Thursday, 12th December 2024

ಮಿಮಿಕ್ರಿ ಕಲಾವಿದ ಮಾಧವ್​ ಮೋಘೆ ಕ್ಯಾನ್ಸರ್​’ಗೆ ಬಲಿ

ಮುಂಬೈ : ನಟ ಮತ್ತು ಮಿಮಿಕ್ರಿ ಕಲಾವಿದ ಮಾಧವ್​ ಮೋಘೆ ಅವರು ಶ್ವಾಸಕೋಶದ ಕ್ಯಾನ್ಸರ್​ನಿಂದಾಗಿ ಮೃತಪಟ್ಟಿದ್ದಾರೆ. ಬಾಲಿವುಡ್​ ನಟ ಸಂಜೀವ್ ಕಪೂರ್​ ಅವರ ಅನುಕರಣೆಗೆ ಜನಪ್ರಿಯವಾಗಿದ್ದ ಮೋಘೆ ಅವರು ಕಾಮೆಡಿ ಶೋಗಳಲ್ಲಿ ವೀಕ್ಷಕರ ಮನ ಸೆಳೆದಿದ್ದರು.

ಹಲವು ಹಿಂದಿ ಮತ್ತು ಮರಾಠಿ ಚಲನಚಿತ್ರಗಳಲ್ಲಿ ಕೂಡ ನಟಿಸಿದ್ದ ಮೋಘೆ ಅವರು, ‘ದಾಮಿನಿ’, ‘ಘಾತಕ್’, ‘ಮೈನೆ ಪ್ಯಾರ್ ಕ್ಯು ಕಿಯ’, ‘ಪಾರ್ಟ್​ನರ್’ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಬಾಲಿವುಡ್​ ನಟರಾದ ಸಂಜೀವ್ ಕಪೂರ್​, ಉತ್ಪಲ್ ದತ್​ ಮತ್ತು ರಾಜ್​ಕುಮಾರ್​ ಅವರ ವಿಶಿಷ್ಟ ಮಾತಿನ ಶೈಲಿಗಳನ್ನು ಸುಲಲಿತವಾಗಿ ಅನುಕರಿಸಿ, ಹಾಸ್ಯ ಸೃಷ್ಟಿಸುತ್ತಿದ್ದರು.

ಹಲವು ಟಿವಿ ಧಾರಾವಾಹಿಗಳಲ್ಲಿ ಕೂಡ ನಟಿಸಿದ್ದ ಮೋಘೆ ಅವರಿಗೆ ಇತ್ತೀಚೆಗೆ ಶ್ವಾಸಕೋಶದ ಕ್ಯಾನ್ಸರ್​ ಪತ್ತೆಯಾಗಿತ್ತು. ಕ್ಯಾನ್ಸರ್​ ಅಂತಿಮ ಹಂತದಲ್ಲಿದ್ದ ಕಾರಣ ಬಾಂಬೆ ಹಾಸ್ಪಿಟಲ್​ ವೈದ್ಯರು ಚಿಕಿತ್ಸೆ ಬೇಡವೆಂದು ಮನೆಗೆ ಕಳುಹಿಸಿದ್ದರು. ಮೋಘೆ ಅವರು ತಮ್ಮ ನಿವಾಸದಲ್ಲೇ ಭಾನುವಾರ(ಜುಲೈ 11) ಬೆಳಿಗ್ಗೆ 6 ಗಂಟೆಯ ವೇಳೆ ಕೊನೆಯುಸಿರೆಳೆದರು ಎಂದು ಪುತ್ರಿ ಪ್ರಾಚಿ ಮೋಘೆ ತಿಳಿಸಿದ್ದಾರೆ.