ಚೆನ್ನೈ: ತಮಿಳಿನಲ್ಲಿ ಕೆಜಿಎಫ್ ಕುರಿತಾದ ಮತ್ತೊಂದು ಸಿನಿಮಾ ತಯಾರಾಗುತ್ತಿದೆ. ತಮಿಳಿನ ನಿರ್ದೇಶಕ ಪಾ ರಂಜಿತ್, ಕೆಜಿಎಫ್, ಅಲ್ಲಿನ ಚಿನ್ನದ ಗಣಿ, ಗಣಿ ಕಾರ್ಮಿಕರ ಜೀವನವನ್ನು ಪ್ರಧಾನವಾಗಿಟ್ಟುಕೊಂಡು ಕತೆ ಹೆಣೆದಿದ್ದು, ಸಿನಿಮಾದಲ್ಲಿ ಚಿಯಾನ್ ವಿಕ್ರಂ ನಾಯಕ ನಟನಾಗಿ ನಟಿಸುತ್ತಿದ್ದಾರೆ.
ಸಿನಿಮಾಕ್ಕೆ ಕನ್ನಡತಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ಆಯ್ಕೆ ಆಗಿದ್ದಾರೆ ಎನ್ನಲಾಗಿತ್ತು. ಆದರೆ ಹೊಸ ಸುದ್ದಿಯೆಂದರೆ ಸಿನಿಮಾ ದಿಂದ ರಶ್ಮಿಕಾ ಮಂದಣ್ಣರನ್ನು ಕೈಬಿಡಲಾಗಿದೆ ಯಂತೆ!
ವಿಕ್ರಂರ 69ನೇ ಸಿನಿಮಾ ಆಗಿದ್ದು, ‘ಪುಷ್ಪ’ ಸಿನಿಮಾದಲ್ಲಿನ ನಟನೆ ಮೆಚ್ಚಿ, ನಿರ್ದೇಶಕ ಪಾ ರಂಜಿತ್, ರಶ್ಮಿಕಾರಿಗೆ ಅವಕಾಶ ನೀಡುವ ನಿರ್ಣಯ ಮಾಡಿದ್ದರಂತೆ. ಆದರೆ ಅನಿವಾರ್ಯ ಕಾರಣಗಳಿಂದಾಗಿ ಇದೀಗ ರಶ್ಮಿಕಾರನ್ನು ಸಿನಿಮಾದಿಂದ ಹೊರಗಿಡಲಾಗಿದೆ.
ರಶ್ಮಿಕಾ ಮಂದಣ್ಣರ ಬದಲಿಗೆ ಅವಕಾಶವನ್ನು ನಟಿ ಮಾಳವಿಕಾ ಮೋಹನನ್ಗೆ ನೀಡಲಾಗಿದೆ. ಕನ್ನಡದ ‘ನಾನು ಮತ್ತು ವರಲಕ್ಷ್ಮಿ’ ಸಿನಿಮಾದಲ್ಲಿ ನಟಿಸಿದ್ದ ಈ ನಟಿ, ಹಂತ ಹಂತವಾಗಿ ವೃತ್ತಿಯಲ್ಲಿ ಬೆಳೆಯುತ್ತಿದ್ದು, ಈಗಾಗಲೆ ರಜನೀಕಾಂತ್ ಜೊತೆ ‘ಪೆಟ್ಟಾ’, ವಿಜಯ್ ಜೊತೆ ‘ಮಾಸ್ಟರ್’ ಧನುಶ್ ಜೊತೆ ‘ಮಾರನ್’ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಈ ಸಿನಿಮಾವು ಬ್ರಿಟೀಷ್ ಕಾಲದಲ್ಲಿ ಗಣಿ ಕಾರ್ಮಿಕರ ಬದುಕು ಹೇಗಿತ್ತು ಎಂಬುದರ ಬಗೆಗಿನ ಸಿನಿಮಾ ಆಗಿದ್ದು, ಸಿನಿಮಾವನ್ನು ಆಂಧ್ರದ ಕಡಪನಲ್ಲಿ ಚಿತ್ರೀಕರಿಸಲು ಯೋಜಿಸಲಾಗಿದೆ.
ಸಿನಿಮಾದ ಚಿತ್ರೀಕರಣ ಅಕ್ಟೋಬರ್ 17ರಿಂದ ಪ್ರಾರಂಭವಾಗಿದೆ. ಸಿನಿಮಾವನ್ನು ಗ್ರೀನ್ ಸ್ಟುಡಿಯೋಸ್ ನಿರ್ಮಾಣ ಮಾಡುತ್ತಿದೆ.