Thursday, 12th December 2024

Rajinikanth Birthday Special: ಬಸ್‌ ಕಂಡಕ್ಟರ್‌ನಿಂದ ಸೂಪರ್‌ ಸ್ಟಾರ್‌ವರೆಗೆ; ರಜನಿಕಾಂತ್‌ ಸಿನಿ ಜರ್ನಿ ಇಲ್ಲಿದೆ

Rajinikanth Birthday Special

ಚೆನ್ನೈ: ಸ್ಟೈಲ್‌ ಕಿಂಗ್‌ ರಜನಿಕಾಂತ್‌ (Rajinikanth) ಭಾರತೀಯ ಸಿನಿಮಾ ರಂಗದ ‌ಅತಿ ದೊಡ್ಡ ಸೂಪರ್‌ ಸ್ಟಾರ್. ರಜನೀಕಾಂತ್ ಅವರಿಗೆ ಇಂದು (ಡಿ. 12) 75ನೇ ಜನ್ಮ ದಿನದ ಸಂಭ್ರಮ. ಹಲವಾರು ಸೂಪರ್‌ ಹಿಟ್‌ ಚಿತ್ರಗಳನ್ನು ನೀಡಿರುವ ರಜನಿ, ವಿಶ್ವಾದ್ಯಂತ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ರಜನಿಕಾಂತ್‌ ಸಿನಿಮಾ ರಿಲೀಸ್‌ ಆಯಿತೆಂದರೆ ಜನ ಪ್ರವಾಹೋಪಾದಿಯಲ್ಲಿ ಥಿಯೇಟರ್‌ಗಳಿಗೆ ನುಗ್ಗುತ್ತಾರೆ (Rajinikanth Birthday Special).

ರಜನಿಕಾಂತ್‌ ನಟನೆ ಮಾತ್ರವಲ್ಲ ಚಿತ್ರ ಕತೆಗಳನ್ನೂ ಬರೆದಿದ್ದಾರೆ. ಚಿತ್ರ ನಿರ್ಮಾಣವನ್ನೂ ಮಾಡಿದ್ದಾರೆ. ಇವರ ಅಭಿನಯದ ಇತ್ತೀಚಿನ ಸೂಪರ್‌ ಹಿಟ್‌ ಸಿನಿಮಾ ʼಜೈಲರ್‌ʼ. ಇದು ವಿಶ್ವಾದ್ಯಂತ ಬಾಕ್ಸ್‌ ಆಫೀಸ್‌ನಲ್ಲಿ ಹಿಟ್‌ ಆಗಿ 500 ಕೋಟಿ ರೂ.ಗೂ ಹೆಚ್ಚು ಸಂಪಾದನೆ ಮಾಡಿದೆ.

ರಜನಿಕಾಂತ್‌ ಅವರನ್ನು ಅಭಿಮಾನಿಗಳು ಪ್ರೀತಿಯಿಂದ ತಲೈವಾ, ತಲೈವಾರ್‌ ಎಂದು ಕರೆಯುತ್ತಾರೆ. ಅವರ ಆ್ಯಕ್ಷನ್‌ ಸೀಕ್ವೆನ್ಸ್‌ಗಳು ಮತ್ತು ವಿಭಿನ್ನ ಮ್ಯಾನರಿಸಂ ವೀಕ್ಷಕರನ್ನು ಹುಚ್ಚೆಬ್ಬಿಸುತ್ತದೆ.‌ ತಮಿಳು, ಹಿಂದಿ, ತೆಲುಗು, ಕನ್ನಡ, ಬೆಂಗಾಳಿ ಮತ್ತು ಮಲೆಯಾಳಂ ಭಾಷೆಗಳಲ್ಲಿ 170 ಸಿನಿಮಾಗಳಲ್ಲಿ ರಜನಿಕಾಂತ್‌ ಅಭಿನಯಿಸಿದ್ದಾರೆ. ಪದ್ಮ ಭೂಷಣ, ಪದ್ಮ ವಿಭೂಷಣ ಪ್ರಶಸ್ತಿಗೂ ಇವರು ಪಾತ್ರರಾಗಿದ್ದಾರೆ. ದೇಶದ ಸಿನಿಮಾ ರಂಗದ ಅತ್ಯುನ್ನತ ಪ್ರಶಸ್ತಿಯಾದ ದಾದಾ ಸಾಹೇಬ್‌ ಫಾಲ್ಕೆ ಪುರಸ್ಕೃತರಿವರು.

ಬನ್ನಿ ತಲೈವಾ ಬಗ್ಗೆ ಅಪರೂಪದ ಸಂಗತಿಗಳನ್ನು ತಿಳಿಯೋಣ: ರಜನಿಕಾಂತ್‌ ಅವರ ಮೂಲ ಹೆಸರು ಶಿವಾಜಿ ರಾವ್‌ ಗಾಯಕ್ವಾಡ್. ಇವರ ಮಾತೃಭಾಷೆ ಮರಾಠಿ. ಹುಟ್ಟಿದ್ದು ಮಹಾರಾಷ್ಟ್ರದಲ್ಲಿ1950ರ ಡಿಸೆಂಬರ್‌ 12ರಂದು. ತಂದೆ ರಾಮೋಜಿ ರಾವ್‌ ಗಾಯಕ್ವಾಡ್ ಪೊಲೀಸ್‌ ಕಾನ್‌ಸ್ಟೆಬಲ್ ಆಗಿದ್ದು, ಕರ್ನಾಟಕ ರಾಜ್ಯ ಪೊಲೀಸ್‌ ಇಲಾಖೆಯಲ್ಲಿ ಕೆಲಸ ಸಿಕ್ಕಿದ್ದರಿಂದ ಬೆಂಗಳೂರಿಗೆ ಬಂದು ನೆಲೆಸಿದ್ದರು. ತಾಯಿಯ ಹೆಸರು ಜೀಜಾ ಬಾಯಿ.‌ ತಂದೆ 1956ರಲ್ಲಿ ನಿವೃತ್ತರಾದ ಬಳಿಕ ಬೆಂಗಳೂರಿನ ಹನುಮಂತನಗರ ಬಳಿ ಮನೆ ಕಟ್ಟಿದರು. ಗವಿಪುರಂನ ಸರ್ಕಾರಿ ಶಾಲೆಯಲ್ಲಿ ರಜನಿಕಾಂತ್‌ ಪ್ರಾಥಮಿಕ ಶಿಕ್ಷಣ ಪಡೆದರು.

ರಜನಿಕಾಂತ್‌ ಅವರ ಬಾಲ್ಯದ ವಿದ್ಯಾಭ್ಯಾಸ ಬೆಂಗಳೂರಿನಲ್ಲೇ ಆಯಿತು. ವಿಶೇಷವೆಂದರೆ ಇವರ ಮಾತೃಭಾಷೆ ಮರಾಠಿಯಾದರೂ ಇವರಿನ್ನೂ ಮರಾಠಿ ಚಿತ್ರದಲ್ಲಿ ಅಭಿನಯಿಸಿಲ್ಲ. ರಜನಿಕಾಂತ್‌ ಅವರು ಚೆನ್ನೈನಲ್ಲಿ ಫಿಲ್ಮ್‌ ಇನ್‌ಸ್ಟಿಟ್ಯೂಟ್‌ಗೆ ಸೇರುವುದಕ್ಕೆ ಮೊದಲು ಬೆಂಗಳೂರಿನಲ್ಲಿ ಬಸ್‌ ಕಂಡಕ್ಟರ್‌ ಆಗಿದ್ದರು. ಶಿವಾಜಿನಗರ-ಚಾಮರಾಜಪೇಟೆ ಮಾರ್ಗದಲ್ಲಿ ಬಸ್‌ ನಂಬರ್‌ 134ರಲ್ಲಿ ಕಂಡಕ್ಟರ್‌ ಆಗಿ ಸೇವೆ ಸಲ್ಲಿಸುತ್ತಿದ್ದರು. ಯುವಕ ರಜನಿಕಾಂತ್‌ ತುಂಬ ಸ್ಟೈಲಿಶ್‌ ಆಗಿ ಉಡುಪು ಧರಿಸಿ ಮಿಂಚಿನ ವೇಗದಲ್ಲಿ ಉತ್ಸಾಹದಿಂದ ಪ್ರಯಾಣಿಕರಿಗೆ ಟಿಕೆಟ್‌ ವಿತರಿಸುತ್ತಿದ್ದರು.

ನಾಟಕಗಳಲ್ಲಿ ಅಭಿನಯಿಸುತ್ತಿದ್ದ ರಜನಿಕಾಂತ್‌ ಅವರಿಗೆ ಸ್ನೇಹಿತ ರಾಜ್‌ ಬಹಾದ್ದೂರ್‌ ಅವರು ಮದ್ರಾಸ್‌ ಫಿಲ್ಮ್‌ ಇನ್‌ಸ್ಟಿಟ್ಯೂಟ್‌ ಸೇರಿ ಅಭಿನಯದ ಕೋರ್ಸ್‌ ಕಲಿಯಲು ಪ್ರೋತ್ಸಾಹಿಸಿದ್ದರು. ಅಲ್ಲಿ ತಮಿಳು ಚಿತ್ರಗಳ ನಿರ್ದೇಶಕ ಕೆ. ಬಾಲಚಂದರ್‌ ಕಣ್ಣಿಗೆ ರಜನೀಕಾಂತ್‌ ಬಿದ್ದರು. ತಮಿಳು ಕಲಿಯಲು ಅವರೇ ಸಲಹೆ ನೀಡಿದರು.

ಅದಾಗಲೇ ತಮಿಳಿನಲ್ಲಿ ಶಿವಾಜಿ ಗಣೇಶನ್‌ ಖ್ಯಾತರಾಗಿದ್ದರಿಂದ ಕೆ.ಬಾಲಚಂದರ್‌ ಅವರು ಶಿವಾಜಿ ರಾವ್‌ ಗಾಯಕ್ವಾಡ್‌ಗೆ ರಜನೀಕಾಂತ್‌ ಎಂದು ಹೆಸರಿಟ್ಟರು. ʼಅಪೂರ್ವ ರಾಗಂಗಳ್‌ʼ ರಜನೀಕಾಂತ್‌ ಅಭಿನಯಿಸಿದ ಮೊದಲ ತಮಿಳು ಸಿನಿಮಾ. ಬಾಲಿವುಡ್‌ನ 11 ಸಿನಿಮಾಗಳಲ್ಲಿ ರಜನಿಕಾಂತ್‌ ಹೀರೊ ಆಗಿ ಅಭಿನಯಿಸಿದ್ದಾರೆ. ಅವುಗಳೆಲ್ಲ ಸೂಪರ್‌ ಹಿಟ್‌ ಸಿನಿಮಾಗಳಾಗಿವೆ.

ರಜನಿಕಾಂತ್‌ ಅವರು ಸಿನಿಮಾ ನಟನೆ ಶುರು ಮಾಡಿದ ನಾಲ್ಕೇ ವರ್ಷಗಳಲ್ಲಿ 50 ಚಿತ್ರಗಳನ್ನು ಪೂರೈಸಿದ್ದರು. ಇವರ ಸ್ಪೀಡ್‌ ಹೀಗಿತ್ತು. ಸಾಹಸ ದೃಶ್ಯಗಳಲ್ಲೂ ರಜನಿಕಾಂತ್‌ ಡ್ಯೂಪ್‌ ಬಳಸದೇ ತಾವೇ ಭಾಗವಹಿಸುತ್ತಿದ್ದರು. ʼಮುರಾತ್ತ್‌ ಕಾಲಯಿʼ ಎಂಬ ತಮಿಳು ಸಿನಿಮಾದಲ್ಲಿ ಚಲಿಸುತ್ತಿರುವ ರೈಲಿನಲ್ಲಿ ಹೊಡೆದಾಟದ ಸಾಹಸ ದೃಶ್ಯದಲ್ಲಿ ರಜನಿಕಾಂತ್‌ ಸಾಹಸ ಅಭಿನಯ ಆ ಕಾಲದಲ್ಲಿ ಭಾರಿ ಸದ್ದು ಮಾಡಿತ್ತು.

ಸಾಮಾಜಿಕ ಜಾಲತಾಣದಲ್ಲೂ ರಜನಿಕಾಂತ್‌ ಪಾಪ್ಯುಲರ್‌. 2014ರಲ್ಲಿ ಟ್ವಿಟರ್‌ ಖಾತೆ ತೆರೆದಾಗ ಮೊದಲ ದಿನವೇ ಒಂದೂವರೆ ಲಕ್ಷ ಹಿಂಬಾಲಕರನ್ನು ಗಳಿಸಿ ಬೆರಗುಗೊಳಿಸಿದ್ದರು. 75ರ ಈ ವಯಸ್ಸಿನಲ್ಲೂ ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಪ್ರಮುಖ ನಟರಲ್ಲಿ ರಜನಿಕಾಂತ್‌ ಒಬ್ಬರು. ವರದಿಗಳ ಪ್ರಕಾರ ʼಜೈಲರ್‌ʼ ಚಿತ್ರಕ್ಕಾಗಿ ಇವರು ಪಡೆದ ಸಂಭಾವನೆ 125 ಕೋಟಿ ರೂಪಾಯಿ!

ಭಾರತ ಮಾತ್ರವಲ್ಲ ಜಪಾನ್‌ ಮತ್ತು ಚೀನಾದಲ್ಲಿ ಇವರು ಫೇಮಸ್‌. ಇವರ ʼಮುತ್ತುʼ ಚಿತ್ರ ಜಪಾನ್‌ನಲ್ಲಿ ಸೂಪರ್‌ ಹಿಟ್‌ ಆಗಿತ್ತು. ʼಶಿವಾಜಿʼ ಚಿತ್ರ ಜಪಾನ್‌ ಮತ್ತು ಚೀನಾದಲ್ಲಿ ಭಾರೀ ಸಂಪಾದನೆ ಮಾಡಿತ್ತು. ಇಷ್ಟೆಲ್ಲ ಖ್ಯಾತಿಯ ನಡುವೆಯೂ ರಜನಿಕಾಂತ್‌ ಅವರದು ಅತ್ಯಂತ ಸರಳ ವ್ಯಕ್ತಿತ್ವ. ಜನ ಸಾಮಾನ್ಯರೊಂದಿಗೆ ಪ್ರೀತಿಯಿಂದ ಬೆರೆಯುತ್ತಾರೆ. ಇವರು ಕೆಲವೊಮ್ಮೆ ಇದ್ದಕ್ಕಿದ್ದಂತೆ ಸರಳ ಉಡುಗೆ ಧರಿಸಿ ತೀರ್ಥ ಕ್ಷೇತ್ರಗಳಿಗೆ ಹೊರಟು ಬಿಡುತ್ತಾರೆ. ಜನ ಗುರುತೇ ಹಿಡಿಯದಷ್ಟು ಸರಳವಾಗಿ ಸನ್ಯಾಸಿಯಂತೆ ಇದ್ದು ಮನಶಾಂತಿ ಪಡೆದು ವಾಪಸಾಗುತ್ತಾರೆ.

ಕಿಡ್ನಿ ಡಯಾಲಿಸಿಸ್‌ ವಿಫಲವಾದಾಗ ತೀವ್ರ ಅನಾರೋಗ್ಯಕ್ಕೀಡಾಗಿದ್ದ ರಜನೀಕಾಂತ್‌ ಅವರು ಸಿಂಗಾಪುರಕ್ಕೆ ತೆರಳಿ ವಿಶೇಷ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು. ಅಂದ ಹಾಗೆ ರಜನಿಕಾಂತ್‌ ಪಕ್ಕಾ ಫ್ಯಾಮಿಲಿ ಮ್ಯಾನ್‌. ಕುಟುಂಬ ಜೀವಿ. ಇವರ ಪತ್ನಿ ಲತಾ ರಂಗಾಚಾರಿ. ಮಕ್ಕಳು ಐಶ್ವರ್ಯ ಮತ್ತು ಸೌಂದರ್ಯ. ಇವರೂ ಕೂಡ ಸಿನಿಮಾದೊಂದಿಗೆ ನಂಟು ಹೊಂದಿದ್ದಾರೆ.

ರಜನಿಕಾಂತ್‌ ಅವರೀಗ ʼಕೂಲಿʼ ಚಿತ್ರದ ಚಿತ್ರೀಕರಣದಲ್ಲಿ ತೊಡಗಿದ್ದಾರೆ. ʼಜೈಲರ್‌ 2ʼಗೆ ಭೂಮಿಕೆ ಸಿದ್ಧವಾಗುತ್ತಿದೆ. ಈ ನಡುವೆ ಮಣಿರತ್ನಂ ಮತ್ತು ರಜನಿಕಾಂತ್‌ ಸುಮಾರು 34 ವರ್ಷಗಳ ಬಳಿಕ ಮತ್ತೆ ಒಂದಾಗಿ ವಿಭಿನ್ನ ಚಿತ್ರ ನಿರ್ಮಿಸುವ ಸಾಧ್ಯತೆಯೂ ಇದೆ.

ರಜನಿ ಸಾರ್‌ ವಿಶ್‌ ಯೂ ಹ್ಯಾಪಿ ಬರ್ತ್‌ಡೇ…

ಈ ಸುದ್ದಿಯನ್ನೂ ಓದಿ: Vettaiyan Box Office: ಬಾಕ್ಸ್‌ ಆಫೀಸ್‌ನಲ್ಲಿ ಮತ್ತೊಮ್ಮೆ ರಜನಿಕಾಂತ್‌ ಮ್ಯಾಜಿಕ್‌; 4 ದಿನಗಳಲ್ಲಿ 200 ಕೋಟಿ ರೂ. ಕ್ಲಬ್‌ ಸೇರಿದ ʼವೆಟ್ಟೈಯಾನ್‌ʼ