Thursday, 12th December 2024

Sai Pallavi: ರಾಮಾಯಣಕ್ಕಾಗಿ ನಾನ್‌ ವೆಜ್‌ ಬಿಟ್ರಾ ಸಾಯಿ ಪಲ್ಲವಿ? ನಟಿ ಏಕಾಏಕಿ ಗರಂ ಆಗಿದ್ದೇಕೆ?

Sai Pallavi

ಮುಂಬೈ: ಸಹಜ ಸುಂದರಿ ದಕ್ಷಿಣ ಭಾರತದ ನಟಿ ಸಾಯಿ ಪಲ್ಲವಿ (Sai Pallavi) ನಿತೇಶ್ ತಿವಾರಿ ನಿರ್ದೇಶನದ ರಾಮಾಯಣ (Ramayana) ಸಿನಿಮಾದ ಮೂಲಕ ಸೀತೆಯಾಗಿ ಬಾಲಿವುಡ್‌ಗೆ (Bollywood) ಪದಾರ್ಪಣೆ ಮಾಡುತ್ತಿದ್ದಾರೆ. ಪೌರಾಣಿಕ ಸಿನಿಮಾದಲ್ಲಿ ನಟಿಸುತ್ತಿರುವುದರಿಂದ ಸಾಯಿ ಪಲ್ಲವಿ ಮಾಂಸಾಹಾರ ತ್ಯಜಿಸಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಸದ್ಯ ಈ ವದಂತಿಯ ಬಗ್ಗೆ ನಟಿ ಪ್ರತಿಕ್ರಿಯೆ ನೀಡಿದ್ದು, ಸುಳ್ಳು ವದಂತಿ ಹರಡುವವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಣಬೀರ್‌ ಕಪೂರ್‌ ಹಾಗೂ ಹಲವು ತಾರಾಗಣಗಳನ್ನು ಒಳಗೊಂಡ ರಾಮಾಯಣದಲ್ಲಿ ಸೀತೆಯಾಗಿ ನಟಿಸುತ್ತಿರುವ ಸಾಯಿ ಪಲ್ಲವಿ ಮಾಂಸಹಾರವನ್ನು ತ್ಯಜಿಸಿದ್ದಾರೆ ಎಂದು ಎಲ್ಲೆಡೆ ಸುದ್ದಿ ಹರಡಿತ್ತು. ಅದಕ್ಕೀಗ ಸ್ಪಷ್ಟನೆ ನೀಡಿರುವ ನಟಿ ಪ್ರತಿ ಬಾರಿ ನಾನು ಇಂತಹ ಆಧಾರ ರಹಿತ , ಸುಳ್ಳು ಸುದ್ದಿಗಳಿಗೆ ಯಾವಾಗಲೂ ಪ್ರತಿಕ್ರಿಯೆ ನೀಡುವುದಿಲ್ಲ. ಆದರೆ ಇಂತಹ ಆಧಾರ ರಹಿತ ಸುದ್ದಿಗಳು ನಿರಂತರವಾಗಿ ಹರಡುತ್ತಿದೆ. ವಿಶೇಷವಾಗಿ ನನ್ನ ಸಿನಿಮಾಗಳು ಹಾಗೂ ವೈಯಕ್ತಿಕ ಜೀವನದ ಬಗ್ಗೆ ಸಾಕಷ್ಟು ವದಂತಿಗಳು ಸೃಷ್ಟಿಯಾಗುತ್ತಿರುತ್ತವೆ. ಇನ್ನು ಮುಂದೆ ನನಗೆ ಸಂಬಂಧಿಸಿದ ಯಾವುದೇ ಸುಳ್ಳು ಮಾಹಿತಿಯನ್ನು ಪ್ರಕಟಿಸಿದರೆ ನಾನು ಅಂತವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ.

ಸಾಯಿ ಪಲ್ಲವಿ ಅವರು ಸೀತೆಯ ಪಾತ್ರಕ್ಕಾಗಿ ನಿರ್ದಿಷ್ಟವಾಗಿ ಸಸ್ಯಾಹಾರಿ ಆಹಾರವನ್ನು ಅಳವಡಿಸಿಕೊಂಡಿದ್ದಾರೆ ಹಾಗೂ ಸಸ್ಯಹಾರಿ ಆಹಾರವನ್ನು ಸಿದ್ಧಪಡಿಸಲು ತಮ್ಮ ಜೊತೆ ಅಡುಗೆಯ ತಂಡವನ್ನೂ ಶೂಟಿಂಗ್‌ ಸೆಟ್‌ಗೆ ಕರೆದೊಯ್ಯುತ್ತಾರೆ ಎಂದು ತಮಿಳು ಮಾಧ್ಯಮವೊಂದು ಪ್ರಕಟಿಸಿತ್ತು. ಸಾಯಿ ಪಲ್ಲವಿ ಈ ಪೋಸ್ಟ್‌ ಮಾಡುತ್ತಿದ್ದಂತೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಂತಹ ಸುಳ್ಳು ಸುದ್ದಿ ಹರಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಹೇಳಿದ್ದಾರೆ. ಇನ್ನು ಬಾಲಿವುಡ್‌ನ ಬಹುನಿರೀಕ್ಷಿತ ಚಿತ್ರ 2026 ರಲ್ಲಿ ಬಿಡುಗಡೆಯಾಗಲಿದ್ದು, ರಾಕಿಂಗ್‌ ಸ್ಟಾರ್‌ ಯಶ್‌ ಕೂಡ ನಟಿಸಲಿದ್ದಾರೆ ಎಂದು ತಿಳಿದು ಬಂದಿದೆ.

ಈ ಸುದ್ದಿಯನ್ನೂ ಓದಿ : Amaran Movie: 25 ದಿನ ಪೂರೈಸಿದ ‘ಅಮರನ್’; 300 ಕೋಟಿ ರೂ. ಕ್ಲಬ್‌ ಸೇರಿದ ಶಿವ ಕಾರ್ತಿಕೇಯನ್-ಸಾಯಿ ಪಲ್ಲವಿ ಸಿನಿಮಾ