ವಿಶೇಷ ವರದಿ: ಪ್ರಶಾಂತ್.ಟಿ.ಆರ್
ಬೆಂಗಳೂರು: ನಟ ಆದಿತ್ಯ ತೆರೆಯಲ್ಲಿ ಹೊಸ ಅಧ್ಯಾಯ ಆರಂಭಿಸಿದ್ದಾರೆ. ‘ಮುಂದುವರೆದ ಅಧ್ಯಾಯ’ ಚಿತ್ರದ ಮೂಲಕ
ಯಶಸ್ವಿ ಸೆಕೆಂಡ್ ಇನ್ನಿಂಗ್ಸ್ ಪ್ರಾರಂಭಿಸಿದ್ದಾರೆ. ಈ ಚಿತ್ರದ ಮೂಲಕ ಸಮಾಜವನ್ನು ತಿದ್ದುವ ಪ್ರಯತ್ನವೂ ನಡೆದಿದೆ.
ಆಕೆ ನಾಗರೀಕರ ಸೇವೆಯಲ್ಲಿ ನಿರತರಾಗಿರುವ ವೈದ್ಯೆ, ಇವರ ಕಾರ್ಯಕ್ಕೆ ಸಾಥ್ ನೀಡುತ್ತಾ, ಸಮಾಜ ಘಾತುಕ ಶಕ್ತಿಗಳ ಕೃತ್ಯ ಗಳನ್ನು ಬಯಲಿಗೆಳೆಯಲು ಪಣತೊಟ್ಟ ಪತ್ರಕರ್ತೆ. ವೈದ್ಯೆ ಉಚಿತ ಚಿಕಿತ್ಸಾ ಶಿಬಿರವನ್ನು ನಡೆಸಲು ಎಲ್ಲಾ ಸಿದ್ಧತೆಗಳನ್ನು
ಮಾಡಿಕೊಂಡಿರುತ್ತಾಳೆ. ಅದಕ್ಕೆ ಸ್ಥಳೀಯ ಶಾಸಕರ ಸಹಕಾರವೂ ಇರುತ್ತದೆ. ಆದರೆ ಶಿವರಾತ್ರಿ ದಿನ ಆ ವೈದ್ಯ ಇದ್ದಕ್ಕಿದಂತೆ
ಕಾಣಿಯಾಗುತ್ತಾಳೆ. ಆಕೆಯ ಪತ್ರಕರ್ತ ಗೆಳತಿ, ಈಕೆ ಎಲ್ಲಿ ಹೋದಳು ಎಂದು ಹುಡುಕುವಾಗಲೇ, ಆಕೆಯ ಅಪಹರಣವಾಗುತ್ತದೆ. ಈ ಎಲ್ಲಾ ಘಟನೆಗಳಿಗೂ, ದರ್ಪದಿಂದ ಮೆರೆಯುತ್ತಿದ್ದ ಗುತ್ತಿಗೆದಾರನೇ ಕಾರಣ ಎಂಬ ಗುಮಾನಿ ಹುಟ್ಟುತ್ತದೆ.
ಆದರೆ ಇದ್ದಕ್ಕಿದಂತೆ ಗುತ್ತಿಗೆದಾರನ ಹತ್ಯೆಯೂ ನಡೆದು ಹೋಗುತ್ತದೆ. ಹಾಗಾದರೆ ಈ ಕೊಲೆ ಮಾಡಿದವರು ಯಾರು ಎಂಬ ಕುತೂಹಲ ಕ್ಷಣ ಕ್ಷಣಕ್ಕೂ ಕಾಡುತ್ತದೆ. ಹೀಗಿರುವಾಗಲೇ ಸ್ಥಳೀಯ ಶಾಸಕನ ಹೆಸರು ಈ ಘಟನೆಗಳಿಗೆ ತಳುಕು ಹಾಕಿಕೊಳ್ಳುತ್ತದೆ. ಹೀಗೆ ನಿಗೂಢವಾಗಿ ನಡೆಯುತ್ತಿರುವ ಘಟನೆಗಳಿಗೆ ಕಾರಣ ಏನು ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮನೆ ಮಾಡಿರುತ್ತದೆ.
ಈ ಸಮಯದಲ್ಲಿ ಈ ನಿಗೂಢತೆಯನ್ನು ಭೇದಿಸಲು ಎಸಿಪಿ ಬಾಲು ಎಂಟ್ರಿಯಾಗುತ್ತಾರೆ. ತನಿಖಾಧಿಕಾರಿಯಾಗಿ ಬಂದವರೇ ಒಂದೊಂದೇ ಘಟನೆಗಳನ್ನು ಕೂಲಂಕುಷವಾಗಿ ಪರಿಶೀಲಿಸುತ್ತಾರೆ. ತನಿಖೆಯ ಜಾಡು ಹಿಡಿದು ಸಾಗಿದಾಗ, ವೈದ್ಯೆಯ ಹತ್ಯೆ ಯಾಗಿರುವುದು ತಿಳಿಯುತ್ತದೆ. ಪತ್ರಕರ್ತೆ ಕಿಡ್ನಾಪ್ ಆಗಿದ್ದು, ಆಕೆಯನ್ನು ನಿಗೂಢ ಪ್ರದೇಶದಲ್ಲಿ ಬಂಧಿಸಿರುತ್ತಾರೆ. ಹಾಗಾದರೆ, ವೈದ್ಯೆಯನ್ನು ಕೊಲೆ ಮಾಡಿದವರೇ, ಗುತ್ತಿಗೆದಾರನನ್ನು ಹತ್ಯೆ ಮಾಡಿದರೆ, ಅಥವಾ ಇದರ ಹಿಂದೆ ಬೇರೆಯವರ ಕೈವಾಡ ವಿದೆಯೇ, ಅದಕ್ಕೆ ಕಾರಣವಾದರು ಏನು ಎಂಬ ಹಲವು ಪ್ರಶ್ನೆಗಳು ಪ್ರೇಕ್ಷಕರನ್ನು ಕಾಡುತ್ತವೆ.
ಇದೆಲ್ಲದಕ್ಕೂ ತೆರೆಯಲ್ಲಿಯೇ ಉತ್ತರ ಸಿಗುತ್ತದೆ. ವಿಶೇಷ ಎಂದರೆ ಯಾರೂ ನಿರೀಕ್ಷಿಸದ ಮಟ್ಟದಲ್ಲಿ ಚಿತ್ರದ ಕ್ಲೈಮ್ಯಾಕ್ಸ್ ಮೂಡಿ ಬಂದಿದೆ. ಅದಕ್ಕಾಗಿ ಒಮ್ಮೆಯಾದರೂ ಚಿತ್ರ ನೋಡಲೇಬೇಕು. ನಿರ್ದೇಶಕ ಬಾಲು ಚಂದ್ರಶೇಖರ್ ಒಳ್ಳೆಯ ಕಥೆ ಹೆಣೆದು ಅದನ್ನು ಅಚ್ಚುಕಟ್ಟಾಗಿ ತೆರೆಗೆ ತರುವಲ್ಲಿ ಯಶಸ್ವಿಿಯಾಗಿದ್ದಾರೆ.
ಆದಿತ್ಯ ತನಿಖಾಧಿಕಾರಿಯಾಗಿ ಮೆಚ್ಚುವ ನಟನೆ ತೋರಿದ್ದಾರೆ. ಯಾವುದೇ ಬಿಲ್ಡಪ್ ಇಲ್ಲದೇ ಗಮನ ಸೆಳೆಯುತ್ತಾರೆ. ಖಡಕ್ ಆದ
ಮಾತಿನಲ್ಲಿ ಪ್ರೇಕ್ಷಕರನ್ನು ರಂಜಿಸುತ್ತಾರೆ. ಅವರ ತನಿಖಾ ಸ್ಟೈಲ್ ಕೂಡ ಮೆಚ್ಚುವಂತಿದೆ. ಈ ಚಿತ್ರ ಆದಿತ್ಯ ಅವರಿಗೆ ಮತ್ತೊಂದು ತಿರುವು ನೀಡಿದರೂ ಅಚ್ಚರಿಯಿಲ್ಲ. ಆಶಿಕಾ ಸೋಮಶೇಖರ್ ಪತ್ರಕರ್ತೆಯ ಪಾತ್ರಕ್ಕೆ ಜೀವ ತುಂಬಿದ್ದಾರೆ.
ವೈದ್ಯೆಯಾಗಿ ಬಣ್ಣಹಚ್ಚಿರುವ ಚಂದನಾ ಗೌಡ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಉಳಿದಂತೆ ಶಕ್ತಿ ಸೋಮಣ್ಣ, ಹಿರಿಯ ನಟರಾದ ಮುಖ್ಯಮಂತ್ರಿ ಚಂದ್ರು, ಜೈಜಗದೀಶ್ ಮುಂತಾದವರು ಚಿತ್ರದ ತಾರಾಗಣದಲ್ಲಿದ್ದಾರೆ. ನವ ಕಲಾವಿದರೂ ಕೂಡ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.