Friday, 22nd November 2024

ರಿಯಾ ಚಕ್ರವರ್ತಿಗೆ ಸಿಕ್ಕಿತು ಜಾಮೀನು

ಮುಂಬೈ : ಬಾಲಿವುಡ್ ನಟ ಸುಶಾಂತ್ ಸಿಂಗ್ ಸಾವಿನ ಪ್ರಕರಣದಲ್ಲಿ ಡ್ರಗ್ಸ್ ಜಾಲದ ನಂಟು ಆರೋಪ ದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ರಿಯಾ ಚಕ್ರವರ್ತಿಗೆ ಕೊನೆಗೂ ಕೋರ್ಟ್ ನಿಂದ ಜಾಮೀನು ಸಿಕ್ಕಿದೆ.

ರಿಯಾ ಚಕ್ರವರ್ತಿಗೆ ಬಿಗ್ ರಿಲೀಫ್ ನೀಡಿರುವ ಬಾಂಬೆ ಹೈಕೋರ್ಟ್ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ.

ನಟ ಸುಶಾಂತ್ ಸಿಂಗ್ ಸಾವು ಹಾಗೂ ಡ್ರಗ್ಸ್ ಜಾಲದ ನಂಟಿನ ಆರೋಪದಲ್ಲಿ ರಿಯಾ ಚಕ್ರವರ್ತಿ, ಸಹೋದರ ಶೋವಿಕ್ ಚಕ್ರವರ್ತಿ ಕಳೆದ ಒಂದು ತಿಂಗಳಿನಿಂದ ಜೈಲಿನಲ್ಲಿದ್ದರು. ಏತನ್ಮಧ್ಯೆ ಜಾಮೀನು ಕೋರಿ ಇಬ್ಬರೂ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಬಾಂಬೆ ಹೈಕೋರ್ಟ್ ಶೋವಿಕ್ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ.

ರಿಯಾ ಚಕ್ರವರ್ತಿಗೆ ಒಂದು ಲಕ್ಷ ರೂಪಾಯಿ ಶ್ಯೂರಿಟಿ ಭದ್ರತೆ ಆಧಾರದ ಮೇಲೆ ಹೈಕೋರ್ಟ್ ಷರತ್ತು ವಿಧಿಸಿ ಜಾಮೀನು ಮಂಜೂರು ಮಾಡಿದೆ. ಸೆಪ್ಟೆಂಬರ್ 8ರಂದು ಎನ್ ಸಿಬಿ ಅಧಿಕಾರಿಗಳು ರಿಯಾ ಚಕ್ರವರ್ತಿಯನ್ನು ಬಂಧಿಸಿದ್ದರು.