Sunday, 15th December 2024

Web Series: ಭಯೋತ್ಪಾದಕರಿಗೆ ಹಿಂದೂ ಹೆಸರು; ʼಐಸಿ 814ʼ ವೆಬ್‌ ಸಿರೀಸ್‌ಗೆ ಕೇಂದ್ರದಿಂದ ನೋಟಿಸ್‌

Web Series

ನವದೆಹಲಿ: ಅನುಭವ್ ಸಿನ್ಹಾ (Anubhav Sinha) ನಿರ್ದೇಶನದಲ್ಲಿ ಮೂಡಿ ಬಂದ  ನೆಟ್‌ಫ್ಲಿಕ್ಸ್ (Netflix) ವೆಬ್‌ ಸಿರೀಸ್‌ (Web Series) ʼಐಸಿ 814- ದಿ ಕಂದಾಹಾರ್‌ ಹೈಜಾಕ್‌ʼ (IC 814 – The Kandahar Hijack) ವಿವಾದ ಎಬ್ಬಿಸಿದ್ದು, ಸರ್ಕಾರ ಮಧ್ಯ ಪ್ರವೇಶಿಸಿದೆ. 1999ರ ವಿಮಾನ ಅಪಹರಣ ಪ್ರಕರಣದ ಕಥಾವಸ್ತುವನ್ನು ಒಳಗೊಂಡ ಈ ವೆಬ್‌ ಸಿರೀಸ್‌ ಅನ್ನು ನಿಷೇಧಿಸಬೇಕು ಎನ್ನುವ ಕೂಗು ಬಲವಾಗಿ ಕೇಳಿ ಬಂದ ಬೆನ್ನಲ್ಲೇ ಕೇಂದ್ರ ನೆಟ್‌ಫ್ಲಿಕ್ಸ್‌ಗೆ ನೋಟಿಸ್‌ ಕಳುಹಿಸಿದೆ.

ಮಸೂದ್‌ ಅಜಾರ್‌,  ಓಮರ್‌ ಶೇಖ್‌ ಮತ್ತು ಮುಶ್ತಾಖ್‌ ಜಾರ್ಖರ್‌ ಸೇರಿದಂತೆ ಹಲವು ಉಗ್ರರ ಬಿಡುಗಡೆ ಕಾರಣವಾದ 1999ರ ಕಂದಾಹಾರ್‌ ವಿಮಾನ ಹೈಜಾಕ್‌ ಕೃತ್ಯದ ಮೇಲೆ ಈ ವೆಬ್‌ ಸಿರೀಸ್‌ ಬೆಳಕು ಚೆಲ್ಲುತ್ತಿದ್ದು, ಇದರಲ್ಲಿ ಉಗ್ರರನ್ನು ಅಮಾಯಕರು ಎಂಬಂತೆ ಬಿಂಬಿಸಲಾಗಿದೆ ಎಂಬ ಕೂಗು ಕೇಳಿಬಂದಿದೆ. ಈ ಉಗ್ರರೇ ಕೊನೆಗೆ 2001ರಲ್ಲಿ ಸಂಸತ್‌ ಮೇಲಿನ ದಾಳಿ ಮತ್ತು 2008ರ ಮುಂಬೈ ದಾಳಿಯಲ್ಲಿ ಕೈವಾಡ ಹೊಂದಿದ್ದರು. ಇದಾಗಿಯೂ ಈ ಉಗ್ರರನ್ನು ಬಹಳ ಅಮಾಯಕರಂತೆ ಸಿರೀಸ್‌ನಲ್ಲಿ ಬಿಂಬಿಸಲಾಗಿದೆ ಎನ್ನಲಾಗಿದೆ. ಅದೂ ಅಲ್ಲದೇ ಮೂಲತಃ ಇಬ್ರಾಹಿಂ ಅಥರ್, ಶಾಹಿದ್ ಅಖ್ತರ್, ಸನ್ನಿ ಅಹ್ಮದ್, ಜಹೂರ್ ಮಿಸ್ತ್ರಿ ಮತ್ತು ಶಾಕಿರ್ ಎಂಬ ಹೆಸರಿನ ಅಪಹರಣಕಾರರನ್ನು ಸರಣಿಯಲ್ಲಿ ‘ಶಂಕರ್’ ಮತ್ತು ‘ಭೋಲಾ’ ಎಂದು ಚಿತ್ರಿಸಲಾಗಿದೆ ಎಂದು ಪ್ರೇಕ್ಷರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹಿನ್ನಲೆಯಲ್ಲಿ ನೋಟಿಸ್‌ ಜಾರಿ ಮಾಡಲಾಗಿದೆ.

https://www.instagram.com/p/C_QJQ1YynaO/?utm_source=ig_web_copy_link&igsh=MzRlODBiNWFlZA==

ವೆಬ್ ಸಿರೀಸ್‌ನ ತಯಾರಕರು ಉದ್ದೇಶಪೂರ್ವಕವಾಗಿ ಅಪಹರಣಕಾರರ ಹೆಸರುಗಳನ್ನು ಭೋಲಾ ಮತ್ತು ಶಂಕರ್ ಎಂದು ಬದಲಾಯಿಸಿದ್ದಾರೆಂದು ನೂರಾರು ಸೋಷಿಯಲ್‌ ಮೀಡಿಯಾ ಬಳಕೆದಾರರು ಆರೋಪಿಸಿದ ನಂತರ ನೆಟ್‌ಫ್ಲಿಕ್ಸ್‌ನ ಭಾರತದ ಮುಖ್ಯಸ್ಥರಾದ ಮೋನಿಕಾ ಶೇರ್ಗಿಲ್‌ ಅವರಿಗೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ನೋಟಿಸ್‌ ಜಾರಿ ಮಾಡಿದೆ. ಅನುಭವ್ ಸಿನ್ಹಾ ಮತ್ತು ತ್ರಿಶಾಂತ್ ಶ್ರೀವಾಸ್ತವ ರಚಿಸಿದ ಈ ವೆಬ್ ಸಿರೀಸ್‌ ವಿಮಾನದ ಕ್ಯಾಪ್ಟನ್ ಆಗಿದ್ದ ದೇವಿ ಶರಣ್ ಮತ್ತು ಪತ್ರಕರ್ತ ಶ್ರೀಂಜಯ್ ಚೌಧರಿ ಅವರ ‘ಫ್ಲೈಟ್ ಟು ಫಿಯರ್: ದಿ ಕ್ಯಾಪ್ಟನ್ಸ್ ಸ್ಟೋರಿ’ (Flight Into Fear: The Captain’s Story) ಪುಸ್ತಕದಿಂದ ಸ್ಫೂರ್ತಿ ಪಡೆದಿದೆ. ಇದರಲ್ಲಿ ನಾಸಿರುದ್ದೀನ್ ಶಾ, ವಿಜಯ್ ವರ್ಮಾ ಮತ್ತು ಪಂಕಜ್ ಕಪೂರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಪ್ರಕರಣದ ಹಿನ್ನಲೆ

1999ರ ಡಿಸೆಂಬರ್ 24ರಂದು ಇಂಡಿಯನ್ ಏರ್‌ಲೈನ್‌ 814 ವಿಮಾನವನ್ನು ಉಗ್ರರು ಅಪಹರಿಸಿದ್ದರು. 191 ಪ್ರಯಾಣಿಕರನ್ನು ಹೊತ್ತ ವಿಮಾನ ನೇಪಾಳದ ಕಠ್ಮಂಡುವಿನಿಂದ ದೆಹಲಿಗೆ ತೆರಳುತ್ತಿದ್ದ ವೇಳೆ ಅಪಹರಿಸಲಾಗಿತ್ತು. ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಪ್ರಯಾಣಿಕರಂತೆ ಸೋಗಿನಲ್ಲಿದ್ದ ಐವರು ಅಪಹರಣಕಾರರು ವಿಮಾನದ ನಿಯಂತ್ರಣವನ್ನು ತಮ್ಮ ಕೈಗೆ ತೆಗೆದುಕೊಂಡಿದ್ದರು. ನಂತರ ಅಫ್ಘಾನಿಸ್ತಾನದ ಕಂದಾಹಾರ್‌ಗೆ ಕರೆದೊಯ್ಯುವ ಮುನ್ನ ಅಮೃತಸರ, ಲಾಹೋರ್ ಮತ್ತು ದುಬೈನಲ್ಲಿ ಲ್ಯಾಂಡ್‌ ಮಾಡಲಾಗಿತ್ತು.

ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಸರ್ಕಾರವು ಒತ್ತೆಯಾಳುಗಳ ಬಿಡುಗಡೆಗಾಗಿ ಮಸೂದ್ ಅಜರ್, ಅಹ್ಮದ್ ಒಮರ್ ಸಯೀದ್ ಶೇಖ್ ಮತ್ತು ಮುಷ್ತಾಕ್ ಅಹ್ಮದ್ ಝರ್ಗರ್ ಎಂಬ ಮೂವರು ಭಯೋತ್ಪಾದಕರನ್ನು ಭಾರತೀಯ ಜೈಲುಗಳಿಂದ ರಿಲೀಸ್‌ ಮಾಡಬೇಕಾದ ಅನಿವಾರ್ಯತೆಗೆ ಸಿಲುಕಿತ್ತು. 2000ರ ಜನವರಿ 6ರಂದು ಕೇಂದ್ರ ಗೃಹ ಸಚಿವಾಲಯ ಅಪಹರಣಕಾರರಾದ ಇಬ್ರಾಹಿಂ ಅಥರ್, ಶಾಹಿದ್ ಅಖ್ತರ್ ಸಯೀದ್, ಸನ್ನಿ ಅಹ್ಮದ್ ಖಾಜಿ, ಮಿಸ್ತ್ರಿ ಜಹೂರ್ ಇಬ್ರಾಹಿಂ ಮತ್ತು ಶಕೀರ್ ಗುರುತನ್ನು ಬಿಡುಗಡೆ ಮಾಡಿತ್ತು.