ಬಿಗ್ ಬಾಸ್ ಕನ್ನಡ ಸೀಸನ್ 11ಕ್ಕೆ ಮೊದಲ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಕಾಲಿಟ್ಟ ಸಿಂಗರ್ ಹನುಮಂತ ಬಂದ ಕೆಲ ದಿನಗಳಲ್ಲೇ ಎಲ್ಲರ ಮನಗೆದ್ದಿದ್ದಾರೆ. ತನ್ನ ಮುಗ್ಧತೆ, ಸರಳ ಮಾತುಕತೆಯಿಂದ ಎಲ್ಲರ ಹೃದಯಕ್ಕೆ ಹತ್ತಿರವಾಗಿದ್ದಾರೆ. ದೊಡ್ಮನೆಯೊಳಗೆ ಇವರು ಯಾವಾಗಲೂ ಒಂದು ಲುಂಗಿ, ಶರ್ಟ್ ನಲ್ಲಿ ಮಾತ್ರ ಕಾಣಿಸುತ್ತಾರೆ. ವೀಕೆಂಡ್ ವಾರದ ಕತೆಯ ದಿನದಂದು ಇತರೆ ಎಲ್ಲಾ ಸ್ಪರ್ಧಿಗಳು ಅಂದವಾದ ಲಕ್ಸುರಿ ಬಟ್ಟೆಯಿಂದ ಮಿಂಚಿದರೆ ಇವರು ಮಾತ್ರ ಅದೇ ಲುಂಗಿ ಸುತ್ತಿ ಕೂತಿರುತ್ತಿದ್ದರು.
ಇದನ್ನು ಕಂಡ ಸುದೀಪ್ ಕಳೆದ ವಾರ ಹನುಮಂತನ ಬಳಿ, ಯಾಕೆ ಅವರಂತೆ ಒಳ್ಳೆ ಬಟ್ಟೆ ಧರಿಸಿಲ್ಲ ಎಂದು ಕೇಳಿದರು. ಅದಕ್ಕೆ ಹನುಮಂತ, ನನ್ನ ಬಳಿ ಛಲೊ ಬಟ್ಟಿ ಇಲ್ರಿ ಎಂದು ಬೇಸರದಿಂದ ಹೇಳಿದ್ದರು. ಅದಕ್ಕೆ ಸುದೀಪ್ ಅವರು, ‘ನಾನು ನನ್ನ ಡಿಸೈನರ್ಗೆ ಹೇಳಿ ಬಟ್ಟೆ ಕಳಿಸುತ್ತೀನಿ ಹಾಕಿಕೊಳ್ತೀರಾ?’ ಎಂದು ಕೇಳಿದ್ದರು. ಅದಕ್ಕೆ ಖುಷಿಯಿಂದ ಒಪ್ಪಿಕೊಂಡಿದ್ದರು ಹನುಮಂತು.
ಹನುಮಂತು ನಿಮ್ಮ ಬಟ್ಟೆಯ ಅಳತೆ ನಮಗೆ ಕೊಡಿ. ನಮ್ಮ ಡಿಸೈನರ್ಗೆ ಹೇಳಿ ನಿಮಗೆ ಬಟ್ಟೆ ಕಳುಹಿಸುತ್ತೇವೆ ಅನ್ನೋ ಭರವಸೆ ಕೊಟ್ಟಿದ್ದರು ಸುದೀಪ್. ಅದರಂತೆ ಇದೀಗ ಬಾದ್ ಷಾ, ಹನುಮಂತನಿಗಾಗಿ ಹಲವು ಡಿಸೈನರ್ ಬಟ್ಟೆಗಳನ್ನು ಕಳಿಸಿಕೊಟ್ಟಿದ್ದಾರೆ. ಇದರಲ್ಲಿ ಅಂಡರ್ವೇರ್ ಕೂಡ ಇದೆ. ಈ ಮೂಲಕ ಸುದೀಪ್ ಕೊಟ್ಟ ಮಾತನ್ನು ತಪ್ಪದೆ ಉಳಿಸಿಕೊಂಡಿದ್ದನ್ನು ಕಂಡು ನೆಟ್ಟಿಗರು ತಲೆಬಾಗಿದ್ದಾರೆ.
ಕಿಚ್ಚ ಸುದೀಪ್ ಅವರು ಬಟ್ಟೆ ಜತೆಗೆ ಲೆಟರ್ ಕೂಡ ಕಳುಹಿಸಿದ್ದಾರೆ. ಲೆಟರ್ನಲ್ಲಿ ಹೀಗಿದೆ: ‘‘ಮೈ ಮುಚ್ಚೋ ಬಟ್ಟೆ ನೋಡಿ ಮಾನ ವ ಅಳೀಬೇಡ್ರಿ, ಮನಸು ತೋರುವ ನಗುವ ನೋಡದೇ ಸುಮ್ಮನೇ ಇರಬೇಡ್ರಿ, ಕುರಿಯ ಕಾಯೋ ಕುರಿಗಾಹಿ ಕೊಡುತಾನೋ ಕಂಬಳಿ, ಜಗವ ಕಾಯೋ ರೈತ ಸ್ನೇಹಿ ನೀಡುತಾನೋ ಅಂಬಲಿ, ಲೋ ತಮ್ಮ ಹನುಮಂತ ದಿನವೂ ಜಳಕ ಮಾಡೋ, ದಿನದಿನವೂ ಪದವ ಕಟ್ಟಿ ಹೊಸ ಹಾಡ ಹಾಡೋ’’ ಎಂದು ತಿಳಿಸಿದ್ದಾರೆ.
ಕಿಚ್ಚ ಸುದೀಪ್ ಉಡುಗೊರೆಗೆ ಭಾವುಕರಾದ ಹನುಮಂತ ಅವರು ನನಗೆ ಇದನ್ನ ನಂಬೋದಕ್ಕೆ ಆಗುತ್ತಿಲ್ಲ. ಅಷ್ಟೊಂದು ಖುಷಿ ಆಗುತ್ತಾ ಇದೆ. ಥ್ಯಾಂಕ್ಯು ಸಾರ್ ಧನ್ಯವಾದಗಳು ಎಂದು ಹೇಳಿದ್ದಾರೆ. ಹನುಮಂತನಿಗಾಗಿ ಸುದೀಪ್ ಅವರು ಕಳುಹಿಸಿರುವ ಹೊಸ ಶರ್ಟ್, ಹೊಸ ಬಟ್ಟೆಗಳ ಜೊತೆಗೆ ಚೆಡ್ಡಿ ಎಲ್ಲವೂ ಜನಪ್ರಿಯ ಬ್ರ್ಯಾಂಡ್ನ ದುಬಾರಿ ಬಟ್ಟೆ ಆಗಿವೆ.
BBK 11: ಮನೆಗೆ ಬಂದ ಮೊದಲ ವಾರದಲ್ಲೇ ಜೈಲಿಗೆ ಹೋದ ರಜತ್: ಮುಳುವಾಗಿದ್ದು ಆ ಒಂದು ಪದ