Friday, 22nd November 2024

Mollywood Casting Couch: ಎಲ್ಲರನ್ನೂ ದೂಷಿಸಬೇಡಿ..ಚಿತ್ರೋದ್ಯಮದ ನಾಶ ಸರಿಯಲ್ಲ; ಮೋಹನ್‌ ಲಾಲ್‌ ಮನವಿ

Mollywood Casting couch

ತಿರುವನಂತಪುರಂ: ಮಲಯಾಳಂ ಚಿತ್ರರಂಗದಲ್ಲಿ ಸೆಕ್ಸ್‌ ಮಾಫಿಯಾ(Mollywood Casting Couch) ವಿಚಾರ ಭುಗಿಲೆದ್ದಿರುವ  ಬೆನ್ನಲ್ಲೇ ಮಲಯಾಳಂ ಸಿನಿ ಕಲಾವಿದ ಸಂಘ (AMMA) ಮಾಜಿ ಅಧ್ಯಕ್ಷ, ಹಿರಿಯ ನಟ ಮೋಹನ್‌ ಲಾಲ್‌(Mohanlal) ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ನ್ಯಾ. ಹೇಮಾ ಕಮಿಟಿ ವರದಿಯನ್ನು ಸ್ವಾಗತಿಸಿರುವ ಮೋಹನ್‌ ಲಾಲ್‌, ಎಲ್ಲರ ಮೇಲೂ ಆಪಾದನೆ ಹೊರಿಸುವುದು ಸರಿಯಲ್ಲ, ಚಿತ್ರರಂಗಕ್ಕೆ ಹಾನಿಯನ್ನುಂಟು ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.

ತಿರುವನಂತಪುರಂನಲ್ಲಿ ಕೇರಳ ಕ್ರಿಕೆಟ್‌ ಲೀಗ್‌ ಉದ್ಘಾಟನೆ ವೇಳೆ ಮಾತನಾಡಿದ ಅವರು, ಹೇಮಾ ಸಮಿತಿ ವರದಿ ಸ್ವಾಗತಾರ್ಹ. ಎರಡು ಬಾರಿ ಸಮಿತಿಯ ಮುಂದೆ ಬಂದಿದ್ದೇನೆ. ನನ್ನ ವಿನಂತಿ ಏನಂದರೆ ದಯವಿಟ್ಟು ಚಿತ್ರೋದ್ಯಮವನ್ನು ನಾಶ ಮಾಡಬೇಡಿ. ಹೇಮಾ ಸಮಿತಿಯ ವರದಿಯನ್ನು ನಾವು ಸ್ವಾಗತಿಸುತ್ತೇವೆ. ಆ ವರದಿಯನ್ನು ಬಿಡುಗಡೆ ಮಾಡಿರುವುದು ಸರ್ಕಾರದ ಸರಿಯಾದ ನಿರ್ಧಾರ. ಕಳೆದ ಎರಡು ಅವಧಿಗೆ ನಾನು ಅಮ್ಮಾ ಅಧ್ಯಕ್ಷನಾಗಿದ್ದೆ. ಹೇಮಾ ಸಮಿತಿಯ ವರದಿಗೆ ಇಡೀ ಮಲಯಾಳಂ ಚಿತ್ರರಂಗವೇ ಉತ್ತರದಾಯಿಯಾಗಿದೆ.  ಎಲ್ಲ ಪ್ರಶ್ನೆಗಳಿಗೂ AMMA ಉತ್ತರ ನೀಡಲು ಸಾಧ್ಯವಿಲ್ಲ. ಪ್ರತಿಯೊಬ್ಬರೂ ಈ ಪ್ರಶ್ನೆಗಳನ್ನು ಕೇಳಬೇಕು. ಇದು ಬಹಳ ಶ್ರಮದಾಯಕ ಉದ್ಯಮವಾಗಿದೆ. ಬಹಳಷ್ಟು ಜನರು ಇದರಲ್ಲಿ ತೊಡಗಿಸಿಕೊಂಡಿದ್ದಾರೆ, ಆದರೆ ಇದರಲ್ಲಿ ಎಲ್ಲರನ್ನೂ ದೂಷಿಸಬೇಕಾಗಿಲ್ಲ. ಹೊಣೆಗಾರರಿಗೆ ಶಿಕ್ಷೆಯಾಗಲಿದೆ’ ಎಂದರು.

ಕಿರಿಯ ಕಲಾವಿದರ ಕುರಿತು ಸಲಹೆ ನೀಡಿದ ಅವರು, ಕಿರಿಯ ಕಲಾವಿದರು ಸಂಘವನ್ನು ಹೊಂದಿರಬೇಕು. ಸಾಮಾನ್ಯವಾಗಿ ಏನಾಗುತ್ತದೆ ಎಂದರೆ ಅವರು ಏಜೆನ್ಸಿಗಳನ್ನು ಹೊಂದಿದ್ದಾರೆ. ಹೀಗಾಗಿ ನಿಮ್ಮ ಪ್ರಶ್ನೆಗಳಿಗೆ ನಾನು ಉತ್ತರಗಳನ್ನು ನೀಡಲು ಸಾಧ್ಯವಿಲ್ಲ; ಕೇರಳ ಪೊಲೀಸರು ಉತ್ತರ ನೀಡಬೇಕಿದೆ. ಸರ್ಕಾರವೇ ಇದೆ, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ತನಿಖೆ ನಡೆಯುತ್ತಿದೆ. ನಾವು ಯಾರಿಗಾಗಿ ಕಾನೂನನ್ನು ಬದಲಾಯಿಸಲು ಸಾಧ್ಯವಿಲ್ಲ; ಭಾಗಿಯಾದವರನ್ನು ಶಿಕ್ಷಿಸಲಾಗುವುದು ಎಂದರು.

ಏನಿದು ಹೇಮಾ ಕಮಿಟಿ ವರದಿ?

ಕೆಲವು ದಿನಗಳ ಹಿಂದೆ ನ್ಯಾ. ಹೇಮಾ ನೇತೃತ್ವದ ಸಮಿತಿ ಮಲಯಾಳಂ ಚಿತ್ರರಂಗ ಸೆಕ್ಸ್‌ ಮಾಫಿಯಾ ಬಗ್ಗೆ ಶಾಕಿಂಗ್‌ ವಿಚಾರವೊಂದನ್ನು ಬಯಲಿಗೆಳೆದಿತ್ತು. ಚಿತ್ರರಂಗದಲ್ಲಿನ ಮಹಿಳಾ ಶೋಷಣೆ ಕುರಿತು ಅಧ್ಯಯನ ನಡೆಸಲು ಕೇರಳ ಸರ್ಕಾರ ರಚನೆ ಮಾಡಿದ್ದ ನ್ಯಾ. ಹೇಮಾ ನೇತೃತ್ವದ ಸಮಿತಿ ಸ್ಫೋಟಕ ವರದಿಯೊಂದನ್ನು ಬಿಡುಗಡೆ ಮಾಡಿದೆ. ಈ ವರದಿಯಲ್ಲಿ ಮಲಯಾಳ ಚಿತ್ರರಂಗವು ನಿರ್ದೇಶಕರು, ನಿರ್ಮಾಪಕರು ಹಾಗೂ ಪ್ರಮುಖ ನಟರನ್ನು ಒಳಗೊಂಡ 15 ಪ್ರಭಾವಿಗಳ ಕಪಿಮುಷ್ಟಿಯಲ್ಲಿದೆ. ಯಾವ ಚಿತ್ರದಲ್ಲಿ ಯಾರಿಗೆ ಅವಕಾಶ ನೀಡಬೇಕೆಂಬುದನ್ನು ಈ ಪ್ರಭಾವಿಗಳ ತಂಡ ನಿರ್ಧರಿಸುತ್ತದೆ. ಅಲ್ಲದೇ ಜೂನಿಯರ್‌ ನಟ-ನಟಿಯರು ಅಡ್ಜಸ್ಟ್‌ಮೆಂಟ್‌ಗೆ ಒಪ್ಪಿದರೆ ಮಾತ್ರ ಅವರಿಗೆ ಚಿತ್ರದಲ್ಲಿ ಅವಕಾಶ ನೀಡಲಾಗುತ್ತಿದೆ ಎಂಬುದು ವರದಿಯಲ್ಲಿ ಬಯಲಾಗಿದೆ.

ಮಲಯಾಳಂ ಚಿತ್ರರಂಗದಲ್ಲಿ ಮಹಿಳಾ ನಟರು ಎತ್ತಿರುವ ಆರೋಪಗಳ ಕುರಿತು ತನಿಖೆ ನಡೆಸಲು ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲು ಕೇರಳ ಸರ್ಕಾರ ನಿರ್ಧರಿಸಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಉನ್ನತ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಸ್ಪರ್ಜನ್ ಕುಮಾರ್ ನೇತೃತ್ವದಲ್ಲಿ ಹಿರಿಯ ಮಹಿಳಾ ಪೊಲೀಸ್ ಅಧಿಕಾರಿಗಳನ್ನು ಒಳಗೊಂಡ ಎಸ್‌ಐಟಿ ರಚಿಸಲು ನಿರ್ಧರಿಸಿದ್ದಾರೆ. ಇನ್ನು ಮಲಯಾಳಂ ನಟರಾದ ಸಿದ್ದಿಕಿ, ಜಯಸೂರ್ಯ, ಮುಖೇಶ್‌, ನಿರ್ದೇಶಕರಾದ ರಂಜಿತ್‌ ಸೇರಿದಂತೆ ಹಲವರ ವಿರುದ್ಧ ಮೀಟೂ ಕೇಸ್‌ ದಾಖಲಾಗಿದೆ.

ಖ್ಯಾತ ನಟ ಮತ್ತು ಮಲಯಾಳಂ ಚಲನಚಿತ್ರ ಕಲಾವಿದರ ಸಂಘದ (AMMA) ಮಾಜಿ ಅಧ್ಯಕ್ಷರಾಗಿದ್ದ ಮೋಹನ್‌ಲಾಲ್ ಅವರು ಇತ್ತೀಚೆಗೆ ಮಲಯಾಳಂ ಚಿತ್ರರಂಗದಲ್ಲಿ ಲೈಂಗಿಕ ದೌರ್ಜನ್ಯದ ಆರೋಪಗಳು ಕೇಳಿ ಬಂದ ನಂತರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಉದ್ಯಮದಲ್ಲಿ ಅತಿರೇಕದ ಲೈಂಗಿಕ ಶೋಷಣೆಯನ್ನು ಬಹಿರಂಗಪಡಿಸಿದ ಹೇಮಾ ಸಮಿತಿಯ ವರದಿಯ ಬಿಡುಗಡೆಯದ ಬಳಿಕ ಕಲಾವಿದರ ಸಂಘದ  17ಜನ ಸದಸ್ಯರೂ ರಾಜೀನಾಮೆ ಸಲ್ಲಿಸಿದ್ದರು.