Thursday, 12th December 2024

ಮಲಯಾಳಂ ನಟ ಕೊಲ್ಲಂ ಸುಧಿ ಕಾರು ಅಪಘಾತದಲ್ಲಿ ನಿಧನ

ತ್ರಿಶೂರ್: ಮಲಯಾಳಂ ನಟ ಮತ್ತು ಮಿಮಿಕ್ರಿ ಕಲಾವಿದ ಕೊಲ್ಲಂ ಸುಧಿ ಕಾರು ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ತ್ರಿಶೂರ್​ನ ಕೈಪಮಂಗಲಂ ಪಣಾಂಬಿಕುನ್​ನಲ್ಲಿ ಈ ಘಟನೆ ಸಂಭವಿಸಿದೆ. ಕೊಲ್ಲ ಸುಧಿ ಮತ್ತು ತಂಡ ಕೋಯಿ ಕ್ಕೋಡ್​ನ ವಡಕಾರದಲ್ಲಿ ಖಾಸಗಿ ವಾಹಿನಿಯೊಂದರಲ್ಲಿ ಕಾರ್ಯಕ್ರಮ ಮುಗಿಸಿ ಹಿಂತಿರುಗುತ್ತಿದ್ದ ವೇಳೆ ಅವರು ಪ್ರಯಾಣಿಸುತ್ತಿದ್ದ ಕಾರು ಎದುರಿನಿಂದ ಬರುತ್ತಿದ್ದ ಪಿಕಪ್​ಗೆ ಡಿಕ್ಕಿ ಹೊಡೆದಿದೆ.

ಅಪಘಾತದಲ್ಲಿ ಸುಧಿ ಗಂಭೀರವಾಗಿ ಗಾಯಗೊಂಡಿದ್ದು, ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ದುರ ದೃಷ್ಟವಶಾತ್​ ಬದುಕಿಸಲು ಸಾಧ್ಯ ವಾಗಲಿಲ್ಲ. ಇನ್ನೂ ಸುಧಿ ಜೊತೆ ನಟ ಬಿನು ಅಡಿಮಲಿ, ಉಲ್ಲಾಸ್​ ಆರೂರ್​ ಮತ್ತು ಮಹೇಶ್​ ಕೂಡ ಜೊತೆಗಿದ್ದರು. ಅವರಿಗೂ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

ಸುಧಿ ಕಾರಿನ ಮುಂಭಾಗದ ಸೀಟ್​ನಲ್ಲಿ ಕುಳಿತಿದ್ದರು. ಉಲ್ಲಾಸ್​ ಆರೂರ್ ಕಾರು ಡ್ರೈವ್​ ಮಾಡುತ್ತಿದ್ದರು. ಚಾಲಕ ನಿದ್ರೆಗೆ ಜಾರಿದ ಪರಿಣಾಮ ಅಪಘಾತ ಸಂಭವಿಸಿದೆ ಎಂದು ವರದಿಯಾಗಿದೆ. ಅಪಘಾತದಲ್ಲಿ ಕಾರು ಸಂಪೂರ್ಣ ನಜ್ಜು ಗುಜ್ಜಾಗಿದೆ. ಸುಧಿಗೆ ತಲೆಗೆ ಪೆಟ್ಟಾದ ಕಾರಣ ಅವರು ಸಾವನ್ನಪ್ಪಿದ್ದಾರೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.

ಕೊಲ್ಲಂ ಸುಧಿ ನಿಧನಕ್ಕೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್​ ಸಂತಾಪ ಸೂಚಿಸಿದ್ದಾರೆ. ಒಬ್ಬ ಅದ್ಭುತ ಕಲಾವಿದನ ನಿಧನಕ್ಕೆ ಇಡೀ ಮಲಯಾಳಂ ಚಿತ್ರರಂಗವೇ ಕಣ್ಣೀರಿಟ್ಟಿದೆ.