Sunday, 17th November 2024

Nayanthara V/S Dhanush: ಸಂಭಾವನೆ ಪಡೆಯದೆ ಧನುಷ್‌ ಚಿತ್ರದಲ್ಲಿ ಡ್ಯಾನ್ಸ್‌ ಮಾಡಿದ್ದ ನಯನತಾರಾ; ಹಳೆ ವಿಡಿಯೊ ವೈರಲ್‌

Nayanthara V/S Dhanush

ಚೆನ್ನೈ: ಸೂಪರ್‌ ಸ್ಟಾರ್‌ಗಳಾದ ಧನುಷ್‌ (Dhanush) ಮತ್ತು ನಯನತಾರಾ (Nayanthara) ಇಬ್ಬರೂ ಕಾಲಿವುಡ್‌ನಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ, ಇಬ್ಬರಿಗೂ ತಮ್ಮದೇ ಆದ ಅಭಿಮಾನಿ ಬಳಗವಿದೆ. ಚಿತ್ರರಂಗದಲ್ಲಿ ಹಲವು ವರ್ಷಗಳ ಕಾಲ ಸ್ನೇಹಿತರಾಗಿದ್ದ ಇವರಿಬ್ಬರ ಬಾಂಧವ್ಯಕ್ಕೆ ಇದೀಗ ಕದಡಿದೆ. ಧನುಷ್‌ ನಿರ್ಮಾಣದಲ್ಲಿ 2015ರಲ್ಲಿ ತೆರೆಕಂಡ ʼನಾನುಂ ರೌಡಿ ದಾನ್‌ʼ (Naanum Rowdy Dhaan) ಚಿತ್ರದಲ್ಲಿ ವಿಜಯ್‌ ಸೇತುಪತಿಗೆ ನಾಯಕಿಯಾಗಿ ನಯನತಾರಾ ನಟಿಸಿದ್ದರು. ಬಹು ದೊಡ್ಡ ಹಿಟ್‌ ಎನಿಸಿಕೊಂಡಿದ್ದ ಈ ಚಿತ್ರದ 3 ಸೆಕೆಂಡ್‌ ದೃಶಗಳನ್ನು ಇದೀಗ ರಿಲೀಸ್‌ ಆಗಿರುವ ನಯನತಾರಾ ಬದುಕಿನ ಕುರಿತಾದ ಸಾಕ್ಷ್ಯ ಚಿತ್ರ ʼನಯನತಾರಾ: ಬಿಯಾಂಡ್‌ ದಿ ಫೇರ್‌ ಟೇಲ್‌ʼ (Nayanthara: Beyond The Fairy Tale)ಗೆ ಬಳಸಿಕೊಳ್ಳಲಾಗಿತ್ತು. ಇದನ್ನು ಪ್ರಶ್ನಿಸಿ 10 ಕೋಟಿ ರೂ. ಪರಿಹಾರಕ್ಕೆ ಧನುಷ್‌ ಲೀಗಲ್‌ ನೋಟಿಸ್‌ ಕಳುಹಿಸಿದ್ದು, ನಯನತಾರಾ ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿ ಬಹಿರಂಗ ಪತ್ರ ಬರೆದಿದ್ದಾರೆ. ಧನುಷ್‌ ವಿರುದ್ಧ ಕಿಡಿ ಕಾರಿದ್ದಾರೆ. ಈ ಮಧ್ಯೆ ಇವರಿಬ್ಬರ ಗೆಳೆತನದ ಬಗ್ಗೆ ಹೇಳಿರುವ ವಿಡಿಯೊವೊಂದು ವೈರಲ್‌ ಆಗಿದೆ (Nayanthara V/S Dhanush).

2013ರಲ್ಲಿ ತೆರೆಕಂಡ ಸೂಪರ್‌ ಹಿಟ್‌ ತಮಿಳು ಚಿತ್ರ ;ಎದಿರ್‌ ನೀಚಲ್‌ʼ (Ethir Neechal). ಆರ್‌.ಎಸ್‌.ದುರೈ ಸೆಂಥಿಲ್‌ಕುಮಾರ್‌ ನಿರ್ದೇಶನದ ಈ ಸಿನಿಮಾವನ್ನು ಧನುಷ್‌ ನಿರ್ಮಿಸಿದ್ದರು. ಶಿವಕಾರ್ತಿಕೇಯನ್‌, ಪ್ರಿಯಾ ಆನಂದ್‌, ಕನ್ನಡತಿ ನಂದಿತಾ ಶ್ವೇತಾ ಅಭಿನಯಿಸಿದ್ದ ಈ ಚಿತ್ರದ ವಿಶೇಷ ಹಾಡಿನಲ್ಲಿ ಧನುಷ್‌ ಮತ್ತು ನಯನತಾರಾ ಕಾಣಿಸಿಕೊಂಡಿದ್ದರು.

ಈ ಹಾಡಿನಲ್ಲಿ ನಯನತಾರಾ ಸಂಭಾವನೆ ಪಡೆಯದೆ ಕುಣಿದಿದ್ದರು. ಈ ವಿಚಾರವನ್ನು ಹಳೆಯ ಸಂದರ್ಶನವೊಂದರಲ್ಲಿ ಧನುಷ್‌ ತಿಳಿಸಿದ್ದು, ಸದ್ಯ ಈ ವಿಡಿಯೊ ವೈರಲ್‌ ಆಗಿದೆ. ಈ ವೇಳೆ ಧನುಷ್‌ ಅವರು ನಯನತಾರಾ ಅವರನ್ನು ʼಫ್ರೆಂಡ್‌ʼ ಎಂದು ಕರೆದಿರುವುದು ಕೂಡ ನೆಟ್ಟಿಗರ ಗಮನ ಸೆಳೆದಿದೆ.

ವಿಡಿಯೊದಲ್ಲಿ ಏನಿದೆ?

ʼಎದಿರ್‌ ನೀಚಲ್‌ʼ ಚಿತ್ರದಲ್ಲಿನ ʼಲೋಕಲ್‌ ಬಾಯ್ಸ್‌ʼ ಹಾಡು ಹಿಟ್‌ ಆಗಿತ್ತು. ಶಿವಕಾರ್ತಿಕೇಯನ್‌ ಮತ್ತು ಧನುಷ್‌ ಜತೆ ನಯನತಾರಾ ಡ್ಯಾನ್‌ ಸಖತ್‌ ಸ್ಟೆಪ್‌ ಹಾಕಿದ್ದರು. ಈ ಬಗ್ಗೆ ಮಾತನಾಡುತ್ತ ಧನುಷ್‌ ಅವರು ಚಿತ್ರಕ್ಕೆ ನಯನತಾರಾ ಅವರ ಕೊಡುಗೆಯನ್ನು ವಿವರಿಸಿದ್ದರು. ಸಂದರ್ಶಕಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಧನುಷ್‌, ʼʼಫ್ರೆಂಡ್‌ ನಯನತಾರಾ ಬೇರೇನೂ ಯೋಚಿಸದೆ ಈ ಹಾಡಿನಲ್ಲಿ ಕಾಣಿಸಿಕೊಳ್ಳಲು ಒಪ್ಪಿಕೊಂಡಿದ್ದರು. ಅವರು ಸಂಭಾವನೆಯನ್ನೂ ಪಡೆದುಕೊಳ್ಳಲಿಲ್ಲʼʼ ಎಂದು ತಿಳಿಸಿದ್ದರು. ವಿಶೇಷ ಹಾಡಿಗಾಗಿ 2-3 ಕೋಟಿ ರೂ. ಬೇಡಿಕೆ ಇಡುತ್ತಿದ್ದ ನಯನತಾರಾ ಧನುಷ್‌ಗಾಗಿ ಉಚಿತವಾಗಿ ಡ್ಯಾನ್ಸ್‌ ಮಾಡಿದ್ದರಂತೆ. ಸದ್ಯ ಈ ವಿಡಿಯೊ ವೈರಲ್‌ ಆಗಿದೆ.

ನಯನತಾರಾ ಬರೆದ ಪತ್ರದಲ್ಲಿ ಏನಿದೆ?

“2015ರ ‘ನಾನುಮ್‌ ರೌಡಿ ದಾನ್‌ʼ ಚಲನಚಿತ್ರದ ದೃಶ್ಯಗಳನ್ನು ಬಳಕೆ ಮಾಡಲು ಧನುಷ್‌ ಅವರಲ್ಲಿ ಅನುಮತಿ ಕೇಳಿದ್ದೆ. ಹಲವು ವರ್ಷಗಳ ಪ್ರಯತ್ನಗಳು ವಿಫಲವಾದವು. ಧನುಷ್‌ ಅನುಮತಿ ನಿರಾಕರಿಸಿದ್ದರಿಂದ ಸಾಕ್ಷ್ಯಚಿತ್ರವನ್ನು ಮರು ಚಿತ್ರೀಕರಿಸಬೇಕಾಯಿತು. 2 ವರ್ಷಗಳಿಂದ ಧನುಷ್‌ಗೆ ಹಲವು ಬಾರಿ ಮನವಿ ಮಾಡಿದ್ದೇನೆ,” ಎಂದು ನಯನತಾರಾ ಬಹಿರಂಗ ಪತ್ರದಲ್ಲಿ ತಿಳಿಸಿದ್ದಾರೆ.

“ಅಭಿಮಾನಿಗಳು ನೋಡಿದ ಧನುಷ್‌ ಬೇರೆ, ಅಸಲಿ ಧನುಷ್‌ ಬೇರೆ. ಇಷ್ಟು ಕೀಳುಮಟ್ಟಕ್ಕೆ ಇಳಿದಿದ್ದಾರೆ ಎಂದು ಒಪ್ಪಿಕೊಳ್ಳಲು ಆಗುತ್ತಿಲ್ಲ. ಸಾರ್ವಜನಿಕವಾಗಿ ಅತ್ಯಂತ ಸಾಧಾರಣ ಹಾಗೂ ವಿಶಾಲ ಮನಸ್ಥಿತಿಯ ವ್ಯಕ್ತಿಯಾಗಿ ಕಾಣಿಸಿಕೊಳ್ಳುವ ಧನುಷ್‌ ಅವರಲ್ಲಿ ಅರ್ಧ ಭಾಗದಷ್ಟಾದರೂ ವಿಶಾಲತೆ ಇಲ್ಲ ಎನ್ನುವುದು ಅರಿವಾಗಿದೆ. ಸಿನಿಮಾ ಕ್ಷೇತ್ರದ ಯಾವುದೇ ಹಿನ್ನೆಲೆಯಿಲ್ಲದೆ, ಒಂಟಿ ಮಹಿಳೆಯಾಗಿ ಈ ಮಟ್ಟಕ್ಕೆ ಬೆಳೆದಿದ್ದೇನೆ. ಅಭಿಮಾನಿಗಳ ಬೆಂಬಲದಿಂದ ಈ ಹಂತಕ್ಕೆ ತಲುಪಿದ್ದೇನೆ. ಲೀಗಲ್‌ ನೋಟಿಸ್‌ಗೆ ತಕ್ಕ ಪ್ರತ್ಯುತ್ತರ ನೀಡುವೆ” ಎಂದಿದ್ದಾರೆ. ಸದ್ಯ ನಯನತಾರಾ ಮತ್ತು ಧನುಷ್‌ ಅವರನ್ನು ಬೆಂಬಲಿಸಿ ಹಲವರು ಪೋಸ್ಟ್‌ ಹಂಚಿಕೊಂಡಿದ್ದಾರೆ. ಈ ಬಗ್ಗೆ ಧನುಷ್‌ ಇನ್ನೂ ಪ್ರತಿಕ್ರಿಯಿಸಿಲ್ಲ.

ಈ ಸುದ್ದಿಯನ್ನೂ ಓದಿ: Actress Nayanthara: ನಯನತಾರಾ ಕುರಿತಾದ ಡಾಕ್ಯುಮೆಂಟ್ರಿ ರಿಲೀಸ್‌ ಡೇಟ್‌ ಅನೌನ್ಸ್‌; ಎಲ್ಲಿ, ಯಾವಾಗ ಸ್ಟ್ರೀಮಿಂಗ್‌?