Wednesday, 23rd October 2024

Pushpa 2: ‘ಪುಷ್ಪ 2’ ಹೊಸ ಪೋಸ್ಟರ್ ರಿಲೀಸ್‌; ಅಲ್ಲು ಅರ್ಜುನ್‌ ಸೀರಿಯಸ್ ಲುಕ್‌ಗೆ ಫ್ಯಾನ್ಸ್‌ ಫಿದಾ

Pushpa 2

ಹೈದರಾಬಾದ್‌: ಈ ವರ್ಷದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲೊಂದು ʼಪುಷ್ಪ 2ʼ (Pushpa 2). ಡಿಸೆಂಬರ್ 6ಕ್ಕೆ ಇದು ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ವಿಶ್ವಾದ್ಯಂತ ಬಿಡುಗಡೆಯಾಗಲಿದೆ. ಆ ಮೂಲಕ ಮತ್ತೊಮ್ಮೆ ಮೋಡಿ ಮಾಡಲು ಅಲ್ಲು ಅರ್ಜುನ್‌ (Allu Arjun) ಮತ್ತು ರಶ್ಮಿಕಾ ಮಂದಣ್ಣ (Rashmika Mandanna) ಜೋಡಿ ಸಜ್ಜಾಗಿದೆ. ʼಪುಷ್ಪʼ ಸೀಕ್ವೆಲ್ ತೆರೆಗೆ ಬರಲು ಇನ್ನು ಹೆಚ್ಚು ಕಮ್ಮಿ 50 ದಿನಗಳು ಬಾಕಿ ಉಳಿದಿದೆ. ಈಗ ಚಿತ್ರತಂಡ ಪುಷ್ಪರಾಜ್‌ನ ಹೊಸ ಲುಕ್ ಬಿಟ್ಟು ಕಿಕ್ ಹೆಚ್ಚಿಸಿದೆ. ಇತ್ತೀಚೆಗಷ್ಟೇ ಚಿತ್ರತಂಡ ಹೊಸ ಪೋಸ್ಟರ್ ಬಿಡುಗಡೆ ಮಾಡಿದೆ. ಕಾಲು ಮೇಲೆ ಕಾಲು ಹಾಕಿ ಸೀರಿಯಸ್ ಮೋಡ್‌ನಲ್ಲಿ ಕುಳಿತಿರುವ ಪುಷ್ಪರಾಜ್‌ನ ಪೋಸ್ಟರ್ ಅನಾವರಣ ಮಾಡಲಾಗಿದೆ. ಈ ಹೊಸ ಪೋಸ್ಟರ್‌ಗೆ ಪ್ರೇಕ್ಷಕರು ಮತ್ತು ಅಭಿಮಾನಿಗಳು ಫಿದಾ ಆಗಿದ್ದಾರೆ.

ʼಪುಷ್ಪ 2ʼ ಸಿನಿಮಾದ ಟೀಸರ್ ಹಾಗೂ ಹಾಡುಗಳು ಈಗಾಗಲೇ ಭಾರೀ ಸದ್ದು ಮಾಡಿವೆ. ಮಿಲಿಯನ್‌ಗಟ್ಟಲೇ ವೀವ್ಸ್ ಪಡೆದುಕೊಂಡಿವೆ. ಮೈತ್ರಿ ಮೂವಿ ಮೇಕರ್ಸ್ ಹಾಗೂ ಸುಕುಮಾರ್ ರೈಟಿಂಗ್ ನಿರ್ಮಾಣದಡಿ ಮೂಡಿ ಬರುತ್ತಿರುವ ʼಪುಷ್ಪʼ ಸೀಕ್ವೆಲ್‌ಗಾಗಿ ರಾಕ್ ಸ್ಟಾರ್ ದೇವಿಪ್ರಸಾದ್ ಸಂಗೀತ, ಮಿರೆಸ್ಲೋ ಕುಬಾ ಬ್ರೋಜೆಕ್ ಛಾಯಾಗ್ರಾಹಣ ಒದಗಿಸಿದ್ದಾರೆ.

ಈ ಚಿತ್ರಕ್ಕೆ ಸುಕುಮಾರ್ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಅಲ್ಲು ಅರ್ಜುನ್‌ಗೆ ಜೋಡಿಯಾಗಿ, ಶ್ರೀವಲ್ಲಿಯಾಗಿ ರಶ್ಮಿಕಾ ಮಂದಣ್ಣ ಮತ್ತೊಮ್ಮೆ ನಟಿಸಿದ್ದಾರೆ. ಫಹದ್ ಫಾಸಿಲ್, ಡಾಲಿ ಧನಂಜಯ್, ಜಗಪತಿ ಬಾಬು, ಪ್ರಕಾಶ್ ರಾಜ್, ಸುನೀಲ್ ಮತ್ತು ಅನಸೂಯಾ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಈ ಮೊದಲು ʼಪುಷ್ಪ 2ʼ ಸಿನಿಮಾವನ್ನು ಆಗಸ್ಟ್ 15ಕ್ಕೆ ತೆರೆಗೆ ತರಲು ಚಿತ್ರತಂಡ ಯೋಜನೆ ಹಾಕಿಕೊಂಡಿತ್ತು. ಬಳಿಕ ಚಿತ್ರದ ಕೆಲಸಗಳು ಬಾಕಿ ಉಳಿದಿದ್ದರಿಂದ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿತ್ತು. ಕೊನೆಗೂ ಚಿತ್ರತಂಡ ಡಿಸೆಂಬರ್ 6ಕ್ಕೆ ಮುಹೂರ್ತ ಫಿಕ್ಸ್ ಮಾಡಿಕೊಂಡಿದೆ.

ಟ್ರೈಲರ್‌ ರಿಲೀಸ್‌ ಯಾವಾಗ?

ಕೆಲವೊಂದು ವರದಿಗಳ ಪ್ರಕಾರ ನವೆಂಬರ್‌ ಮೊದಲ ವಾರದಲ್ಲಿ ʼಪುಷ್ಪ 2ʼ ಸಿನಿಮಾದ ಟ್ರೈಲರ್‌ ರಿಲೀಸ್‌ ಆಗಲಿದೆ. ಆ ಮೂಲಕ ಅಲ್ಲು ಅರ್ಜುನ್‌ ಅಭಿಮಾನಿಗಳಿಗೆ ದೀಪಾವಳಿ ಹಬ್ಬದ ಕೊಡುಗೆ ನೀಡಲು ಚಿತ್ರತಂಡ ಯೋಜನೆ ರೂಪಿಸಿದೆ ಎನ್ನಲಾಗಿದೆ. ಅಧಿಕೃತ ಪ್ರಕಟಣೆ ಇನ್ನಷ್ಟೇ ಹೊರ ಬರಬೇಕಿದೆ.

ʼಪುಷ್ಪʼ ಚಿತ್ರದಲ್ಲಿ ಅಲ್ಲು ಅರ್ಜುನ್‌ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಅದುವರೆಗೆ ಸ್ಟೈಲಿಶ್‌ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದ ಅವರು ಅದಕ್ಕೆ ಸಂಪೂರ್ಣ ವಿರುದ್ಧ ಪಾತ್ರ ನಿರ್ವಹಿಸಿದ್ದರು. ಹಳ್ಳಿ ಹೈದನ ಪಾತ್ರದಲ್ಲಿ ಮೋಡಿ ಮಾಡಿದ್ದರು. ಜತೆಗೆ ಈ ಚಿತ್ರದಲ್ಲಿನ ಅಭಿನಯಕ್ಕಾಗಿ ಅತ್ಯುತ್ತಮ ನಟ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನೂ ಪಡೆದುಕೊಂಡಿದ್ದರು. ಹೀಗಾಗಿ ʼಪುಷ್ಪ 2ʼ ಚಿತ್ರದ ಮೇಲೆ ನಿರೀಕ್ಷೆ ಮೂಡಿತ್ತು. ಅಲ್ಲದೆ ಮೊದಲ ಭಾಗದ ಕಥೆ ಕುತೂಹಲ ಘಟ್ಟದಲ್ಲಿ ಕೊನೆಯಾಗಿದ್ದು ಕೂಡ ಎರಡನೇ ಭಾಗಕ್ಕೆ ಕಾಯುವಂತೆ ಮಾಡಿದೆ.

ಈ ಸುದ್ದಿಯನ್ನೂ ಓದಿ: Pushpa 2: ಅಲ್ಲು ಅರ್ಜುನ್‌-ರಶ್ಮಿಕಾ ಅಭಿನಯದ ʼಪುಷ್ಪ 2ʼ ಚಿತ್ರದ ಟ್ರೈಲರ್‌ ರಿಲೀಸ್‌ಗೆ ದಿನಗಣನೆ