಡಿದೆ. ಆಗ ಒಂದಷ್ಟು ಬೆಳವಣಿಗೆಗಳ ಬಗ್ಗೆ ಅವರು ನನಗೆ ತಿಳಿಸಿದರು. ವಿಷಯ ಇಷ್ಟೇ-ಬಿಗ್ ಬಾಸ್ ಶೋನಲ್ಲಿ ಕನ್ನಡ ಬಳಕೆ ಹೆಚ್ಚು ಆಗುತ್ತಿಲ್ಲ. ಹಿಂದೆ ನಾವು ಇದ್ದಾಗ ಇಂಗ್ಲೀಷ್‌ನಲ್ಲಿ ಮಾತನಾಡಿದರೆ ಕೂಡಲೇ ಕನ್ನಡ ಹಾಡು ಹಾಕುತ್ತಿದ್ದರು. ಆದರೆ, ಕಳೆದ ಸೀಸನ್‌ನಿಂದ ಅದು ಆಗುತ್ತಿಲ್ಲ. ಈ ಬಾರಿಯ ಸ್ಪರ್ಧಿಗಳಿಗೆ ತುಂಬಾ ಕನ್‌ಫ್ಯೂಶನ್ ಆಗುತ್ತಿದೆ. ಬರೆದಿರುವ ಪಾಯಿಂಟ್ಸ್ ಸರಿಯಾಗಿ ಇಲ್ಲ. ಸರಿಯಾಗಿ ಕಮ್ಯೂನಿಕೇಟ್ ಮಾಡದೆ ಗೊಂದಲ ಆಗುತ್ತಿದೆ. ಈ ತರಹದ ಬೆಳವಣಿಗೆಯಿಂದ ಅಸಮಾಧಾನಗೊಂಡು ಬಿಡಲು ನಿರ್ಧಾರ ಮಾಡಿದ್ದಾರೆ. ಬಿಗ್ ಬಾಸ್ ಶೋ ಸರಿಯಾಗಿದೆ. ಆದರೆ, ಅಲ್ಲಿರುವ ಒಂದಿಬ್ಬರಿಗೆ ಸಜೆಷನ್ ಕೊಟ್ಟರೂ, ಅದಕ್ಕೆ ಸರಿಯಾಗಿ ಸ್ಪಂದಿಸಿಲ್ಲ. ಅದಕ್ಕೆ ಸುದೀಪ್ ಸರ್ ಕೋಪ ಮಾಡಿಕೊಂಡು ಬೇಸರದಿಂದ ಟ್ವೀಟ್ ಮಾಡಿದ್ದಾರೆ. ಇನ್ಮುಂದೆ ತಪ್ಪಾಗಲ್ಲ ಅಂತ ಈಗ ತಂಡ ಒಪ್ಪಿಕೊಂಡಿದ್ದಾರೆ. ಮುಂದೆ ಎಲ್ಲವೂ ಸರಿಯಾಗಿರುತ್ತದೆ ಎಂದು ಹೇಳಿದ್ದಾರೆ’’ ಎಂದು ರೂಪೇಶ್ ರಾಜಣ್ಣ ಫೇಸ್‌ಬುಕ್ ಲೈವ್‌ನಲ್ಲಿ ತಿಳಿಸಿದ್ದರು.
BBK 11: ಚುಚ್ಚು ಮಾತುಗಳಿಂದ ಬೇಸತ್ತ ಧನರಾಜ್: ಬಿಗ್ ಬಾಸ್ ಮನೆಯಲ್ಲಿ ಕಣ್ಣೀರಿಟ್ಟ ಕಾಮಿಡಿ ಸ್ಟಾರ್