Saturday, 14th December 2024

OTT Effect: ಲೋಕಸಭೆ ಚುನಾವಣೆ, ಐಪಿಎಲ್‌ನಿಂದಾಗಿ ಪಿವಿಆರ್ ಐನಾಕ್ಸ್‌ಗೆ 136 ಕೋಟಿ ರೂ. ನಷ್ಟ!

OTT Effect

ಮುಂಬೈ: ಪ್ರಮುಖ ಮಲ್ಟಿಪ್ಲೆಕ್ಸ್ ಆಪರೇಟರ್ ಪಿವಿಆರ್ ಐನಾಕ್ಸ್ ಕಂಪನಿಯು ಈ ವರ್ಷ ಈಗಾಗಲೇ 85 ಚಿತ್ರಮಂದಿರಗಳನ್ನು ಮುಚ್ಚಿದೆ. ಕಲೆಕ್ಷನ್‌ ಕಡಿಮೆ ಇರುವ 70 ಚಿತ್ರಮಂದಿರಗಳನ್ನು 2025ರಲ್ಲಿ ಮುಚ್ಚಲು ಪಿವಿಆರ್‌ ನಿರ್ಧರಿಸಿದೆ. ಈ ಚಿತ್ರಮಂದಿರಗಳು ಹಳೆಯ ಮಾಲ್‍ಗಳಲ್ಲಿದ್ದು, ಭಾರೀ ನಷ್ಟದಲ್ಲಿವೆ ಎಂಬುದಾಗಿ ಕಂಪನಿ ತಿಳಿಸಿದೆ. ತನ್ನ ಸಾಲವನ್ನು ನಿರ್ವಹಿಸಲು ಪಿವಿಆರ್ ಐನಾಕ್ಸ್ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದೆ. ಲಾಭವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಅನಿವಾರ್ಯವಲ್ಲ ಎನಿಸಿದ ರಿಯಲ್ ಎಸ್ಟೇಟ್ ಅನ್ನು ಮಾರಾಟ ಮಾಡಲು ನಿರ್ಧರಿಸಿದೆ ಎನ್ನಲಾಗಿದೆ. ಒಟಿಟಿ (OTT Effect) ಪ್ಲಾಟ್ ಫಾರ್ಮ್‌ಗಳು ಹೆಚ್ಚುತ್ತಿರುವುದು ಕೂಡ ಚಿತ್ರಮಂದಿರದ ಮೇಲೆ ಭಾರಿ ಪರಿಣಾಮ ಬೀರಿದೆ.

ಲೋಕಸಭಾ ಚುನಾವಣೆ ಮತ್ತು ಐಪಿಎಲ್‌ನಿಂದಾಗಿ ಚಲನಚಿತ್ರ ಬಿಡುಗಡೆಯಲ್ಲಿ ವಿಳಂಬವಾದ ಕಾರಣ ಪಿವಿಆರ್ ಕಂಪನಿಯು 2025ರ ಮೊದಲ ತ್ರೈಮಾಸಿಕದಲ್ಲಿ 136.6 ಕೋಟಿ ರೂ.ಗಳ ಗಮನಾರ್ಹ ನಷ್ಟವನ್ನು ಅನುಭವಿಸಿದೆ. ಹಿಂದಿನ ವರ್ಷ ಈ ನಷ್ಟ 44.1 ಕೋಟಿ ರೂ. ಇತ್ತು. ಈ ಸಂದಿಗ್ಧ ಪರಿಸ್ಥಿತಿಯ ನಡುವೆಯೂ ಪಿವಿಆರ್ ಐನಾಕ್ಸ್ 2025ರ ಆರ್ಥಿಕ ವರ್ಷದ ಮಧ್ಯದಲ್ಲಿ ಸಿಂಗಂ ಅಗೇನ್, ಭೂಲ್ ಭುಲೈಯಾ 3, ದೇವರಾ ಮತ್ತು ಪುಷ್ಪಾ 2ನಂತಹ ಚಿತ್ರಗಳೊಂದಿಗೆ ಆರ್ಥಿಕ ಚೇತರಿಕೆ ಕಾಣುವ ಭರವಸೆಯನ್ನು ಹೊಂದಿದೆ.

ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಒಟಿಟಿ ಪ್ಲಾಟ್ ಫಾರ್ಮ್‌ಗಳು ಹೆಚ್ಚುತ್ತಿರುವುದು ಚಿತ್ರಮಂದಿರಗಳಿಗೆ ಭಾರಿ ಸವಾಲನ್ನು ಒಡ್ಡುತ್ತಿವೆ. ಆದರೂ ಭಾರತದಲ್ಲಿ ಚಿತ್ರಮಂದಿರಗಳಿಗೆ ವೀಕ್ಷಕರು ಹೆಚ್ಚಾಗಿ ಬರುತ್ತಿದ್ದಾರೆ. ಹಾಗಾಗಿ 2023ರಲ್ಲಿ ವೀಕ್ಷಕರ ಸಂಖ್ಯೆ 29% ಹೆಚ್ಚಳವಾಗಿದೆ ಎನ್ನಲಾಗಿದೆ. ಹೆಚ್ಚಿನ ವೀಕ್ಷಕರನ್ನು ಆಕರ್ಷಿಸಲು, ಪಿವಿಆರ್ ಐನಾಕ್ಸ್ ಸಿನೆಮಾ ಪ್ರೇಮಿಗಳ ಡೇ, ರಿಯಾಯಿತಿ ಟಿಕೆಟ್‍ಗಳು, ಚಲನಚಿತ್ರೋತ್ಸವಗಳು ಮತ್ತು ಕ್ರೀಡಾ ಕಾರ್ಯಕ್ರಮಗಳಂತಹ ಹೊಸ ರೀತಿಯ ಕಾರ್ಯಕ್ರಮಗಳನ್ನು ಪರಿಚಯಿಸುತ್ತಿದೆ.

ಹೆಚ್ಚಿನ ಬೇಡಿಕೆ ಮತ್ತು ಕಡಿಮೆ ಮಲ್ಟಿಪ್ಲೆಕ್ಸ್‌ಗಳನ್ನು ಹೊಂದಿರುವ ದಕ್ಷಿಣ ಭಾರತದ ಚಲನಚಿತ್ರ ಮಾರುಕಟ್ಟೆಯಲ್ಲಿ ತನ್ನ ಅಸ್ತಿತ್ವವನ್ನು ವಿಸ್ತರಿಸುವಲ್ಲಿ ಪಿವಿಆರ್ ಐನಾಕ್ಸ್ ಗಮನ ಹರಿಸಿದೆ ಎನ್ನಲಾಗಿದೆ. ಬುಕ್ ಮೈ ಶೋನ ಪ್ರಾಬಲ್ಯಕ್ಕೆ ಸವಾಲೊಡ್ಡುವ ಮತ್ತು ಹೆಚ್ಚು ಸ್ಪರ್ಧಾತ್ಮಕ ಬೆಲೆಯನ್ನು ನೀಡುವ ಗುರಿಯೊಂದಿಗೆ ಪೇಟಿಎಂನ ಚಲನಚಿತ್ರ ಮತ್ತು ಟಿಕೆಟಿಂಗ್ ಪ್ಲಾಟ್ ಫಾರ್ಮ್ ಅನ್ನು ಸ್ವಾಧೀನಪಡಿಸಿಕೊಳ್ಳುವ ಮೂಲಕ ಜೊಮಾಟೊ ಚಲನಚಿತ್ರ ಟಿಕೆಟಿಂಗ್ ಜಾಗವನ್ನು ಪ್ರವೇಶಿಸಿದೆ. ಮಾಧ್ಯಮ ಕ್ಷೇತ್ರಗಳು ವಿಕಸನಗೊಳ್ಳುತ್ತಿದ್ದಂತೆ, ಗ್ರಾಹಕರ ಆದ್ಯತೆಗಳು ಒಟಿಟಿ ಮತ್ತು ಥಿಯೇಟರ್ ಅನುಭವಗಳಲ್ಲಿ ಬದಲಾವಣೆಗಳನ್ನು ಉಂಟುಮಾಡುತ್ತಲೇ ಇವೆ.