Friday, 22nd November 2024

Maarnami Movie: ಕರಾವಳಿ ಪ್ರೇಮಕಥೆಯಲ್ಲಿ ರಿತ್ವಿಕ್-ಚೈತ್ರಾ ಆಚಾರ್; ‘ಮಾರ್ನಮಿ’ ಟೈಟಲ್ ಟೀಸರ್ ಔಟ್‌

Maarnami Movie

ಬೆಂಗಳೂರು: ವಿಭಿನ್ನ ಕಥೆಗಳ ಮೂಲಕವೇ ಅನೇಕ ಸಿನಿಮಾಗಳು ಸದ್ದು ಮಾಡುತ್ತವೆ. ಆ ಸಾಲಿಗೆ ಹೊಸ ಸೇರ್ಪಡೆ ʼಮಾರ್ನಮಿʼ. ʼಪಿಂಗಾರʼ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಪಡೆದಿರುವ ಪ್ರೀತಂ ಆರ್. ಶೆಟ್ಟಿ ಗರಡಿಯಲ್ಲಿ ನಿರ್ದೇಶನ ಕಲಿತಿರುವ ರಿಶಿತ್ ಶೆಟ್ಟಿ ಚೊಚ್ಚಲ ಪ್ರಯತ್ನವೇ ಈ ʼಮಾರ್ನಮಿʼ (Maarnami Movie). ಈ ಚಿತ್ರದ ಟೈಟಲ್ ಟೀಸರ್ ಅನ್ನು ಬೆಂಗಳೂರಿನ ಎಸ್.ಆರ್.ವಿ. ಥಿಯೇಟರ್‌ನಲ್ಲಿ ಬಿಡುಗಡೆ ಮಾಡಲಾಯಿತು. ಈ ವೇಳೆ ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ.

ಸಂಗೀತ ನಿರ್ದೇಶಕ ಚರಣ್ ರಾಜ್ ಮಾತನಾಡಿ, ʼʼತುಂಬಾ ಖುಷಿಯಾಗುತ್ತಿದೆ. ಹೊಸ ತಂಡ, ಹೊಸ ನಿರ್ದೇಶಕರು. ಈ ತಂಡದಲ್ಲಿ ನನ್ನ ಅಚ್ಚುಮೆಚ್ಚಿನ ನಟರೆಲ್ಲ ಇದ್ದಾರೆ. ತುಂಬಾ ಒಳ್ಳೆ ಕಥೆ. ನನಗೂ ಒಳ್ಳೆ ಅವಕಾಶ ಇದೆ ಎನಿಸಿತು. ಸಂಗೀತದ ಕೆಲಸ ಆರಂಭಿಸಿದ್ದೇನೆ. ಟೈಟಲ್ ಟೀಸರ್ ರೆಡಿ ಮಾಡಿದ್ದೇವೆ. ಇಷ್ಟೇ ಹಾಡುಗಳು ಅಂತ ತೀರ್ಮಾನ ಮಾಡಿಲ್ಲ. ಆದರೆ 5 ಹಾಡುಗಳಂತೂ ಇರುತ್ತವೆʼʼ ಎಂದರು.

ನಿರ್ದೇಶಕ ರಿಶಿತ್ ಶೆಟ್ಟಿ ಮಾತನಾಡಿ, ʼʼಒಂದಷ್ಟು ಸಿನಿಮಾಗಳಲ್ಲಿ ಅಸಿಸ್ಟೆಂಟ್, ಅಸೋಸಿಯೆಟ್ ಆಗಿ, ರೈಟರ್ ಆಗಿ ಕೆಲಸ ಮಾಡಿದ್ದೇನೆ. ಪ್ರೀತಂ ಶೆಟ್ಟಿ ಅವರ ಜತೆ ಒಂದಷ್ಟು ಚಿತ್ರಗಳಿಗೆ ಕೆಲಸ ಮಾಡಿದ್ದೇನೆ. ಮಂಗಳೂರಲ್ಲಿ ಸ್ಕ್ರಿಪ್ಟ್ ಕೆಲಸಕ್ಕೆ ಹೋಗಿದ್ದಾಗ ಸುಧಿ ಪರಿಚಯವಾಗಿದ್ದು. ಅವರು ಒಂದು ಕಥೆ ಮಾಡಿಕೊಂಡಿದ್ದರು. ಅವರು ನಿರ್ದೇಶನ ಮಾಡಲು ಇಷ್ಟಇಲ್ಲ ಅಂದಾಗ ನಾನು ಕಥೆ ಕೇಳಿದೆ. ಅವರು ಪ್ರೀತಿಯಿಂದ ಕೊಟ್ಟರು. ರಿತ್ವಿಕ್ ಅವರಿಗೆ ಹೇಳಿದೆ. ಅವರು ಇದಕ್ಕೆ ಏನೋ ಬೇಕೋ ಅನಿಸುತ್ತಿದೆ ಎಂದರು. ಬಳಿಕ 6 ತಿಂಗಳ ವರ್ಕ್ ಮಾಡಿಕೊಂಡು ಅವರ ಬಳಿ ಹೋದೆ. ಅವರು ಕಥೆ ಕೇಳಿ ಖುಷಿಪಟ್ಟರು. ಬಳಿಕ ಪ್ರೊಡ್ಯೂಸರ್ ಹುಡುಕಾಟದಲ್ಲಿದ್ದಾಗ ನಿಶಾಂತ್ ಭೇಟಿಯಾದರು. ಆ ಬಳಿಕ ಟೈಟಲ್ ಟೀಸರ್ ಮಾಡಿಕೊಂಡು ಬಂದೆವು. ಆ ಬಳಿಕ ನಿರ್ಮಾಪಕರು ಇಷ್ಟಪಟ್ಟರು. ಚಿತ್ರದ ಪ್ರತಿ ಹಂತದಲ್ಲಿ ನಿಶಾಂತ್ ಸಹಕಾರ ಕೊಟ್ಟಿದ್ದಾರೆʼʼ ಎಂದು ತಿಳಿಸಿದರು.

ನಟ ರಿತ್ವಿಕ್ ಮಾತನಾಡಿ, ʼʼಈ ಚಿತ್ರದ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ. ಒಂದು ಕಥೆ. ಚೆನ್ನಾಗಿ ಎಳೆದುಕೊಂಡು ಬಂದಿದ್ದು ರಿಶಿತ್ ಶೆಟ್ಟಿ. ನಮಗೆ ಬೇಕು ಅಂದಿದೆಲ್ಲ ಕೊಡುತ್ತಿರುವುದು, ನಮಗೆ ಸಪೋರ್ಟ್ ಮಾಡುತ್ತಿರುವುದು ನಿರ್ಮಾಪಕ ನಿಶಾಂತ್. ಇಂತಹ ನಿರ್ಮಾಪಕರು ಅಪರೂಪ. ಈ ರೀತಿ ನಿರ್ಮಾಪಕರು ಇಂಡಸ್ಟ್ರಿಗೆ ಬರಬೇಕು. ಇವರು ಗೆದ್ದರೆ ಮತ್ತಷ್ಟು ಸಿನಿಮಾಗಳು ಮಾಡುತ್ತಾರೆ. ಕಥೆ ಚೆನ್ನಾಗಿದೆ. ಕರಾವಳಿ ಭಾಗದಲ್ಲಿ ನಡೆಯುವ ಅದ್ಭುತ ಲವ್ ಸ್ಟೋರಿ. ದಸರಾ ದಿನವನ್ನು ಮಾರ್ನಮಿ ಎಂದು ಕರೆಯುತ್ತಾರೆ. ಚಿತ್ರದಲ್ಲಿ ಒಳ್ಳೆಯ ಕಲಾವಿದರಿದ್ದಾರೆ. ಅದ್ಭುತ ತಾಂತ್ರಿಕ ವರ್ಗ ಇದೆʼʼ ಎಂದು ಮಾಹಿತಿ ಹಂಚಿಕೊಂಡರು.

ನಾಯಕಿ ಚೈತ್ರಾ ಆಚಾರ್ ಮಾತನಾಡಿ, ʼʼಕಥೆ ಬಹಳ ಇಷ್ಟವಾಯ್ತು. ಆದರೆ ಡೇಟ್ ಸಮಸ್ಯೆ ಇದೆ ಆಗಲ್ಲ ಎಂದೆ. ಮತ್ತೆ ಕಥೆ ನನ್ನ ಬಳಿಯೇ ಬಂತು. ಡೇಟ್ಸ್ ಅಡ್ಜಸ್ಟ್ ಮಾಡಿಕೊಳ್ಳೋಣಾ ಎಂದರು. ಅದ್ಭುತ ಕಥೆ. ಟೆಕ್ನಿಕಲ್ ಆಗಿ ಚಿತ್ರ ಸ್ಟ್ರಾಂಗ್ ಇದೆ. ರಿಷಿತ್ ಕಥೆ ಹೇಳಲು ಬಂದಾಗ ಎಲ್ಲಿಯೂ ಬೋರ್ ಆಗಲಿಲ್ಲ. ಇಷ್ಟು ಬೇಗ ಮುಗಿಯಿತಾ ಅನಿಸಿತು. ರಿತ್ವಿಕ್ ಅವರ ಜತೆ ಕೆಲಸ ಮಾಡಲು ಖುಷಿ ಇದೆ. ಕಥೆ ನಂಬಿದ್ದೇವೆ, ಚರಣ್ ರಾಜ್ ಅವರ ಮ್ಯೂಸಿಕ್ ಇದೆ. ನಾನು ಶೂಟಿಂಗ್ ಗೆ ಹೊರಡಲು ಎಕ್ಸೈಟ್ ಆಗಿದ್ದೇನೆʼʼ ಎಂದರು.

ʼಮಾರ್ನಮಿʼ ಸಿನಿಮಾದಲ್ಲಿ ರಿತ್ವಿಕ್ ಹಾಗೂ ಚೈತ್ರಾ ಜೆ. ಆಚಾರ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದು, ಪ್ರಕಾಶ್ ತುಮಿನಾಡು, ಸೋನು ಗೌಡ, ಜ್ಯೋತೀಶ್ ಶೆಟ್ಟಿ, ರೋಚಿತ್, ಯಶ್ ಶೆಟ್ಟಿ, ಮೈಮ್ ರಾಮದಾಸ್ ಹಾಗೂ ಚೈತ್ರಾ ಶೆಟ್ಟಿ ತಾರಾಬಳಗದಲ್ಲಿದ್ದಾರೆ. ಶಿವಸೇನ ಛಾಯಾಗ್ರಹಣ ನಿರ್ವಹಿಸುತ್ತಿದ್ದಾರೆ.

ಚಿತ್ರದ ಟೈಟಲ್ ಟೀಸರ್ ಗುನಾಧ್ಯ ಪ್ರೊಡಕ್ಷನ್ಸ್ ಯೂಟ್ಯೂಬ್ ಚಾನೆಲ್ ಬಿಡುಗಡೆಯಾಗಿದೆ. ಕರಾವಳಿ ಭಾಗದ ಹುಲಿವೇಷದ ಹಿನ್ನೆಲೆ ಹಾಗೂ ಹುಲಿವೇಷ ಸಂಸ್ಕೃತಿಯ ಎಳೆ ಚಿತ್ರದಲ್ಲಿ ಇರಲಿದೆ. ಗುನಾಧ್ಯ ನಿರ್ಮಾಣ ಸಂಸ್ಥೆ ಅಡಿಯಲ್ಲಿ ಶಿಲ್ಪಾ ನಿಶಾಂತ್ ನಿರ್ಮಾಣ ಮಾಡುತ್ತಿದ್ದಾರೆ. ಅಕ್ಟೋಬರ್ 1ರಿಂದ ಮಂಗಳೂರು ಸುತ್ತಮುತ್ತ ಚಿತ್ರೀಕರಣಕ್ಕೆ ನಡೆಸಲು ಚಿತ್ರತಂಡ ಸಜ್ಜಾಗಿದೆ.

ಈ ಸುದ್ದಿಯನ್ನೂ ಓದಿ: Sandalwood News: ಅಂಡಮಾನ್-ನಿಕೋಬಾರ್‌ ದ್ವೀಪದಲ್ಲಿ ಪೃಥ್ವಿ ಅಂಬಾರ್ ನಟನೆಯ ‘ಚೌಕಿದಾರ್’ ಚಿತ್ರತಂಡ