ತುಮಕೂರು: ಆರ್ಥಿಕ, ಶೈಕ್ಷಣಿಕ, ರಾಜಕೀಯವಾಗಿ ಹಿಂದುಳಿದಿರುವ ಕುರುಬರ ಸಮಾಜಕ್ಕೆ ಸರಕಾರದಿಂದ ಸಿಗಬೇಕಾಗಿರುವ ಸವಲತ್ತುಗಳ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಕಾಳಿದಾಸ ವಿದ್ಯಾವರ್ಧಕ ಸಂಘ , ಜಿಲ್ಲಾ ಕುರುಬರ ಸಂಘ, ಕರ್ನಾಟಕ ಪ್ರದೇಶ ಕುರುಬರ ಸಂಘದ ಜಿಲ್ಲೆಯ ಪದಾಧಿಕಾರಿ ಹಾಗೂ ನಿರ್ದೇಶಕರುಗಳ ಸಹಯೋಗದೊಂದಿಗೆ ಮೇ.28 ರಂದು ಶನಿವಾರ ನಗರದ ಕಾಳಿದಾಸ ಪ್ರೌಢಶಾಲೆ ಮೈದಾನದಲ್ಲಿ ಬೆಳಿಗ್ಗೆ 11ಕ್ಕೆ ಜಿಲ್ಲಾ ಕುರುಬರ ಜಾಗೃತಿ ಬೃಹತ್ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಹಿಂದುಳಿದ ಜಾತಿಗಳ ಒಕ್ಕೂಟದ ಅಧ್ಯಕ್ಷರಾದ ಕೆ.ಎಂ. ರಾಮಚಂದ್ರಪ್ಪ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಸುಮಾರು 3.50 ಲಕ್ಷ ಜನಸಂಖ್ಯೆ ಹೊಂದಿರುವ ಕುರುಬ ಸಮಾಜಕ್ಕೆ ಇಂದಿಗೂ ರಾಜಕೀಯ ಪ್ರಾತಿನಿಧ್ಯ ಸಿಕ್ಕಿಲ್ಲ, ಇದರ ಜೊತೆಗೆ ಶೈಕ್ಷಣಿಕವಾಗಿ, ಆರ್ಥಿಕವಾಗಿ ಸಾಮಾಜಿಕವಾಗಿ ನಮ್ಮ ಸಮಾಜ ಜಾಗೃತಿಗೊಳ್ಳಬೇಕಿದೆ. ಈ ಹಿನ್ನಲೆಯಲ್ಲಿ ಸಂಘಟನೆಯನ್ನು ಬಲಪಡಿಸಲು ಈ ಸಮಾವೇಶ ನಡೆಯಲಿದೆ ಎಂದರು.
ಸಮಾವೇಶಕ್ಕೆ ಸಿದ್ಧರಾಮಯ್ಯ
ಸಮಾವೇಶಕ್ಕೆ ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕರಾದ ಸಿದ್ಧರಾಮಯ್ಯ ಅವರನ್ನು ಮಾತ್ರ ಆಹ್ವಾನಿಸಲಾಗಿದೆ. ಯಾಕೆಂದರೆ ಹಿಂದುಳಿದ ಸಮಾಜಗಳಿಗೆ ಅನೇಕ ಸೌಲಭ್ಯಗಳನ್ನು ಕಲ್ಪಿಸಿರುವ ಅವರಿಗೆ ಹಿಂದುಳಿದ ಸಮಾಜಗಳ ಮೇಲೆ ಬಹಳಷ್ಟು ಕಾಳಜಿಯನ್ನು ಹೊಂದಿದ್ದಾರೆ ಎಂದರು.
ಸ್ವಾತAತ್ರö್ಯ ಬಂದು 75 ವರ್ಷಗಳು ಕಳೆದರೂ ಕುರುಬ ಸಮಾಜ ಸಾಕಷ್ಟು ಪ್ರಗತಿ ಸಾಧಿಸಿಲ್ಲ, ಸಮಾಜದ ಒಳಗೆ ಯಾವುದೇ ಒಡಕು, ಭಿನ್ನಾಭಿಪ್ರಾಯ ಪಕ್ಷಬೇಧಕ್ಕೆ ಅವಕಾಶ ಕೊಡದೆ ಒಂದಾಗಬೇಕಾದ ಅನಿವಾರ್ಯತೆ ಬಂದಿದೆ. ಇಂದು ಅನೇಕ ಬಲಿಷ್ಠ ಸಮುದಾಯಗಳ ಮುಖಂಡರು ತಮ್ಮ ಸಮುದಾಯಗಳಿಗೆ 2ಎ ಮೀಸಲಾತಿಗಾಗಿ ಆಗ್ರಹಿಸುತ್ತಿದ್ದಾರೆ. ಹಿಂಬಾಗಿಲಿನಿಂದ ಮೀಸಲಾತಿ ಪಡೆದುಕೊಳ್ಳಲು ಹೊರಟಿದ್ದಾರೆ. ಇದರ ವಿರುದ್ಧ ಅನೇಕ ಹಿಂದುಳಿದ ವರ್ಗಗಳ ಪರವಾಗಿ ಧ್ವನಿ ಎತ್ತುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಹೇಳಿದರು.
ಹಿಂದುಳಿದ ವರ್ಗಗಳ ಡಿ. ದೇವರಾಜು ಅರಸು ಅಭಿವೃದ್ಧಿ ನಿಗಮಕ್ಕೆ 205 ಜಾತಿಗಳು ಸೇರುತ್ತವೆ. ಈ ನಿಗಮಕ್ಕೆ ಈ ಹಿಂದೆ 100 ಕೋಟಿ ಅನುದಾನ ಬಿಡುಗಡೆ ಯಾಗಿತ್ತು. ಆದರೆ ಈಗ 80 ಕೋಟಿ ರು. ಮಾತ್ರ ಮೀಸಲಿಟ್ಟಿದ್ದಾರೆ. ನಿಗಮಕ್ಕೆ ಸರಕಾರ ಸರಿಯಾಗಿ ಅನುದಾನ ಕಲ್ಪಿಸುವಲ್ಲಿ ವಿಫಲವಾಗಿದೆ ಎಂದರು.
ಈ ಎಲ್ಲಾ ಅನ್ಯಾಯಗಳ ವಿರುದ್ಧ ಜಾಗೃತಿ ಮೂಡಿಸಲು ಮತ್ತು ಧ್ವನಿ ಎತ್ತಲು ಅತಿ ಹಿಂದುಳಿದ ವರ್ಗಗಳಿಗೆ ದೊರೆಯುವ ಸರ್ಕಾರಿ ಸವಲತ್ತುಗಳ ಬಗ್ಗೆ ಜಾಗೃತಿ ಮೂಡಿಸುವ ಹಾಗೂ ಅವುಗಳನ್ನು ದೊರಕಿಸಿಕೊಡುವ ಜವಾಬ್ದಾರಿ ಹಿಂದುಳಿದ ಸಮುದಾಯಗಳ ಹಿರಿಯಣ್ಣನಂತಿರುವ ನಮ್ಮ ಕುರುಬ ಸಮಾಜದ ಮೇಲಿದೆ. ಹಿಂದುಳಿದ ವರ್ಗಗಳ ರಾಜಕೀಯ ಮೀಸಲಾತಿಗಾಗಿ ಮುಂದೆ ನಿಂತು ನಮ್ಮೆಲ್ಲರ ಹಕ್ಕಿಗಾಗಿ ಸಂಘಟಿತರಾಗಿ ಹೋರಾಡಬೇಕಿದೆ. ಹೋರಾಟದ ಮುಖಾಂತರ ನಮ್ಮ ಹಿಂದುಳಿದ ಸಮುದಾಯಗಳಿಗೆ ದೊರೆಯಬೇಕಿರುವ ಹಕ್ಕು ಮತ್ತು ಸವಲತ್ತುಗಳನ್ನು ಪಡೆಯಬೇಕಿರುವ ಹಿನ್ನಲೆಯಲ್ಲಿ ಜಿಲ್ಲಾ ಕುರುಬರ ಬೃಹತ್ ಸಮಾ ವೇಶವನ್ನು ಹಮ್ಮಿಕೊಳ್ಳಲಾಗಿದೆ. ಈ ಸಮಾವೇಶದಲ್ಲಿ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಿಂದ ಸುಮಾರು 25 ರಿಂದ 30 ಸಾವಿರ ಮಂದಿ ಸೇರುವ ನಿರೀಕ್ಷೆ ಇದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಹಿಂದುಳಿದ ಜಾತಿಗಳ ಒಕ್ಕೂಟದ ಅಧ್ಯಕ್ಷರಾದ ಕೆ.ಎಂ. ರಾಮಚಂದ್ರಪ್ಪ, ಕರ್ನಾಟಕ ಪ್ರದೇಶ ಕುರುಬರ ಸಂಘದ ರಾಜ್ಯ ಅಧ್ಯಕ್ಷರಾದ ಸುಬ್ರಮಣ್ಯ, ಸಂಘದ ಆಂತರಿಕ ಲೆಕ್ಕ ಪರಿಶೋಧಕರು ಸಿ ಪುಟ್ಟರಾಜು , ಕರ್ನಾಟಕ ಪ್ರದೇಶ ಕುರುಬರ ಸಂಘದ ನಿರ್ದೇಶಕರುಗಳಾದ ಕೃಷ್ಣಮೂರ್ತಿ, ರಾಮಕೃಷ್ಣಪ್ಪ, ಟಿ ಇ ರಘುರಾಮ್ , ಎಸ್ ಶಂಕರ್, ತಿಪಟೂರು ಹೊನ್ನವಳ್ಳಿ ಕ್ಷೇತ್ರದ ಮಾಜಿ ಜಿಪಂ ಸದಸ್ಯರಾದ ನಾರಾಯಣ್ , ಪ್ರಜಾವಾಣಿಯ ಹಿರಿಯ ವರದಿಗಾರರಾದ ಸಾಂಬ ಸದಾಶಿವ ರೆಡ್ಡಿ, ಮಾಲೂರು ಸೋಮಣ್ಣ, ನಿವೃತ್ತ ಡಿವೈಎಸ್ಪಿ ನಾಗರಾಜು, ಮಧುಗಿರಿ ತಾಲೂಕಿನ ಕುರುಬ ಸಂಘದ ಶಿವಣ್ಣ, ಮರಿಯಣ್ಣ, ಕಾಳಿದಾಸ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷರಾದ ದೊಡ್ಡಯ್ಯ ಕುಣಿಗಲ್, ಪ್ರಧಾನ ಕಾರ್ಯದರ್ಶಿ ಭೀಮರಾಜು, ನಿರ್ದೇಶಕರುಗಳಾದ ಗಿರೀಶ್, ಗೂಳೂರು ಕೃಷ್ಣಮೂರ್ತಿ, ತುಮಕೂರು ಮಹಾನಗರ ಪಾಲಿಕೆ ಮಾಜಿ ಸದಸ್ಯರಾದ ಮಹೇಶ್, ಜ್ವಾಲಾ ಮಾಲಾ ರಾಜು, ಕನಕ ಯುವ ಸೇನೆ ಅಧ್ಯಕ್ಷ ಕೆಂಪರಾಜು, ಕಾಂಗ್ರೆಸ್ ಯುವ ಮುಖಂಡ ಗುರುಪ್ರಸಾದ್, ಕಾಳಿದಾಸ ವಿದ್ಯಾವರ್ಧಕ ಸಂಘದ ವ್ಯವಸ್ಥಾಪಕ ಬಸವರಾಜು.ವೈ ಈ, ಉಪಸ್ಥಿತರಿದ್ದರು.