ಬೆಂಗಳೂರು: ನವೆಂಬರ್ 22ಕ್ಕೆ ಬಿಡುಗಡೆಯಾಗುತ್ತಿರುವ ʼಮರ್ಯಾದೆ ಪ್ರಶ್ನೆʼ ಸಿನಿಮಾ (Maryade Prashne Movie)ದ ಮೊದಲ ಹಾಡು ರಿಲೀಸ್ ಆಗಿದೆ. ಪ್ರಮೋದ್ ಮರವಂತೆ ಬರೆದು ನಟ ಶರಣ್ ಹೃದಯ ಅವರು ಹಾಡಿರುವ ಈ ʼಒಂದು ಮಿಡ್ಲ್ ಕ್ಲಾಸ್ ಆಂತೆಮ್ʼ ಸದ್ಯ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ʼಮರ್ಯಾದೆ ಪ್ರಶ್ನೆʼ ಸಿನಿಮಾದ ಸಂಗೀತ ನಿರ್ದೇಶಕ ಅರ್ಜುನ್ ರಾಮು ಈ ಹಾಡನ್ನು ಜಾನಪದ ಶೈಲಿಯಲ್ಲಿ ಕಂಪೋಸ್ ಮಾಡಿದ್ದಾರೆ.
ಈ ಹಾಡಿನಲ್ಲಿ ನಟರ ಪಾತ್ರದ ಪರಿಚಯದ ಜತೆ ಅವರು ಬದುಕುತ್ತಿರುವ ಮಧ್ಯಮ ವರ್ಗದ ಸಮಾಜವನ್ನು ಪ್ರೇಕ್ಷಕರ ಮುಂದಿಡುವ ಸಲುವಾಗಿ ಸಾಂದರ್ಭಿಕವಾಗಿ ಈ ಹಾಡನ್ನು ಬಳಸಲಾಗಿದೆ ಎಂದು ಚಿತ್ರದ ನಿರ್ದೇಶಕ ನಾಗರಾಜ ಸೋಮಯಾಜಿ ತಿಳಿಸಿದ್ದಾರೆ.
ಈಗಾಗಲೇ ಬಿಡುಗಡೆ ಮಾಡಿರುವ ಕ್ಯಾರೆಕ್ಟರ್ ಪೋಸ್ಟರ್‌ನಲ್ಲಿ ನಾಯಕ ರಾಕೇಶ್ ಅಡಿಗ ಒಬ್ಬ ಕಾರ್ಯಕರ್ತನಾಗಿ, ಸುನಿಲ್ ರಾವ್ ಡೆಲಿವರಿ ಬಾಯ್ ಆಗಿ ,ಪೂರ್ಣಚಂದ್ರ ಮೈಸೂರು ಕ್ಯಾಬ್ ಡ್ರೈವರ್ ಆಗಿ, ತೇಜು ಬೆಳ್ವಾಡಿ ಸೇಲ್ಸ್ ಗರ್ಲ್ ಆಗಿ ಮಿಂಚಿದ್ದಾರೆ. ಪೋಸ್ಟರ್ ಮೂಲಕವೇ ಚಿತ್ರದ ಬಗ್ಗೆ ಕುತೂಹಲ ಹೆಚ್ಚಿಸಿದ್ದಾರೆ.
ಮಧ್ಯಮ ವರ್ಗದ ಬಗ್ಗೆ ಇರುವ ಈ ಕತೆಯಲ್ಲಿ ಈ ಹಾಡು ತುಂಬಾ ಸೊಗಸಾದ ಸಾಹಿತ್ಯವನ್ನು ಒಳಗೊಂಡಿದೆ. ಈ ಹಾಡಿನ ಸಾಹಿತ್ಯದಲ್ಲಿ ಬರುವ ಪ್ರತಿ ಸಾಲುಗಳು ಧನಾತ್ಮಕ ಚಿಂತನೆಗೆ ಕರೆದೊಯ್ಯುತ್ತದೆ. ದಿನ ಬೆಳಗಾದರೆ ಕೇಳುವ ಹಾಡಾಗಿರಬೇಕು ಎಂಬುದು ಈ ಹಾಡಿನ ಮುಖ್ಯ ಉದ್ದೇಶ ಎಂದು ಚಿತ್ರತಂಡ ಹೇಳಿದೆ. ಈ ಹಾಡು ಸಕ್ಕತ್ ಸ್ಟುಡಿಯೋ ಯುಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಗೊಂಡಿದೆ.
ಒಂದು ಯಶಸ್ವಿ ಚಿತ್ರ ಯಾವ್ಯಾವ ಸ್ವರೂಪದಲ್ಲಿ ಪ್ರೇಕ್ಷಕರ ಗಮನಸೆಳೆಯುತ್ತದೆಯೋ ಆ ಎಲ್ಲ ರೀತಿಯಿಂದಲೂ ಸದ್ದು ಮಾಡುತ್ತಾ ಸಾಗುತ್ತಿರುವ ಫ್ಯಾಮಿಲಿ ಎಂಟರ್ ಟೈನರ್ ʼಮರ್ಯಾದೆ ಪ್ರಶ್ನೆʼ ಚಿತ್ರ ನವೆಂಬರ್ 22ಕ್ಕೆ ಬಿಡುಗಡೆಯಾಗಲಿದೆ. ಆಕರ್ಷಕ ಪೋಸ್ಟರ್ ಮೂಲಕ ಚಿತ್ರತಂಡ ಈಗಾಗಲೇ ರಿಲೀಸ್ ಡೇಟ್ ಘೋಷಣೆ ಮಾಡಿದೆ. ಚಿತ್ರದ ಪೋಸ್ಟರ್ ಇದೊಂದು ಫ್ಯಾಮಿಲಿ ಕುಳಿತು ನೋಡುವ ಸಿನಿಮಾ ಎನ್ನುವುದನ್ನು ಸಾರಿ ಹೇಳಿದೆ. ರಾಜ್ಯ ಮಾತ್ರವಲ್ಲ ಹೈದರಾಬಾದ್, ಚೆನ್ನೈ ಸೇರಿದಂತೆ ಬೇರೆ ರಾಜ್ಯಗಳ ನಗರಗಳ ಜತೆಗೆ ವಿದೇಶದಲ್ಲಿಯೂ ʼಮರ್ಯಾದೆ ಪ್ರಶ್ನೆʼ ಸಿನಿಮಾ ರಿಲೀಸ್ ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.
‘ಮರ್ಯಾದೆ ಪ್ರಶ್ನೆ’ ಸಿನಿಮಾದಲ್ಲಿ ರಾಕೇಶ್ ಅಡಿಗ, ಸುನೀಲ್ ರಾವ್, ಶೈನ್ ಶೆಟ್ಟಿ, ತೇಜು ಬೆಳವಾಡಿ, ಪೂರ್ಣಚಂದ್ರ ಮೈಸೂರು, ಪ್ರಭು ಮುಂಡ್ಕೂರ್, ರೇಖಾ ಕೂಡ್ಲಿಗಿ, ನಾಗೇಂದ್ರ ಶಾ, ಶ್ರವಣ್ ಮುಖ್ಯ ತಾರಾಗಣದಲ್ಲಿದ್ದಾರೆ. ಈ ಚಿತ್ರಕ್ಕೆ ನಿರ್ಮಾಪಕ ಪ್ರದೀಪ್ ಅವರೇ ಕಥೆ ಬರೆದಿದ್ದಾರೆ. ಕ್ರಿಯೆಟಿವ್ ಹೆಡ್ ಕೂಡ ಸಾಥ್ ಕೊಟ್ಟಿದ್ದಾರೆ. ನಿರ್ದೇಶಕ ನಾಗರಾಜ್ ಸೋಮಯಾಜಿ ಈ ಹಿಂದೆ ʼದಿ ಬೆಸ್ಟ್ ಆ್ಯಕ್ಟರ್ʼ ಮೈಕ್ರೋ ಮೂವಿ ಮಾಡಿದ್ದರು. ʼಮರ್ಯಾದೆ ಪ್ರಶ್ನೆʼ ಚಿತ್ರಕ್ಕೆ ಸಂದೀಪ್ ವೆಲ್ಲುರಿ ಕ್ಯಾಮೆರಾ ವರ್ಕ್ ಮಾಡಿದ್ದಾರೆ.
ಈ ಸುದ್ದಿಯನ್ನೂ ಓದಿ: Raju James Bond Movie: ಗುರುನಂದನ್ ಅಭಿನಯದ ನಗುವೇ ಪ್ರಧಾನವಾಗಿರುವ “ರಾಜು ಜೇಮ್ಸ್ ಬಾಂಡ್” ಚಿತ್ರ ರಿಲೀಸ್‌ಗೆ ರೆಡಿ