Thursday, 19th September 2024

Rajinikanth: ‘ಮನಸಿಲಾಯೋ’; ‘ಕಾವಾಲಯ್ಯ’ ಬಳಿಕ ಮತ್ತೊಂದು ಕ್ಯಾಚಿ ಸಾಂಗ್‌ನೊಂದಿಗೆ ಮೋಡಿ ಮಾಡಿದ ರಜನಿಕಾಂತ್‌

Rajinikanth

ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್ (Rajinikanth) ನಟನೆಯ ಬಹುನಿರೀಕ್ಷಿತ ಸಿನಿಮಾ ʼವೆಟ್ಟೈಯಾನ್ʼ (Vettaiyan) ಬಿಡುಗಡೆ ಸಜ್ಜಾಗಿದೆ. ಅಕ್ಟೋಬರ್ 10ಕ್ಕೆ ಪಂಚ ಭಾಷೆಯಲ್ಲಿ ಚಿತ್ರ ತೆರೆಗೆ ಬರಲಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿರುವ ʼವೆಟ್ಟೈಯಾನ್ʼ ಬಳಗ ಮೊದಲ ಹಾಡನ್ನು ರಿಲೀಸ್ ಮಾಡಿದ್ದು, ಚಿತ್ರಪ್ರೇಮಿಗಳ ಗಮನ ಸೆಳೆದಿದೆ.

‘ವೆಟ್ಟೈಯಾನ್’ ಸಿನಿಮಾದ ʼಮನಸಿಲಾಯೋʼ ಎಂಬ ಹಾಡು ರಿಲೀಸ್‌ ಆಗಿದೆ. ತಮಿಳು ಹಾಗೂ ತೆಲುಗಲ್ಲಿ ಈ ಹಾಡು ಮೂಡಿ ಬಂದಿದೆ. ಕಲರ್ ಫುಲ್ ಸೆಟ್‌ನಲ್ಲಿ ತಲೈವ ಜೊತೆ ಮಲಯಾಳಂ ಲೇಡಿ ಸೂಪರ್‌ ಸ್ಟಾರ್‌ ಮಂಜು ವಾರಿಯರ್ ಭರ್ಜರಿಯಾಗಿ ಕುಣಿದು ಕುಪ್ಪಳಿಸಿದ್ದಾರೆ. ರಾಕ್ ಸ್ಟಾರ್ ಅನಿರುದ್ಧ ರವಿಚಂದರ್ ಹಾಡಿಗೆ ಟ್ಯೂನ್ ಹಾಕಿದ್ದಾರೆ.

ರಜನಿಕಾಂತ್ ಹಾಗೂ ಅನಿರುದ್ಧ ಕಾಂಬೋದಲ್ಲಿ ಬಂದ ಹಾಡುಗಳು ಈಗಾಗಲೇ ಹಿಟ್ ಲೀಸ್ಟ್ ಸೇರಿವೆ. ಈ ಹಿಂದಿನ ʼಪೆಟ್ಟಾʼ, ʼದರ್ಬಾರ್ʼ, ʼಜೈಲರ್ʼ ಬಳಿಕ ಈ ಜೋಡಿ ʼವೆಟ್ಟೈಯಾನ್ʼಗಾಗಿ ಒಂದಾಗಿದೆ. ʼಮನಸಿಲಾಯೋʼ ಹಾಡು ಸಖತ್ ಸೌಂಡ್ ಮಾಡುತ್ತಿದ್ದು, ಟ್ರೆಂಡಿಂಗ್‌ನಲ್ಲಿದೆ.

ಸೂರ್ಯ ನಟಿಸಿದ ‘ಜೈ ಭೀಮ್’ ಸಿನಿಮಾ ನಿರ್ದೇಶಿಸಿದ್ದ ಟಿ.ಜೆ. ಜ್ಞಾನವೇಲ್ ‘ವೆಟ್ಟೈಯಾನ್’ಗೆ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಈ ಚಿತ್ರದ ಮೇಲೆ ನಿರೀಕ್ಷೆ ದುಪ್ಪಟ್ಟಾಗಲು ಮತ್ತೊಂದು ಕಾರಣ ತಲೈವಾ ಹಾಗೂ ಬಿಗ್ ಬಿ ಸಂಗಮ. ಹೌದು, ಭಾರತೀಯ ಚಿತ್ರರಂಗದ ದಿಗ್ಗಜರಾದ ಬಿಗ್ ಬಿ ಅಮಿತಾಭ್‌ ಬಚ್ಚನ್ ಹಾಗೂ ಸೂಪರ್ ಸ್ಟಾರ್ ರಜನಿಕಾಂತ್ ʼವೆಟ್ಟೈಯಾನ್ʼ ಸಿನಿಮಾ ಮೂಲಕ ಮೂರು ದಶಕದ ಬಳಿಕ ಮತ್ತೊಮ್ಮೆ ಒಟ್ಟಿಗೆ ನಟಿಸಿದ್ದಾರೆ. ಭಾರತೀಯ ಚಿತ್ರರಂಗದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಲೈಕಾ ಈ ಅಭೂತಪೂರ್ವ ಸಮಾಗಮಕ್ಕೆ ವೇದಿಕೆ ನಿರ್ಮಿಸಿದೆ.

‘ವೆಟ್ಟೈಯಾನ್’ ಚಿತ್ರದಲ್ಲಿ ರಜನಿಕಾಂತ್. ಅಮಿತಾಭ್ ಬಚ್ಚನ್ ಜೊತೆಯಲ್ಲಿ ರಾಣಾ ದಗ್ಗುಬಾಟಿ, ಫಹಾದ್ ಫಾಸಿಲ್, ಮಂಜು ವಾರಿಯರ್, ರಿತಿಕಾ ಸಿಂಗ್, ವಿಜಯನ್, ಜಿ.ಎಂ. ಸುಂದರ್, ರೋಹಿಣಿ, ಅಭಿರಾಮಿ, ರಾವ್ ರಮೇಶ್, ರಮೇಶ್ ತಿಲಕ್, ರಕ್ಷಣ್ ಸೇರಿದಂತೆ ಇನ್ನೂ ಅನೇಕ ಪ್ರಮುಖ ನಟರು ನಟಿಸಿದ್ದಾರೆ. ಹೀಗಾಗಿಯೇ ಪ್ರೇಕ್ಷಕರ ಗಮನ ಸೆಳೆದಿದೆ.

ʼವೆಟ್ಟೈಯಾನ್ʼ ಸಿನಿಮಾಕ್ಕೆ ಎಸ್.ಆರ್. ಕಥಿರ್ ಛಾಯಾಗ್ರಹಣ ಮತ್ತು ಫಿಲೋಮಿನ್ ರಾಜ್ ಸಂಕಲನವಿದೆ. ತಿರುವನಂತಪುರಂ, ತಿರುನೆಲ್ವೇಲಿ, ಚೆನ್ನೈ, ಮುಂಬೈ, ಆಂಧ್ರಪ್ರದೇಶ ಮತ್ತು ಹೈದರಾಬಾದ್‌ನಲ್ಲಿ ಚಿತ್ರದ ಚಿತ್ರೀಕರಣ‌ ನಡೆಸಲಾಗಿದೆ. ʼಇಂಡಿಯನ್ʼ, ʼಖೈದಿ ನಂಬರ್ 150ʼ, ʼರೋಬೋ 2.0ʼ, ʼದರ್ಬಾರ್ʼ ಮತ್ತು ಇತ್ತೀಚೆಗೆ ತೆರೆಕಂಡ ʼಪೊನ್ನಿಯಿನ್ ಸೆಲ್ವನ್ʼ ಸರಣಿಯಂತಹ ಹಿಟ್ ಸಿನಿಮಾಗಳನ್ನು ನಿರ್ಮಿಸಿರುವ ಲೈಕಾ ಪ್ರೊಡಕ್ಷನ್ ʼವೆಟ್ಟೈಯಾನ್ʼಗೆ ಬಂಡವಾಳ ಹೂಡಿದೆ.

ರಜನಿಕಾಂತ್‌ ನಟಿಸಿದ್ದ ಜೈಲರ್‌ ಸಿನಿಮಾ ಕಳೆದ ವರ್ಷ ಬಿಡುಗಡೆಯಾಗಿ ಸೂಪರ್‌ ಹಿಟ್‌ ಆಗಿತ್ತು. ವಿಶೇಷ ಎಂದರೆ ಈ ಚಿತ್ರದಲ್ಲಿ ಸ್ಯಾಂಡಲ್‌ವುಡ್‌ನ ಶಿವರಾಜ್‌ ಕುಮಾರ್‌ ಮತ್ತು ಮಲಯಾಳಂ ಸೂಪರ್‌ ಸ್ಟಾರ್‌ ಮೋಹನ್‌ಲಾಲ್‌ ಅತಿಥಿ ಪಾತ್ರದಲ್ಲಿ ಮಿಂಚಿದ್ದರು. ಜೊತೆಗೆ ತಮನ್ನಾ, ರಮ್ಯಾ ಕೃಷ್ಣ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು.

ಈ ಸುದ್ದಿಯನ್ನೂ ಓದಿ: Bagheera Movie: ನಟ ಶ್ರೀಮುರಳಿ ಅಭಿನಯದ ‘ಬಘೀರ’ ಚಿತ್ರದ‌ ರಿಲೀಸ್‌ ಡೇಟ್‌ ಅನೌನ್ಸ್

Leave a Reply

Your email address will not be published. Required fields are marked *