Wednesday, 4th December 2024

Nivin Pauly: ಲೈಂಗಿನ ಕಿರುಕುಳ ಪ್ರಕರಣದಿಂದ ಮಲಯಾಳಂ ನಟ ನಿವಿನ್‌ ಪೌಲಿಗೆ ಕ್ಲೀನ್‌ ಚಿಟ್‌!

ನವದೆಹಲಿ: ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಸಿಲುಕಿದ್ದ ಮಲಯಾಳಂ ಖ್ಯಾತ ನಟ ನಿವಿನ್‌ ಪೌಲಿ (Nivin Pauly) ಆರೋಪ ಮುಕ್ತರಾಗಿದ್ದಾರೆ. ಸರಿಯಾದ ಸೂಕ್ತ ದಾಖಲೆಗಳು ಇಲ್ಲದ ಕಾರಣ ಅವರು ಲೈಂಗಿಕ ಪ್ರಕರಣದಿಂದ ಕ್ಲೀನ್‌ ಚಿಟ್‌ ಪಡೆದಿದ್ದಾರೆ.

ಸಿನಿಮಾವೊಂದರಲ್ಲಿ ಅವಕಾಶ ನೀಡುತ್ತೇನೆಂದು ವಂಚಿಸಿ ಕಳೆದ ವರ್ಷ ದುಬೈ ಹೋಟೆಲ್‌ವೊಂದರಲ್ಲಿ ತನಗೆ ಲೈಂಗಿಕ ಕಿರುಕುಳ ನೀಡಲಾಗಿತ್ತು ಎಂದು ಎರಡು ತಿಂಗಳ ಹಿಂದೆ ಕೇರಳದ ಎರ್ನಾಕುಲಂ ಜಿಲ್ಲೆಯ ಯುವತಿಯೊಬ್ಬರು ನಟ ನಿವಿನ್‌ ಪೌಲಿ ಸೇರಿದಂತೆ ಆರು ಮಂದಿ ವಿರುದ್ದ ದೂರು ದಾಖಲಿಸಿದ್ದರು. ಅದರಂತೆ ಎಫ್‌ಐಆರ್‌ ದಾಖಲಾಗಿತ್ತು. ಆದರೆ, ಇದೀಗ ಸೂಕ್ತ ದಾಖಲೆಗಳು ಇಲ್ಲದ ಕಾರಣ ನಟ ನಿವಿನ್‌ ಪೌಲಿ ಆರೋಪ ಮುಕ್ತರಾಗಿದ್ದಾರೆ.

ಘಟನೆಯ ದಿನಾಂಕ ಮತ್ತು ಸಮಯದಲ್ಲಿ ಅವರು ನಿರ್ದಿಷ್ಟ ಸ್ಥಳದಲ್ಲಿ ಇರಲಿಲ್ಲವೆಂದು ವಿಚಾರಣೆಯ ವೇಳೆ ಸಾಬೀತಾಗಿದೆ. ಇದರ ಪರಿಣಾಮ ಈ ಪ್ರಕರಣದಲ್ಲಿ ಆರನೇ ಆರೋಪಿ ಎಂದು ಹೆಸರಿಸಲಾದ ನಿವಿನ್ ಪೌಲಿ ಅವರನ್ನು ಔಪಚಾರಿಕವಾಗಿ ಎಲ್ಲಾ ಆರೋಪಗಳಿಂದ ಮುಕ್ತಗೊಳಿಸಲಾಗಿದೆ. ಕೊತಮಂಗಲಂ ಡಿವೈಎಸ್ಪಿ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಸಲ್ಲಿಸಿದ ವರದಿಯಲ್ಲಿ ಇದನ್ನು ನಿಖರವಾಗಿ ವಿವರಿಸಲಾಗಿದೆ.

ಚಲನಚಿತ್ರೋದ್ಯಮದಲ್ಲಿನ ಲೈಂಗಿಕ ದುರ್ನಡತೆಯ ಸಮಸ್ಯೆಗಳನ್ನು ಪರಿಹರಿಸುವ ಹೇಮಾ ಸಮಿತಿಯ ವರದಿ ಬಿಡುಗಡೆಯಾದ ನಂತರ ಸ್ಥಾಪಿಸಲಾದ ವಿಶೇಷ ತನಿಖಾ ತಂಡದ (ಎಸ್‌ಐಟಿ) ಗಮನಕ್ಕೆ ದೂರುದಾರರು ತಂದಿದ್ದರು. ಇದಾದ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿತ್ತು.

ಸ್ಪಷ್ಟನೆ ನೀಡಿದ್ದ ನಿವಿನ್‌ ಪೌಲಿ

ಸೆಪ್ಟಂಬರ್‌ನಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ನಿವಿನ್ ಪೌಲಿ, “ನನ್ನ ವಿರುದ್ಧ ಎಫ್‌ಐಆರ್ (ಪ್ರಥಮ ಮಾಹಿತಿ ವರದಿ) ದಾಖಲಿಸಲಾಗಿದೆ. ನಾನು ಇದರ ವಿರುದ್ಧ ಕಾನೂನು ಹೋರಾಟ ನಡೆಸುತ್ತೇನೆ. ನಾನು ನಿರಾಪರಾಧಿ ಎಂದು ಸಾಬೀತುಪಡಿಸಲು ನಾನು ಯಾವುದೇ ಮಟ್ಟಕ್ಕೆ ಹೋಗಲು ಸಿದ್ಧನಿದ್ದೇನೆ. ಏಕೆಂದರೆ ಈ ರೀತಿಯ ಸುಳ್ಳು ಆರೋಪಗಳನ್ನು ಯಾರ ವಿರುದ್ಧ ಬೇಕಾದರೂ ಮಾಡಬಹುದು. ನಾನು ಅವರೆಲ್ಲರ ಪರವಾಗಿ ಮಾತನಾಡುತ್ತಿದ್ದೇನೆ. ಇಲ್ಲದಿದ್ದರೆ, ಇಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ,” ಎಂದು ಅವರು ಹೇಳಿದ್ದರು.

ಇದೊಂದು ಪಿತೂರಿ ಎಂದು ಕರೆದಿದ್ದ ನಿವಿನ್ ಪೌಲಿ, ತನಗೆ ಮಹಿಳೆಯ ಪರಿಚಯವಿಲ್ಲ ಅಥವಾ ಅವರೊಂದಿಗೆ ಮಾತನಾಡಿಲ್ಲ ಎಂದು ಹೇಳಿದ್ದರು. ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿರುವವರ ಪೈಕಿ ಕೇವಲ ಒಬ್ಬರು ಮಾತ್ರ ನನಗೆ ತಿಳಿದಿದೆ ಎಂಬ ಅಂಶವನ್ನು ಅವರು ಒಪ್ಪಿಕೊಂಡಿದ್ದರು.

ನಿವಿನ್‌ ಪೌಲಿ ಅವರ ಪ್ರಮುಖ ಸಿನಿಮಾಗಳ ವಿವರ

ಮಲಯಾಳಂ ಖ್ಯಾತ ನಟರ ಪೈಕಿ ಒಬ್ಬರಾಗಿರುವ ನಿವಿನ್‌ ಪೌಲಿ ಅವರು ಇಲ್ಲಿಯವರೆಗೂ ೩೦ಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ನಟಿಸಿದ್ದಾರೆ. 2015ರಲ್ಲಿಇವರು ನಟಿಸಿದ್ದ ಪ್ರೇಮಂ ಸಿನಿಮಾ ಸಾಕಷ್ಟು ಖ್ಯಾತಿಯನ್ನು ತಂದುಕೊಟ್ಟಿತ್ತು. ಬೆಂಗಳೂರು ಡೇಸ್‌, ಓಂ ಶಾಂತಿ ಒಶಾನಾ, 1983, ಆಕ್ಷನ್‌ ಹೀರೋ ಬಿಜು, ಜಾಕೋಬ್‌ ಕಿಂಗ್‌ಡಮ್‌ ಆಫ್‌ ಹೆವೆನ್‌, ನೇರಮ್‌ ಸೇರಿದಂತೆ ಹಲವು ಖ್ಯಾತ ಸಿನಿಮಾಗಳನ್ನು ನೀಡಿದ್ದಾರೆ.

ಈ ಸುದ್ದಿಯನ್ನು ಓದಿ: BTS Movie: ಗಮನ ಸೆಳೆಯುತ್ತಿದೆ ‘ಬಿಟಿಎಸ್’ ಟ್ರೈಲರ್‌; ಹೊಸ ಪ್ರತಿಭೆಗಳ ಸಿನಿಮಾ ಈ ವಾರ ತೆರೆಗೆ