Saturday, 5th October 2024

Rajinikanth: ʼವೆಟ್ಟೈಯಾನ್ʼ ಚಿತ್ರಕ್ಕಾಗಿ ದಾಖಲೆಯ ಸಂಭಾವನೆ ಪಡೆದ ರಜನಿಕಾಂತ್‌; ಜೇಬಿಗಿಳಿಸಿದ್ದು ಎಷ್ಟು ಕೋಟಿ ರೂ.?

Rajinikanth

ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್ (Rajinikanth) ನಟನೆಯ ಬಹುನಿರೀಕ್ಷಿತ ಸಿನಿಮಾ ʼವೆಟ್ಟೈಯಾನ್ʼ (Vettaiyan) ಬಿಡುಗಡೆ ಸಜ್ಜಾಗಿದೆ. ಅಕ್ಟೋಬರ್ 10ಕ್ಕೆ ಪಂಚ ಭಾಷೆಯಲ್ಲಿ ಚಿತ್ರ ತೆರೆಗೆ ಬರಲಿದೆ. ಟಿ.ಜಿ.ಜ್ಞಾನವೇಲ್‌ (TG Gnanavel) ನಿರ್ದೇಶನದ ಈ ಸಿನಿಮಾ ಈಗಾಗಲೇ ಬೆಟ್ಟದಷ್ಟು ನಿರೀಕ್ಷೆ ಮೂಡಿಸಿದೆ. ಅದರಲ್ಲಿಯೂ ರಜನಿಕಾಂತ್‌ ಮತ್ತು ಬಾಲಿವುಡ್‌ ಸೂಪರ್‌ ಸ್ಟಾರ್‌ ಅಮಿತಾಭ್‌ ಬಚ್ಚನ್‌ ಸುಮಾರು 3 ದಶಕಗಳ ಬಳಿಕ ತೆರೆ ಮೇಲೆ ಒಂದಾಗುತ್ತಿರುವುದು ಒಂದಡೆಯಾದರೆ ಬಹು ತಾರಾಗಣ ಮತ್ತೊಂದೆಡೆ ಅಭಿಮಾನಿಗಳು ತುದಿಗಾಲಿನಲ್ಲಿ ಕಾಯುವಂತೆ ಮಾಡಿದೆ. ಜತೆಗೆ ಇತ್ತೀಚೆಗೆ ಬಿಡುಗಡೆಯಾದ ಟ್ರೈಲರ್‌ ನಿರೀಕ್ಷೆ, ಕುತೂಹಲವನ್ನು ಇನ್ನಷ್ಟು ಎತ್ತರಕ್ಕೆ ಏರಿಸಿದೆ. ಇದೀಗ ರಜನಿಕಾಂತ್‌ ಸೇರಿದಂತೆ ಚಿತ್ರದಲ್ಲಿ ನಟಿಸಿರುವ ಕಲಾವಿದರ ಸಂಭಾವನೆ ಬಹಿರಂಗಗೊಂಡಿದೆ. ಈ ಸಿನಿಮಾಕ್ಕೆ ತಲೈವಾ ಜೇಬಿಗಿಳಿಸಿದ್ದು ಎಷ್ಟು ಕೋಟಿ ರೂ.? ಇಲ್ಲಿದೆ ಉತ್ತರ.

2021ರಲ್ಲಿ ತೆರೆಕಂಡ ಸೂರ್ಯ ಅಭಿನಯದ ʼಜೈ ಭೀಮ್‌ʼ ಚಿತ್ರ ನಿರ್ದೇಶಿಸಿದ್ದ ಟಿ.ಜಿ.ಜ್ಞಾನವೇಲ್‌ ರಜನಿಕಾಂತ್‌ ಅಭಿನಯದ ʼವೆಟ್ಟೈಯಾನ್ʼ ಕೈಗೆತ್ತಿಕೊಂಡಾಗಲೇ ಕುತೂಹಲ ಮೂಡಿತ್ತು. ʼಜೈ ಭೀಮ್‌ʼ ಸಿನಿಮಾದಲ್ಲಿ ಜಾತಿ ವ್ಯವಸ್ಥೆಯಂತಹ ಸೂಕ್ಷ್ಮ ವಿಚಾರವನ್ನು ಪ್ರಸ್ತುಪಡಿಸಿದ್ದ ಅವರು ಈ ಚಿತ್ರವನ್ನು ಯಾವ ರೀತಿ ಕಟ್ಟಿಕೊಡಲಿದ್ದಾರೆ ಎನ್ನುವ ಅಂಶವೇ ಕುತೂಹಲ ಮೂಡಿಸಿತ್ತು. ಖ್ಯಾತ ನಿರ್ಮಾಣ ಸಂಸ್ಥೆ ಲೈಕಾ ಪ್ರೊಡಕ್ಷನ್ ಅದ್ಧೂರಿಯಾಗಿ ಚಿತ್ರವನ್ನು ತೆರೆ ಮೇಲೆ ತರುತ್ತಿದೆ.

ಯಾರಿಗೆಷ್ಟು ಸಂಭಾವನೆ?

ಈ ಚಿತ್ರಕ್ಕಾಗಿ ರಜನಿಕಾಂತ್‌ ಬರೋಬ್ಬರಿ 100-125 ಕೋಟಿ ರೂ. ಪಡೆದಿದ್ದಾರೆ ಎನ್ನಲಾಗಿದೆ. ಇನ್ನು ಸತ್ಯದೇವ್ ಪಾತ್ರದಲ್ಲಿ ಕಾಣಿಸಿಕೊಂಡೊರುವ ಅಮಿತಾಭ್‌ ಬಚ್ಚನ್‌ 7 ಕೋಟಿ ರೂ., ಫಹಾದ್‌ ಫಾಸಿಲ್‌ 2-4 ಕೋಟಿ ರೂ., ರಾಣಾ ದಗ್ಗುಬಾಟಿ 5 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ. ಚಿತ್ರದ ನಾಯಕಿ, ಮೊದಲ ಬಾರಿಗೆ ರಜನಿಕಾಂತ್‌ ಜತೆ ತೆರೆ ಹಂಚಿಕೊಳ್ಳುತ್ತಿರುವ ಮಲಯಾಳಂ ಲೇಡಿ ಸೂಪರ್‌ ಸ್ಟಾರ್‌ ಮಂಜು ವಾರಿಯರ್‌ 85 ಲಕ್ಷ ರೂ. ಪಡೆದುಕೊಂಡಿದ್ದಾರೆ. ಮತ್ತೊಬ್ಬ ನಾಯಕಿ ರಿತಿಕಾ ಸಿಂಗ್‌ ಅವರಿಗೆ 25 ಲಕ್ಷ ರೂ. ಸಂಭಾವನೆ ನೀಡಲಾಗಿದೆ ಎಂದು ವರದಿಯೊಂದು ತಿಳಿಸಿದೆ. ಚಿತ್ರದಲ್ಲಿ ದುಶಾರಾ ವಿಜಯನ್‌, ರಾವ್‌ ರಮೇಶ್‌, ರೋಹಿಣಿ ಮತ್ತಿತರರು ಮುಖ್ಯ ಪಾತ್ರಗಳಲ್ಲಿ ನಟಿಸಿದ್ದು, ಅವರಿಗೂ ಉತ್ತಮ ಸಂಭಾವನೆ ಲಭಿಸಿದೆ ಎನ್ನಲಾಗಿದೆ.

ಗಮನ ಸೆಳೆದ ಟ್ರೈಲರ್‌

ಇತ್ತೀಚೆಗೆ ರಿಲೀಸ್‌ ಆಗಿರುವ ಟ್ರೈಲರ್‌ ಗಮನ ಸೆಳೆದಿದ್ದು, ಖಾಕಿ ತೊಟ್ಟು ತಲೈವಾ ಅಬ್ಬರಿಸಿದ್ದಾರೆ. ಪೊಲೀಸ್ ಎನ್ ಕೌಂಟರ್ ತಪ್ಪಾ? ಸರಿನಾ? ಎಂಬ ಪ್ರಶ್ನೆಯ ಸುತ್ತ ಟ್ರೈಲರ್‌ ಸಾಗುತ್ತದೆ. ಟ್ರೈಲರ್‌ ನೋಡಿದವರು ‘ವೆಟ್ಟೈಯಾನ್’ ಚಿತ್ರದಲ್ಲಿ ಇಬ್ಬರು ಮಹಾನ್‌ ನಟರಾದ ರಜನಿಕಾಂತ್‌ ಮತ್ತು ಅಮಿತಾಭ್‌ ಬಚ್ಚನ್‌ ಪಾತ್ರದ ನಡುವಿನ ಸಂಘರ್ಷ ಇರಲಿದೆ ಎಂದು ಊಹಿಸಿದ್ದಾರೆ. ರಿತಿಕಾ ಸಿಂಗ್ ರೂಪ ಎಂಬ ಪೊಲೀಸ್ ಪಾತ್ರದಲ್ಲಿ, ದುಶಾರಾ ವಿಜಯನ್ ಶರಣ್ಯ ಎಂಬ ಶಿಕ್ಷಕಿಯಾಗಿ, ಮಂಜು ವಾರಿಯರ್ ತಾರಾ ಪಾತ್ರದಲ್ಲಿ, ರಾಣಾ ದಗ್ಗುಬಾಟಿ ನಟರಾಜ್ ಪಾತ್ರದಲ್ಲಿ ಮತ್ತು ಫಹಾದ್ ಫಾಸಿಲ್ ಪ್ಯಾಟ್ರಿಕ್ ಪಾತ್ರದಲ್ಲಿ ನಟಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: One and A Half Movie: ‘ಒನ್ ಆ್ಯಂಡ್ ಆ ಹಾಫ್’ ಚಿತ್ರದ ಮೊದಲ ಹಾಡು ರಿಲೀಸ್, ‘ಹೇ ನಿಧಿ’ ಎಂದು ಹಾಡಿದ ಶ್ರೇಯಶ್ ಸೂರಿ-ಮಾನ್ವಿತಾ

ಕೆಲವು ದಿನಗಳ ಹಿಂದೆ ರಿಲೀಸ್‌ ಆದ ʼವೆಟ್ಟೈಯಾನ್ʼನ ʼಮನಸಿಲಾಯೋʼ ಹಾಡು ಸೂಪರ್‌ ಹಿಟ್‌ ಆಗಿದೆ. ಈ ಸಿನಿಮಾಕ್ಕೆ ರಾಕ್ ಸ್ಟಾರ್ ಖ್ಯಾತಿಯ ಅನಿರುದ್ಧ್ ರವಿಚಂದರ್ ಸಂಗೀತ, ಎಸ್.ಆರ್. ಕಥಿರ್ ಛಾಯಾಗ್ರಹಣ ಮತ್ತು ಫಿಲೋಮಿನ್ ರಾಜ್ ಸಂಕಲನವಿದೆ. ತಿರುವನಂತಪುರಂ, ತಿರುನೆಲ್ವೇಲಿ, ಚೆನ್ನೈ, ಮುಂಬೈ, ಆಂಧ್ರಪ್ರದೇಶ ಮತ್ತು ಹೈದರಾಬಾದ್‌ನಲ್ಲಿ ಚಿತ್ರೀಕರಣ‌ ನಡೆಸಲಾಗಿದೆ.