Thursday, 12th December 2024

Me Too Row: ʻಕ್ಯಾರವಾನ್‌ನಲ್ಲೂ ಹಿಡನ್‌ ಕ್ಯಾಮೆರಾʼ- ಚಿತ್ರರಂಗದ ಕರಾಳತೆ ಬಿಚ್ಚಿಟ್ಟ ನಟಿ ರಾಧಿಕಾ ಶರತ್‌ಕುಮಾರ್‌

Me Too

ಚೆನ್ನೈ: ಮಲಯಾಳಂ ಚಿತ್ರರಂಗ(Mollywood)ದಲ್ಲಿ ಭುಗಿಲೆದ್ದಿರುವ ಕಾಸ್ಟ್‌ ಕೌಚಿಂಗ್‌(Cast Couching), ಮೀಟೂ ಪ್ರಕರಣ(Me Too Row)ದ ಬೆನ್ನಲ್ಲೇ  ಹಿರಿಯ ನಟಿ ರಾಧಿಕಾ ಶರತ್‌ಕುಮಾರ್‌(Radika Sarathkumar) ಸ್ಫೋಟಕ ಹೇಳಿಕೆಯೊಂದನ್ನು ನೀಡಿದ್ದಾರೆ. ಅನೇಕ ನಟರು, ನಿರ್ದೇಶಕರ ವಿರುದ್ಧ ನಟಿಯರು ಕಾಸ್ಟ್‌ ಕೌಚಿಂಗ್‌ ಆರೋಪ ಹೊರಿಸಿರುವ ಬೆನ್ನಲ್ಲೇ ರಾಧಿಕಾ, ನಟಿಯರ ಕ್ಯಾರವಾನ್‌ಗಳಲ್ಲೂ ಹಿಡನ್‌ ಕ್ಯಾಮೆರಾ ಇಡಲಾಗುತ್ತದೆ ಎಂದು ಹೇಳುವ ಮೂಲಕ ಬಾಂಬ್‌ವೊಂದನ್ನು ಸಿಡಿಸಿದ್ದಾರೆ.

ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ರಾಧಿಕಾ, ಕ್ಯಾರವಾನ್‌ ಬಳಸಲು ನನಗೆ ಇನ್ನೂ ಭಯವಾಗುತ್ತದೆ. ನಾನು ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದಾಗ, ಒಂದು ಬಾರಿ ನಾಲ್ಕೈದು ಜನ ವಿಡಿಯೋವೊಂದನ್ನು ನೋಡಿ ಜೋರಾಗಿ ನಗುತ್ತಿರುವುದನ್ನು ಗಮನಿಸಿದೆ. ನನಗೇನೋ ಅನುಮಾನ ಬಂದು ಅವರಲ್ಲಿ ಒಬ್ಬನನ್ನು ಕರೆದು ವಿಚಾರಿಸಿದೆ. ಆತ ಹೇಳಿದ ವಿಚಾರ ಕೇಳಿ ನನಗೆ ಆಘಾತವಾಗಿತ್ತು. ಅವರು ಕ್ಯಾರವಾನ್‌ನಲ್ಲಿ ಮಹಿಳೆಯರು ಬಟ್ಟೆ ಬದಲಿಸುತ್ತಿರುವ ವಿಡಿಯೋ ನೋಡುತ್ತಿರುವುದಾಗಿ ಹೇಳಿದ್ದ. ಇದನ್ನು ಕೇಳಿದ ನನಗೆ ಶಾಕ್‌ ಆಗಿತ್ತು.ನಾನು ಅವರ ಜೊತೆ ಜಗಳಕ್ಕಿಳಿದಿದ್ದೆ. ಅದಕ್ಕವರು ಇವೆಲ್ಲವೂ ಹಳೆಯ ವಿಡಿಯೋ  ಎಂದಿದ್ದರು.ಅವರಲ್ಲಿರುವ ಪ್ರತಿಯೊಂದು ವೀಡಿಯೊವನ್ನು ಅಳಿಸಲು ನಾನು ಅವರನ್ನು ಕೇಳಿದೆ. ನಾನು ವಿಮಾನ ನಿಲ್ದಾಣಕ್ಕೆ ಹೊರಡುತ್ತಿದ್ದರಿಂದ ನಾನು ಏನೂ ಮಾಡಲು ಸಾಧ್ಯವಾಗಿರಲಿಲ್ಲ ಎಂದು ರಾಧಿಕಾ ಹೇಳಿದ್ದಾರೆ.

ನನ್ನ ಈ ಕಥೆ ಕೇಳಿದ ನಂತರ, ಮೋಹನ್‌ಲಾಲ್ ಸರ್ ಮತ್ತು ದಿಲೀಪ್ ಸೇರಿದಂತೆ ಎಲ್ಲರೂ ನನ್ನ ಬಳಿಗೆ ಬಂದರು. ಅವರು ನನಗೆ ಕರೆ ಮಾಡಿ ನೀವು ನಮಗೆ ಹೇಳಬಹುದಿತ್ತು ಎಂದು ಹೇಳಿದರು. ನಾನೇ ಅದನ್ನು ನಿಭಾಯಿಸಿದ್ದೇನೆ ಎಂದು ಅವರಿಗೆ ಹೇಳಿದೆ, ಆದರೆ ಈಗ ನೀವು ಮಹಿಳೆಯರ ಸುರಕ್ಷತೆಯ ಬಗ್ಗೆ ಚರ್ಚಿಸುತ್ತಿದ್ದೀರಿ, ದಯವಿಟ್ಟು ಇದನ್ನು ನೆನಪಿನಲ್ಲಿಡಿ ಎಂದು ಅವರಿಗೆ ಮನವಿ ಮಾಡಿದ್ದೆ.ನಾನು ಈಗಲೂ ಕಾರವಾನ್‌ಗಳನ್ನು ಬಳಸಲು ಭಯಪಡುತ್ತೇನೆ. ಎಲ್ಲ ನಟಿಯರಿಗೂ ಎಚ್ಚರಿಕೆ ವಹಿಸಿ ಎಂದು ಹೇಳುತ್ತಲೇ ಇರುತ್ತೇನೆ. ಈಗಲೂ, ಹಿಡನ್ ಕ್ಯಾಮೆರಾಗಳಿವೆಯೇ ಎಂದು ಪರೀಕ್ಷಿಸಲು ನಾನು ನನ್ನ ಸಹಾಯಕನನ್ನು ಮೊದಲು ಕಳುಹಿಸುತ್ತೇನೆ. ಇದು ನನಗೆ ಸಾಕಷ್ಟು ಆಘಾತವಾಗಿದೆ ಎಂದು ಅವರು ಹೇಳಿದ್ದಾರೆ.

ಮೀಟೂ ಪ್ರಕರಣ ಬಗ್ಗೆ ಮಮ್ಮುಟ್ಟಿ ಪ್ರತಿಕ್ರಿಯೆ

ಇನ್ನು ಮಲಯಾಳಂ ಚಿತ್ರರಂಗ ವಿರುದ್ಧ ಕೇಳಿ ಬಂದಿರುವ ಮೀಟೂ ಪ್ರಕರಣಗಳ ಬಗ್ಗೆ ಹಿರಿಯ ನಟ ಮಮ್ಮುಟ್ಟಿ ಪ್ರತಿಕ್ರಿಯಿಸಿದ್ದಾರೆ. ಮಲಯಾಳಂ ಚಿತ್ರರಂಗ ಯಾವೊಬ್ಬ ಪ್ರಭಾವಿ ವ್ಯಕ್ತಿಗಳ ನಿಯಂತ್ರಣದಲ್ಲಿಲ್ಲ. ದೂರು ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಾರೆ. ಪ್ರಾಮಾಣಿಕ ತನಿಖೆ ನಡೆಯಲೆಂದೇ ನಾನು ಬಯಸುತ್ತೇನೆ. ಆದರೆ ಚಿತ್ರರಂಗಲದಲ್ಲಿ ಯಾವುದೇ ಪವರ್‌ ಹೌಸ್‌ ಇಲ್ಲ ಎಂದಿದ್ದಾರೆ.

ಏನಿದು ಹೇಮಾ ಕಮಿಟಿ ವರದಿ?

ಕೆಲವು ದಿನಗಳ ಹಿಂದೆ ನ್ಯಾ. ಹೇಮಾ ನೇತೃತ್ವದ ಸಮಿತಿ ಮಲಯಾಳಂ ಚಿತ್ರರಂಗ ಸೆಕ್ಸ್‌ ಮಾಫಿಯಾ ಬಗ್ಗೆ ಶಾಕಿಂಗ್‌ ವಿಚಾರವೊಂದನ್ನು ಬಯಲಿಗೆಳೆದಿತ್ತು. ಚಿತ್ರರಂಗದಲ್ಲಿನ ಮಹಿಳಾ ಶೋಷಣೆ ಕುರಿತು ಅಧ್ಯಯನ ನಡೆಸಲು ಕೇರಳ ಸರ್ಕಾರ ರಚನೆ ಮಾಡಿದ್ದ ನ್ಯಾ. ಹೇಮಾ ನೇತೃತ್ವದ ಸಮಿತಿ ಸ್ಫೋಟಕ ವರದಿಯೊಂದನ್ನು ಬಿಡುಗಡೆ ಮಾಡಿದೆ. ಈ ವರದಿಯಲ್ಲಿ ಮಲಯಾಳ ಚಿತ್ರರಂಗವು ನಿರ್ದೇಶಕರು, ನಿರ್ಮಾಪಕರು ಹಾಗೂ ಪ್ರಮುಖ ನಟರನ್ನು ಒಳಗೊಂಡ 15 ಪ್ರಭಾವಿಗಳ ಕಪಿಮುಷ್ಟಿಯಲ್ಲಿದೆ. ಯಾವ ಚಿತ್ರದಲ್ಲಿ ಯಾರಿಗೆ ಅವಕಾಶ ನೀಡಬೇಕೆಂಬುದನ್ನು ಈ ಪ್ರಭಾವಿಗಳ ತಂಡ ನಿರ್ಧರಿಸುತ್ತದೆ. ಅಲ್ಲದೇ ಜೂನಿಯರ್‌ ನಟ-ನಟಿಯರು ಅಡ್ಜಸ್ಟ್‌ಮೆಂಟ್‌ಗೆ ಒಪ್ಪಿದರೆ ಮಾತ್ರ ಅವರಿಗೆ ಚಿತ್ರದಲ್ಲಿ ಅವಕಾಶ ನೀಡಲಾಗುತ್ತಿದೆ ಎಂಬುದು ವರದಿಯಲ್ಲಿ ಬಯಲಾಗಿದೆ.

ಮಲಯಾಳಂ ಚಿತ್ರರಂಗದಲ್ಲಿ ಮಹಿಳಾ ನಟರು ಎತ್ತಿರುವ ಆರೋಪಗಳ ಕುರಿತು ತನಿಖೆ ನಡೆಸಲು ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲು ಕೇರಳ ಸರ್ಕಾರ ನಿರ್ಧರಿಸಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಉನ್ನತ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಸ್ಪರ್ಜನ್ ಕುಮಾರ್ ನೇತೃತ್ವದಲ್ಲಿ ಹಿರಿಯ ಮಹಿಳಾ ಪೊಲೀಸ್ ಅಧಿಕಾರಿಗಳನ್ನು ಒಳಗೊಂಡ ಎಸ್‌ಐಟಿ ರಚಿಸಲು ನಿರ್ಧರಿಸಿದ್ದಾರೆ. ಇನ್ನು ಮಲಯಾಳಂ ನಟರಾದ ಸಿದ್ದಿಕಿ, ಜಯಸೂರ್ಯ, ಮುಖೇಶ್‌, ನಿರ್ದೇಶಕರಾದ ರಂಜಿತ್‌ ಸೇರಿದಂತೆ ಹಲವರ ವಿರುದ್ಧ ಮೀಟೂ ಕೇಸ್‌ ದಾಖಲಾಗಿದೆ.