Sunday, 15th December 2024

Pushpa 2 Collection: 11 ದಿನ ಕಳೆದರೂ ತಗ್ಗುತ್ತಿಲ್ಲ ‘ಪುಷ್ಪ 2’ ಅಬ್ಬರ: ಅಲ್ಲು ಅರ್ಜುನ್‌-ರಶ್ಮಿಕಾ ನಟನೆಯ ಈ ಚಿತ್ರ ಗಳಿಸಿದ್ದೆಷ್ಟು?

Pushpa 2 Collection

ಹೈದರಾಬಾದ್: ಭಾರತದಲ್ಲಿ ಡಿ. 5ರಂದು ಆರಂಭವಾದ ಪುಷ್ಪರಾಜ್‌-ಶ್ರೀವಲ್ಲಿ ಅಬ್ಬರ 11 ದಿನ ಕಳೆದರೂ ಕಡಿಮೆಯಾಗುವ ಲಕ್ಷಣ ಕಂಡು ಬರುತ್ತಿಲ್ಲ. ಹೌದು, ಅಲ್ಲು ಅರ್ಜುನ್‌ (Allu Arjun)-ರಶ್ಮಿಕಾ ಮಂದಣ್ಣ (Rashmika Mandanna) ನಟನೆಯ, ಸುಕುಮಾರ್‌ ನಿರ್ದೇಶನದ ʼಪುಷ್ಪ 2ʼ (Pushpa 2) ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ. ದಾಖಲೆಗಳನ್ನು ಧೂಳೀಪಟ ಮಾಡಿ ಮುನ್ನುಗ್ಗುತ್ತಿದೆ. ಇದೀಗ 2024ರ ಅತೀ ಹೆಚ್ಚು ಗಳಿಸಿದ ಚಿತ್ರ ಎನ್ನುವ ಹೆಗ್ಗಳಿಕೆಯೂ ಪಾತ್ರವಾಗಿದೆ. ಇದರೊಂದಿಗೆ ಜೂನ್‌ನಲ್ಲಿ ರಿಲೀಸ್‌ ಆಗಿದ್ದ ಪ್ರಭಾಸ್‌-ದೀಪಿಕಾ ಪಡುಕೋಣೆ-ಅಮಿತಾಭ್‌ ಬಚ್ಚನ್‌ ನಟನೆಯ ʼಕಲ್ಕಿ 2898 ಎಡಿʼ ಚಿತ್ರದ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದಿದೆ.

ವಿಶ್ವಾದ್ಯಂತ 11 ದಿನಗಳಲ್ಲಿ ʼಪುಷ್ಪ 2ʼ ಬರೋಬ್ಬರಿ 1,300 ಕೋಟಿ ರೂ. ಬಾಚಿಕೊಂಡಿದೆ. ಈ ಮೂಲಕ ರಾಜಮೌಳಿ ನಿರ್ದೇಶನದ ರಾಮ್‌ ಚರಣ್‌ ಮತ್ತು ಜೂ.ಎನ್‌ಟಿಆರ್‌ ನಟನೆಯ ʼಆರ್‌ಆರ್‌ಆರ್‌ʼ, ಪ್ರಶಾಂತ್‌ ನೀಲ್‌ ಆ್ಯಕ್ಷನ್‌ ಕಟ್‌ ಹೇಳಿದ ಹೇಳಿದ, ಯಶ್‌-ಶ್ರೀನಿಧಿ ಶೆಟ್ಟಿ ಅಭಿನಯದ ʼಕೆಜಿಎಫ್‌: ಚಾಪ್ಟರ್‌ 2ʼ ಗಳಿಕೆಯನ್ನೂ ಮೀರಿದೆ. ಇವೆರಡು ಚಿತ್ರಗಳು ಕ್ರಮವಾಗಿ 1,230 ಕೋಟಿ ರೂ. ಮತ್ತು 1,215 ಕೋಟಿ ರೂ. ಗಳಿಸಿವೆ.

ಅಧಿಕೃತ ಮಾಹಿತಿ ಹಂಚಿಕೊಂಡ ಮೈತ್ರಿ ಮೂವಿ ಮೇಕರ್ಸ್‌

ʼಪುಷ್ಪ 2ʼ ಚಿತ್ರ ನಿರ್ಮಿಸಿರುವ ಮೈತ್ರಿ ಮೂವಿ ಮೇಕರ್ಸ್‌ ಕಲೆಕ್ಷನ್‌ ಬಗ್ಗೆ ಅಧಿಕೃತವಾಗಿ ಮಾಹಿತಿ ಹಂಚಿಕೊಂಡಿದೆ. ʼʼ10 ದಿನಗಳಲ್ಲಿ ʼಪುಷ್ಪ 2ʼ ಒಟ್ಟು 1,292 ಕೋಟಿ ರೂ. ಗಳಿಸಿದೆ. ಆ ಮೂಲಕ 2024ರ ಅತೀ ಹೆಚ್ಚು ಕಲೆಕ್ಷನ್‌ ಮಾಡಿದ ಸಿನಿಮಾ ಎನಿಸಿಕೊಂಡಿದೆʼʼ ಎಂದು ಚಿತ್ರತಂಡ ಎಕ್ಸ್‌ನಲ್ಲಿ ಬರೆದುಕೊಂಡಿದೆ. ʼಕಲ್ಕಿ 2898 ಎಡಿʼ ಸಿನಿಮಾ ಒಟ್ಟು 1,200 ಕೋಟಿ ರೂ. ಗಳಿಸಿದೆ. ಮೂಲಗಳ ಪ್ರಕಾರ 11ನೇ ದಿನವಾದ ಭಾನುವಾರ (ಡಿ. 15) ‘ಪುಷ್ಪ 2’ ಚಿತ್ರ ಒಟ್ಟು 50.07 ಕೋಟಿ ರೂ. ಗಳಿಸಿದೆ. ಭಾರತವೊಂದರಲ್ಲೇ 10 ದಿನಗಳಲ್ಲಿ 875.57 ಕೋಟಿ ರೂ. ಬಾಚಿಕೊಂಡಿದೆ.

ಮೊದಲ ಸ್ಥಾನದತ್ತ ಕಣ್ನು ನೆಟ್ಟ ಪುಷ್ಪರಾಜ್‌

ಇದೇ ವೇಗ ಕಾಯ್ದುಕೊಂಡರೆ ‘ಪುಷ್ಪ 2’ ಇದುವರೆಗೆ ಅತೀಹೆಚ್ಚು ಗಳಿಸಿದ ಭಾರತದ ಚಿತ್ರ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಲಿದೆ ಎನ್ನಲಾಗುತ್ತಿದೆ. ಈ ಪಟ್ಟಿಯಲ್ಲಿ ಸದ್ಯ ‘ಪುಷ್ಪ 2’ ಚಿತ್ರದ ಮುಂದಿರುವುದು ಎರಡೇ ಸಿನಿಮಾಗಳು. ವಿಶ್ವಾದ್ಯಂತ 2,070 ಕೋಟಿ ರೂ. ಗಳಿಸಿದ ಹಿಂದಿಯ ʼದಂಗಲ್‌ʼ ಮೊದಲ ಸ್ಥಾನದಲ್ಲಿದ್ದರೆ, 1,790 ಕೋಟಿ ರೂ. ಗಳಿಸಿದ ಟಾಲಿವುಡ್‌ನ ʼಬಾಹುಬಲಿ 2ʼ ಎರಡನೇ ಸ್ಥಾನದಲ್ಲಿದೆ. ಈ ಪಟ್ಟಿಯಲ್ಲಿ ಸದ್ಯ 3ನೇ ರ‍್ಯಾಂಕ್‌ನಲ್ಲಿರುವ ʼಪುಷ್ಪ 2ʼ ಶೀಘ್ರದಲ್ಲಿಯೇ ಅಗ್ರಸ್ಥಾನ ಪಡೆಯಲಿದೆ ಎನ್ನುವ ಲೆಕ್ಕಾಚಾರ ಆರಂಭವಾಗಿದೆ.

ವಿವಿಧ ಭಾಷೆಗಳಲ್ಲಿ ತೆರೆಕಂಡಿರುವ ಈ ಚಿತ್ರದ ಹಿಂದಿ ವರ್ಷನ್‌ 507.50 ಕೋಟಿ ರೂ.ಗಿಂತ ಹೆಚ್ಚು ಕಲೆಕ್ಷನ್‌ ಮಾಡಿದೆ. ಈ ಮೂಲಕ ಅತೀ ವೇಗವಾಗಿ 500 ಕೋಟಿ ರೂ. ಕ್ಲಬ್‌ ದಾಟಿದ ಹಿಂದಿ ಡಬ್‌ ಸಿನಿಮಾ ಎನಿಸಿಕೊಂಡಿದೆ. ಇದು 2021ರಲ್ಲಿ ಬಿಡುಗಡೆಯಾದ ʼಪುಷ್ಪʼ ಸಿನಿಮಾದ ಮುಂದುವರಿದ ಭಾಗ. ಅದರಲ್ಲಿನ ಬಹುತೇಕ ಕಲಾವಿದರೂ ಇಲ್ಲೂ ಮುಂದುವರಿದಿದ್ದಾರೆ.

ಈ ಸುದ್ದಿಯನ್ನೂ ಓದಿ: Pushpa 2: ಬಾಕ್ಸ್‌ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿರುವ ಪುಷ್ಪ 2; 1500 ಕೋಟಿ ರೂ. ಗಳಿಕೆಯತ್ತ ದಾಪುಗಾಲು