Thursday, 12th December 2024

Raja Rani Reloaded Winner: ಸಂಜಯ್‌ – ಮೇಘಾ ಜೋಡಿಗೆ ರಾಜಾ ರಾಣಿ ಚಾಂಪಿಯನ್‌ ಪಟ್ಟ

Raja Rani Reloaded Winner

ಬೆಂಗಳೂರು: ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ʼರಾಜಾ ರಾಣಿ ಸೀಸನ್‌ 3ʼ ಶೋಗೆ ತೆರೆ ಬಿದ್ದಿದೆ (Raja Rani Reloaded Winner). ಶನಿವಾರ (ಸೆಪ್ಟೆಂಬರ್‌ 28) ಕಾರ್ಯಕ್ರಮಕ್ಕೆ ಅದ್ಧೂರಿಯಾಗಿ ತೆರೆ ಎಳೆಯಲಾಗಿದೆ. ಗ್ರ್ಯಾಂಡ್‌ ಫಿನಾಲೆಗೆ ಕಾಲಿಟ್ಟ 5 ಜೋಡಿಗಳ ಪೈಕಿ ಸಂಜಯ್‌ ಹಾಗೂ ಮೇಘಾ ಜೋಡಿ ಚಾಂಪಿಯನ್‌ ಪಟ್ಟ ಅಲಂಕರಿಸಿದೆ.

ಸುಮಾರು 15 ವಾರಗಳ ಕಾಲ ನಡೆದ ಕಾರ್ಯಕ್ರಮದಲ್ಲಿ ವಿವಿಧ ಸವಾಲು ಎದುರಿಸಿದ ಸಂಜಯ್‌ ಮತ್ತು ಮೇಘಾ ವಿನ್ನರ್‌ ಆಗಿ ಹೊರ ಹೊಮ್ಮಿದರು. ವಿಜೇತರಿಗೆ 10 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಕಿರೀಟ ಲಭಿಸಿದೆ. ಲೋಕೇಶ್‌ ಪ್ರೊಡಕ್ಷನ್‌ ಬ್ಯಾನರ್‌ ಅಡಿಯಲ್ಲಿ ಪ್ರಸಾರವಾದ ʼರಾಜಾ ರಾಣಿʼ ರಿಯಾಲಿಟಿ ಶೋದಲ್ಲಿ ಸೃಜನ್‌ ಲೋಕೇಶ್‌, ತಾರಾ ಅನುರಾಧಾ ಮತ್ತು ಅದಿತಿ ಪ್ರಭುದೇವ ಜಡ್ಜ್‌ ಆಗಿದ್ದರು. ಅನುಪಮಾ ಗೌಡ ಈ ಕಾರ್ಯಕ್ರಮವನ್ನು ಹೋಸ್ಟ್‌ ಮಾಡಿದ್ದಾರೆ. ಶನಿವಾರದ ಫೈನಲ್‌ಗೆ ಅನು ಪ್ರಭಾಕರ್‌ ವಿಶೇಷ ಅತಿಥಿಯಾಗಿ ಆಗಮಿಸಿದ್ದರು. ದಂಪತಿಗಳಿಗಾಗಿ ಆಯೋಜಿಸುವ ಈ ಶೋದ ಮೊದಲ ಸೀಸನ್‌ 2021ರಲ್ಲಿ ಪ್ರಸಾರವಾಗಿತ್ತು.

ಮೋಡಿ ಮಾಡಿದ ಸಂಜಯ್‌ ಹಾಗೂ ಮೇಘಾ ಜೋಡಿ

ಸಂಜಯ್‌ ಹಾಗೂ ಮೇಘಾ ಮೊದಲಿನಿಂದಲೂ ವೀಕ್ಷಕರ ನೆಚ್ಚಿನ ಜೋಡಿ ಎನಿಸಿಕೊಂಡಿತ್ತು. ಮೇಘಾ ʼಇಷ್ಟ ದೇವತೆʼ, ʼನಾಗಿಣಿ 2ʼ, ʼಜೀವ ಹೂವಾಗಿದೆʼ ಸೇರಿದಂತೆ ಹಲವು ಸೀರಿಯಲ್‌ಗಳಲ್ಲಿ ನಟಿಸಿದ್ದಾರೆ. ಸಂಜಯ್‌ ʼಮಹಾಕಾಳಿʼ, ʼವಾರಸ್ದಾರʼ, ʼಕ್ಷಮಾʼ, ʼಜೀವ ಹೂವಾಗಿದೆʼ ಮುಂತಾದ ಧಾರಾವಾಹಿಗಳ ಮೂಲಕ ಗಮನ ಸೆಳೆದಿದ್ದಾರೆ. ಇದೀಗ ಫಿನಾಲೆಗೆ ಈ ಜೋಡಿ ಪ್ರಶಸ್ತಿ ಗೆದ್ದುಕೊಂಡಿದೆ.

ಉಳಿದ ವಿಜೇತರು

ಮೊದಲ ರನ್ನರ್‌ ಅಪ್‌ ಆಗಿ ʼಅರಮನೆ ಗಿಳಿʼ ಖ್ಯಾತಿಯ ನಟ ಅರ್ಜುನ್ ಯೋಗಿ ಹಾಗೂ ಪತ್ನಿ ಸಾರಿಕಾ ಹೊರ ಹೊಮ್ಮಿದ್ದಾರೆ. ಅರ್ಜುನ್ ಯೋಗಿ ಕನ್ನಡ ಕಿರುತೆರೆ ಮಾತ್ರವಲ್ಲದೆ, ʼಚೇಜ್ʼ, ʼಲಾಂಗ್‌ಡ್ರೈವ್ʼ, ʼಅನಾವರಣʼ, ʼಅತೃಪ್ತʼ ಸೇರಿದಂತೆ ಕೆಲ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಇವರಿಗೆ 3 ಲಕ್ಷ ರೂ. ಕ್ಯಾಶ್ ಪ್ರೈಝ್ ಸಿಕ್ಕಿದೆ. ಕಲರ್ಸ್‌ ಕನ್ನಡ ವಾಹಿನಿಯ ʼಮಜಾ ಭಾರತʼ ಹಾಗೂ ʼಗಿಚ್ಚಿ ಗಿಲಿಗಿಲಿʼ ಮುಂತಾದ ರಿಯಾಲಿಟಿ ಶೋಗಳ ಮೂಲಕ ಜನಪ್ರಿಯತೆ ಗಳಿಸಿದ ಪ್ರಿಯಾಂಕಾ ಕಾಮತ್ ಹಾಗೂ ಅವರ ಪತಿ ಅಮಿತ್ ಮೂರನೇ ಸ್ಥಾನ ಪಡೆದಿದ್ದಾರೆ. ʼಸಿಲ್ಲಿ ಲಲ್ಲಿʼ, ʼಪಾರ್ವತಿ ಪರಮೇಶ್ವರʼ ಧಾರಾವಾಹಿಗಳಲ್ಲಿ ಹಾಸ್ಯ ಪಾತ್ರಗಳ ಮೂಲಕವೇ ಗಮನ ಸೆಳೆದ ನಟ ಲೋಕೇಶ್ ಬನಹಟ್ಟಿ ಹಾಗೂ ನಟಿ ರಚನಾ ದಶರಥ್ ನಾಲ್ಕನೇ ಸ್ಥಾನ ಪಡೆದರೆ, ಕಿರುತೆರೆ ನಟಿ ಹರ್ಷಿತಾ ಹಾಗೂ ವಿನಯ್ ಜೋಡಿ ಐದನೇ ಸ್ಥಾನ ಪಡೆದಿದೆ.

ಹಿಂದಿನ ವಿನ್ನರ್ಸ್‌

2021ರಲ್ಲಿ ಆರಂಭವಾಗಿದ್ದ ಈ ಶೋನ ಮೊದಲ ಆವೃತ್ತಿಯಲ್ಲಿ ನೇಹಾಗೌಡ ಹಾಗೂ ಚಂದನ್‌ ವಿನ್ನರ್‌ ಆಗಿದ್ದರು. ಇಶಿತಾ ವರ್ಷಾ, ಮುರುಗಾನಂದ ಮೊದಲ ರನ್ನರ್‌ ಅಪ್‌ ಆಗಿದ್ದರು. ಎರಡನೇ ಸೀಸನ್‌ನಲ್ಲಿ ಕಾವ್ಯಾ ಮಹಾದೇವ್‌ ಹಾಗೂ ಕುಮಾರ್‌ ಗೆದ್ದಿದ್ದರು. ಸುಂದರ್‌ ರಾಜ್‌ ಮತ್ತು ವೀಣಾ ಸುಂದರ್ ಮೊದಲ ರನ್ನರ್‌ ಅಪ್‌ ಆಗಿದ್ದರು.

ಈ ಸುದ್ದಿಯನ್ನೂ ಓದಿ: Bigg Boss Kannada 11 : ಬಿಗ್‌ಬಾಸ್‌ಗೆ ಆಯ್ಕೆಯಾದ ಮೊದಲ ನಾಲ್ವರು ಸ್ಪರ್ಧಿಗಳು ಯಾರೆಲ್ಲ? ಇಲ್ಲಿದೆ ಅವರ ವಿವರ