Sunday, 15th December 2024

ಕನ್ನಡ ಚಿತ್ರರಂಗದಲ್ಲಿ 40 ವರ್ಷ ಪೂರೈಸಿದ ಜಗ್ಗೇಶ್

ಸಾಗಿಬಂದ ಹಾದಿಯನ್ನು ಮೆಲುಕು ಹಾಕಿದ ನವರಸ ನಾಯಕ

ನವರಸ ನಾಯಕ ಜಗ್ಗೇಶ್ ನಟನೆಗೆ ಅಡಿಯಿಟ್ಟು ನಲವತ್ತ ವಸಂತಗಳೇ ಕಳೆದಿವೆ. ಈ ನಲವತ್ತು ವರುಷಗಳಲ್ಲಿ ಕಂಡ ನೋವು – ನಲಿವುಗಳು, ಏಳು ಬೀಳುಗಳನ್ನು ಒಮ್ಮೆ ಮೆಲುಕು ಹಾಕಿದರು.

17 ನ.1980 ರಲ್ಲಿಯೇ ನಾನು ಬಣ್ಣಲೋಕಕ್ಕೆ ಕಾಲಿಟ್ಟೆ. ಆದರೆ ನಾನು ಯಾರು ಎಂದು ಯಾರಿಗೂ ತಿಳಿದರಲಿಲ್ಲ. ಸಣ್ಣ ಹಳ್ಳಿ ಯಿಂದ ಬಂದ ನನ್ನನ್ನು ಮಾಧ್ಯಮದವರು ಇಡೀ ನಾಡಿಗೆ ಪರಿಚಯ ಮಾಡಿಕೊಟ್ಟರು. ಅಲ್ಲಿಂದ ಸಾಕಷ್ಟು ಅವಕಾಶಗಳು ಅರಸಿಬಂದವು.

ನಿರ್ಮಾಪಕರಾಗಿದ್ದ ವೀರಸ್ವಾಮಿಯವರು ನನ್ನನ್ನು ರಜನೀಕಾಂತ್ ತರ ಇದ್ದೀಯ ಎಂದು ಹೇಳಿ ನನ್ನನ್ನು ಹುರಿದುಂಬಿಸಿದರು. ಚಿತ್ರದಲ್ಲಿ ನಟಿಸಲು ಅವಕಾಶವನ್ನು ನೀಡಿದರು. ಆಗಲೇ ರಣಧೀರ ಚಿತ್ರದಲ್ಲಿ ರವಿಚಂದ್ರನ್ ಜತೆ ಬಣ್ಣಹಚ್ಚಿದೆ. ಸಿನಿಮಾ ಯಶಸ್ವಿಯಾಯಿತು. ಎಲ್ಲರಿಗೂ ಹೆಸರನ್ನು ತಂದುಕೊಟ್ಟಿತು.

ಶಿವಣ್ಣ ಅವರ ಜತೆ ನಟಿಸಿದ ರಣರಂಗ ಚಿತ್ರ ಹಾಗೂ ದ್ವಾರಕೀಶ್ ಅವರ ನಿರ್ಮಾಣದ ಕೃಷ್ಣ ನೀ ಕುಣಿದಾಗ ಚಿತ್ರಗಳು ನನಗೆ ಹೆಸರು ತಂದುಕೊಟ್ಟವು. ಇವುಗಳ ಜತೆಗೆ ಅಂಬರೀಶ್ ಅವರ ಜತೆ ರೌಡಿ ಎಂ ಎಲ್ ಎ ಚಿತ್ರದಲ್ಲಿ ನಟಿಸಲು ಅವಕಾಶ ಸಿಕ್ಕಿತು. ಆ ಚಿತ್ರದಿಂದ ಎಲ್ಲರೂ ನನ್ನ ಗುರುತಿಸಲು ಶುರು ಮಾಡಿದರು. ಆ ಬಳಿಕ ನಾನೇ ನಾಯಕ ನಟನಾಗಿ ಭಂಡ ನನ್ನ ಗಂಡ ಚಿತ್ರವನ್ನು ನಿರ್ಮಿಸಿದೆ. ಆದರೆ ಆ ಚಿತ್ರವನ್ನು ಬಿಡುಗಡೆ ಮಾಡಲು ಯಾರೂ ಮುಂದೆ ಬರಲೇ ಇಲ್ಲ. ಹಾಗಾಗಿ ತುಂಬಾ ಬೇಸರವಾಗಿತ್ತು. ಮುಂದೆ ಏನು ಮಾಡುವುದು ಎಂದೇ ತೋಚದಾಗಿತ್ತು. ಈ ವೇಳೆ ಅಂಬರೀಶ್ ಅವರು ನನ್ನ ನೆರವಿಗೆ ಧಾವಿಸಿದರು. ಅಂತು ಸಿನಿಮಾ ಬಿಡುಗಡೆಯಾಯಿತು. ತೆರೆಕಂಡ ಕಡೆಯಲ್ಲ ಒಳ್ಳೆಯ ಕಲೆಕ್ಷನ್ ಆಯಿತು. ಈ ಚಿತ್ರವೇ ನನಗೆ ಒಳ್ಳೆಯ ಅಡಿಪಾಯ ವಾಯಿತು ಎಂದು ಭಂಡ ನನ್ನ ಗಂಡ ಚಿತ್ರವನ್ನು ನೆನೆದರು ಜಗ್ಗೇಶ್.

ಈ ನಲವತ್ತು ವರುಷಗಳ ಯಶಸ್ವಿ ಸಿನಿಮಾ ಜರ್ನಿ ನನ್ನದು. ಈ ಸುಧೀರ್ಘ ಪಯಣದಲ್ಲಿ ಹಲವು ಏಳು ಬೀಳುಗಳನ್ನು ಕಂಡಿ ದ್ದೇನೆ. ಇಂತಹ ಸಮಯದಲ್ಲಿ ಹಲವರು ನನ್ನ ಜತೆ ನಿಂತು ಪ್ರೋತ್ಸಾಹಿಸಿದರು. ಅವರೆಲ್ಲರಿಗೂ ನನ್ನ ಧನ್ಯವಾದಗಳು ಎಂದರು ಜಗ್ಗೇಶ್.

ಪ್ಯಾನ್ ಇಂಡಿಯಾ ವ್ಯಾಮೋಹ ಬಿಡಿ ಕನ್ನಡ ಚಿತ್ರರಂಗ ಇಂದಿಗೂ ಬಲಿಷ್ಟವಾಗಿಯೇ ಇದೆ. ಕನ್ನಡದಲ್ಲಿ ಮೂಡಿಬಂದಂತಹ ಸದಭಿರುಚಿಯ ಚಿತ್ರಗಳು ಬೇರೆ ಯಾವ ಭಾಷೆಯಲ್ಲೂ ಮೂಡಿಬಂದಿಲ್ಲ. ಆದರೆ ಇಂದು ಚಿತ್ರರಂಗದ ಸ್ಥಿತಿಗತಿಯೇ ಬದಲಾಗಿದೆ. ಕೆಲವರು ಕನ್ನಡ ಚಿತ್ರರಂಗವನ್ನು ತುಳಿಯಲು ಬಯಸುತ್ತಿದ್ದಾರೆ. ಅಂತಹವರ ವಿರುದ್ದ ಎಚ್ಚರಿಕೆಯಿಂದ ಇರಬೇಕು, ಎಂದು, ಇಂದಿನ ಚಿತ್ರರಂಗದ ಸ್ಥಿತಿಗತಿಯ ಬಗ್ಗೆ ಜಗ್ಗಣ್ಣ ಕೊಂಚ ಬೇಸರ ವ್ಯಕ್ತಪಡಿಸಿದರು.

ಕನ್ನಡ ಚಿತ್ರರಂಗವನ್ನು ಹಾಗೂ ಕಲಾವಿದರನ್ನು ಉಳಿಸಿ ಬೆಳೆಸುವ ಕೆಲಸ ಆಗಬೇಕೆಂದರು. ಇತ್ತೀಚಿನ ದಿನಗಳಲ್ಲಿ ಪ್ಯಾನ್ ಇಂಡಿಯಾ ಸಿನಿಮಾ ಒಂದು ಟ್ರೆಂಡ್ ಆಗಿ ಬಿಟ್ಟಿದೆ. ಪ್ಯಾನ್ ಇಂಡಿಯಾ ನಮ್ಮನ್ನು ಉದ್ದಾರ ಮಾಡಲ್ಲ. ಪ್ಯಾನ್ ಇಂಡಿಯಾ ಪರಿಕಲ್ಪನೆಯಿಂದ ಕನ್ನಡಿಗರಿಗೆ ಕೆಲಸವಿಲ್ಲದಂತಾಗಿದೆ.

ಯಾರನ್ನೋ ಮೆಚ್ಚಿಸಲು ಪ್ಯಾನ್ ಇಂಡಿಯಾ ಸಿನಿಮಾ ಮಾಡಲಾಗುತ್ತಿದೆ. ನಮ್ಮತನವನ್ನು ನಾವು ಕಾಪಾಡಿಕೊಳ್ಳೋಣ. ಕನ್ನಡ ಚಿತ್ರರಂಗದ ಉನ್ನತಿಗೆ ನಾವೆಲ್ಲ ಶ್ರಮಿಸೋಣ ಎಂದರು ಜಗ್ಗೇಶ್. ಕಲಾ ಸೇವೆಗೆ ಸದಾ ಸಿದ್ಧ ಈ ನಲವತ್ತು ವರ್ಷಗಳಲ್ಲಿ ನಾನು ಕಲಾಸೇವೆಗೆ ಸಿದ್ಧವಾಗಿದ್ದೇನೆ.

ಮುಂದೆಯೂ ಕಲಾಸೇವೆಗಾಗಿ ನನ್ನ ಜೀವನ ಮುಡುಪಾಗಿಡುತ್ತೇನೆ ಎಂದ ಜಗ್ಗೇಶ್, ನಾನೇ ನಟಸಿಬೇಕೆಂದು ಯಾರ ಬಳಿಗೂ ಹೋಗೋದಿಲ್ಲ. ಆದರೆ ನನ್ನನ್ನು ಅರಸಿ ಬಂದರೆ ಖಂಡಿವಾಗಿಯೂ ನಟಿಸುತ್ತೇನೆ ಎಂದರು.