ಹೈದರಾಬಾದ್: ವರ್ಷಾಂತ್ಯದಲ್ಲಿ ಬಾಕ್ಸ್ ಆಫೀಸ್ನಲ್ಲಿ ʼಪುಷ್ಪ 2ʼ (Pushpa 2) ಚಿತ್ರ ಭರ್ಜರಿ ಸದ್ದು ಮಾಡುತ್ತಿದೆ. ಸುಕುಮಾರ್ (Sukumar)-ಅಲ್ಲು ಅರ್ಜುನ್ (Allu Arjun)-ರಶ್ಮಿಕಾ ಮಂದಣ್ಣ (Rashmika Mandanna) ಕಾಂಬಿನೇಷನ್ ಮತ್ತೊಮ್ಮೆ ಮೋಡಿ ಮಾಡುತ್ತಿದೆ. ಡಿ. 5ರಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಕಂಡಿರುವ ಈ ಸಿನಿಮಾದ ಅಬ್ಬರ 12 ದಿನ ಕಳೆದರೂ ಕಡಿಮೆಯಾಗಿಲ್ಲ. ರಿಲೀಸ್ ಆಗಿ 2 ವಾರವಾದರೂ ಕೋಟಿ ಕೋಟಿ ದೋಚುತ್ತಿದೆ. ಈಗಾಗಲೇ ಹಲವು ದಾಖಲೆಗಳನ್ನು ಬ್ರೇಕ್ ಮಾಡಿರುವ ʼಪುಷ್ಪ 2ʼ ಭಾರತವೊಂದರಲ್ಲೇ 900 ಕೋಟಿ ರೂ.ಗಿಂತ ಅಧಿಕ ಕಲೆಕ್ಷನ್ ಮಾಡಿ ಅಕ್ಷರಶಃ ವೈಲ್ಡ್ ಫೈರ್ನಂತೆ ಮುನ್ನುಗ್ಗುತ್ತಿದೆ.
2ನೇ ಸೋಮವಾರವಾದ ಡಿ. 16ರಂದು ಈ ಚಿತ್ರ ಸುಮಾರು 27.75 ಕೋಟಿ ರೂ. ಗಳಿಸಿದೆ ಎಂದು ವರದಿಯೊಂದು ತಿಳಿಸಿದೆ. ಇದುವರೆಗೆಗಿನ ದಿನದ ಅತಿ ಕಡಿಮೆ ಗಳಿಕೆ ಇದು ಎನಿಸಿಕೊಂಡಿದೆ. ಮೊದಲ ವಾರ 725.8 ಕೋಟಿ ರೂ. ಗಳಿಸಿದ ‘ಪುಷ್ಪ 2’ ಚಿತ್ರ 2ನೇ ಶನಿವಾರ 63.3 ಕೋಟಿ ರೂ., ಮತ್ತು ಭಾನುವಾರ 76.6 ಕೋಟಿ ರೂ. ಗಳಿಸಿದೆ. ಈ ಮೂಲಕ 12 ದಿನಗಳ ಒಟ್ಟು ಕಲೆಕ್ಷನ್ ಭಾರತದಲ್ಲಿ 929.85 ಕೋಟಿ ರೂ.ಗೆ ತಲುಪಿದೆ.
1,400 ಕೋಟಿ ರೂ. ದಾಟಿದ ಕಲೆಕ್ಷನ್
ಈ ಹಿಂದೆ ಗಲ್ಲಾ ಪೆಟ್ಟಿಗೆ ದೋಚಿ ಇತಿಹಾಸ ಬರೆದಿದ್ದ ಸ್ಯಾಂಡಲ್ವುಡ್ನ ಹೆಮ್ಮೆಯ, ಪ್ರಶಾಂತ್ ನೀಲ್-ಯಶ್ ಕಾಂಬಿನೇಷನ್ನ ʼಕೆಜಿಎಫ್ 2ʼ, ರಾಜಮೌಳಿ-ರಾಮ್ ಚರಣ್-ಜೂ.ಎನ್ಟಿಆರ್ ಮೊದಲ ಬಾರಿಗೆ ಒಂದಾದ ಟಾಲಿವುಡ್ನ ʼಆರ್ಆರ್ಆರ್ʼ ಚಿತ್ರಗಳ ಗಳಿಕೆಯನ್ನೂ ಮೀರಿ ʼಪುಷ್ಪ 2ʼ ಇದೀಗ ಮುನ್ನುಗ್ಗುತ್ತಿದೆ. ಜಾಗತಿಕ ಬಾಕ್ಸ್ ಆಫೀಸ್ನಲ್ಲಿ ಅಲ್ಲು ಅರ್ಜುನ್ ಚಿತ್ರ 1,400 ಕೋಟಿ ರೂ. ಮ್ಯಾಜಿಕ್ ನಂಬರ್ ದಾಟಿದೆ. ಚಿತ್ರ ನಿರ್ಮಿಸಿರುವ ಮೈತ್ರಿ ಮೋವಿ ಮೇಕರ್ಸ್ ಈ ಬಗ್ಗೆ ಅಧಿಕೃತ ಮಾಹಿತಿ ಹಂಚಿಕೊಂಡು, 11 ದಿಗಳಲ್ಲಿ ತಮ್ಮ ಸಿನಿಮಾ 1,409 ಕೋಟಿ ರೂ. ಕಲೆಕ್ಷನ್ ಮಾಡಿದೆ ಎಂದು ತಿಳಿಸಿದೆ. ಇದೇ ವೇಗ ಕಾಯ್ದುಕೊಂಡರೆ ಇನ್ನೆರಡು ದಿನಗಳಲ್ಲಿ 1,500 ಕೋಟಿ ರೂ. ಕ್ಲಬ್ ಸೇರಲಿದೆ.
ʼಪುಷ್ಪ 2ʼ ಬ್ರೇಕ್ ಮಾಡಿದ ದಾಖಲೆಗಳು ಒಂದೆರಡಲ್ಲ
ಮೊದಲ ದಿನವೇ ಭಾರತದಲ್ಲಿ 165 ಕೋಟಿ ರೂ. ಗಳಿಸಿದ ʼಪುಷ್ಪ 2ʼ ವಿಶ್ವಾದ್ಯಂತ 294 ಕೋಟಿ ರೂ. ಕಲೆಕ್ಷನ್ ಮಾಡಿದೆ. ಬಳಿಕ ವೇಗವಾಗಿ 500 ಕೋಟಿ ರೂ., 1 ಸಾವಿರ ಕೋಟಿ ರೂ. ಸೇರಿದ ಭಾರತೀಯ ಚಿತ್ರ ಎನಿಸಿಕೊಂಡಿದೆ. ಅಲ್ಲದೆ ವೇಗವಾಗಿ 500 ಕೋಟಿ ರೂ. ಗಳಿಸಿದ ಹಿಂದಿಗೆ ಡಬ್ ಆದ ಮೊದಲ ಚಿತ್ರ ಎನ್ನುವ ಹೆಗ್ಗಳಿಕೆಗೂ ಪಾತ್ರವಾಗಿದೆ. ಜತೆಗೆ 2ನೇ ವಾರ ಭರ್ಜರಿಯಾಗಿ ಕಮಾಯಿ ಮಾಡಿ ಬಾಲಿವುಡ್ನ ʼಸ್ತ್ರೀ 2ʼ, ʼಗದರ್ 2ʼ, ʼಅನಿಮಲ್ʼ ಮತ್ತು ʼಜವಾನ್ʼ ಚಿತ್ರಗಳ ಗಳಿಕೆಯನ್ನೂ ದಾಟಿದೆ.
ವಿಶೇಷ ಎಂದರೆ 500 ಕೋಟಿ ರೂ. ಗಡಿಯನ್ನು ದಾಟಲು ʼಪುಷ್ಪ 2ʼ ಹಿಂದಿ ವರ್ಷನ್ ಕೇವಲ 11 ದಿನ ತೆಗೆದುಕೊಂಡರೆ ಈ ಮೈಲಿಗಲ್ಲು ತಲುಪಲು ಶಾರುಖ್ ಖಾನ್ ಅವರ ʼಜವಾನ್ʼಗೆ 18 ದಿನ ಬೇಕಾಯ್ತು. ʼಪುಷ್ಪ 2ʼ ಹಿಂದಿ ಅವತರಣಿಕೆ ಇದುವರೆಗೆ 573.1 ಕೋಟಿ ರೂ. ಜೇಬಿಗಿಳಿಸಿದೆ. 3 ವಾರಗಳಲ್ಲೇ ಅತೀ ಹೆಚ್ಚಿ ಗಳಿಸಿದ ಹಿಂದಿ ಚಿತ್ರ ಎನ್ನುವ ದಾಖಲೆಯನ್ನೂ ತನ್ನ ಹೆಸರಿಗೆ ಬರೆಯಲಿದೆ.
ʼಕೆಜಿಎಫ್ 2ʼ, ʼಆರ್ಆರ್ಆರ್ʼ ದಾಖಲೆ ಪುಡಿಪುಡಿ
12 ದಿನಗಳಲ್ಲೇ ʼಪುಷ್ಪ 2ʼ ಚಿತ್ರವು ʼಆರ್ಆರ್ಆರ್ʼ ಮತ್ತು ʼಕೆಜಿಎಫ್ 2ʼ ಕಲೆಕ್ಷನ್ ಅನ್ನು ದಾಟಿ ಮುಂದುವರಿದಿದೆ. ʼಆರ್ಆರ್ಆರ್ʼ ಒಟ್ಟು 1,230 ಕೋಟಿ ರೂ. ಗಳಿಸಿದರೆ, ʼಕೆಜಿಎಪ್ 2ʼ ಕಲೆಕ್ಷನ್ ಮಾಡಿದ್ದು 1,215 ಕೋಟಿ ರೂ. ಇದೀಗ ʼಪುಷ್ಪ 2ʼ ಈ 2 ಚಿತ್ರಗಳನ್ನು ಮೀರಿ ಅತೀ ಹೆಚ್ಚು ಗಳಿಸಿದ 3ನೇ ಭಾರತೀಯ ಸಿನಿಮಾ ಎನಿಸಿಕೊಂಡಿದೆ. 2,070 ಕೋಟಿ ರೂ. ಗಳಿಸಿದ ಹಿಂದಿಯ ʼದಂಗಲ್ʼ ಮತ್ತು 1,790 ಕೋಟಿ ರೂ. ಗಳಿಸಿದ ರಾಜಮೌಳಿ-ಪ್ರಭಾಸ್-ಅನುಷ್ಕಾ ಶೆಟ್ಟಿ ಕಾಂಬಿನೇಷನ್ನ ತೆಲುಗಿನ ʼಬಾಹುಬಲಿ 2ʼ ಈ ಪಟ್ಟಿಯ ಮೊದಲೆರಡು ಸ್ಥಾನದಲ್ಲಿದೆ.
ಈ ಸುದ್ದಿಯನ್ನೂ ಓದಿ: Pushpa 2: ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸುತ್ತಿರುವ ಪುಷ್ಪ 2; 1500 ಕೋಟಿ ರೂ. ಗಳಿಕೆಯತ್ತ ದಾಪುಗಾಲು