Thursday, 14th November 2024

Salman Khan : ಸಲ್ಮಾನ್‌ ಖಾನ್‌ ಜೊತೆ ಸಿಕಂದರ್‌ ಸಿನಿಮಾ ಲಿರಿಸಿಸ್ಟ್‌ಗೂ ಜೀವ ಬೆದರಿಕೆ; ಕರ್ನಾಟಕ ಮೂಲದ ಕಿಡಿಗೇಡಿ ಅರೆಸ್ಟ್‌

Salman Khan

ಮುಂಬೈ: ಸಲ್ಮಾನ್ ಖಾನ್ (Salman Khan) ಮತ್ತು ಅವರ ಮುಂಬರುವ ಸಿಕಂದರ್ (Sikandar) ಚಿತ್ರದ ಗೀತೆ ರಚನೆಕಾರನಿಗೆ ಜೀವ ಬೆದರಿಕೆ ಹಾಕಿದ ಆರೋಪದ ಮೇಲೆ ಕರ್ನಾಟಕದ 50 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಯನ್ನು ಕರ್ನಾಟಕದ ರಾಯಚೂರು ನಿವಾಸಿ ವೆಂಕಟೇಶ್ ನಾರಾಯಣ ದಾಸರ್ ಎಂದು ಗುರುತಿಸಲಾಗಿದೆ. ಬಂಧಿತ ವ್ಯಕ್ತಿ ಮುಂಬೈ ಟ್ರಾಫಿಕ್ ಪೊಲೀಸ್ ಕಂಟ್ರೋಲ್ ರೂಂಗೆ ಬೆದರಿಕೆಯ ಸಂದೇಶ ಕಳುಹಿಸಿದ್ದು 5 ಕೋಟಿ ರೂ. ಬೇಡಿಕೆ ಇಟ್ಟಿದ್ದ ಎನ್ನಲಾಗಿದೆ.

ತನ್ನನ್ನು ತಾನು ಲಾರೆನ್ಸ್ ಬಿಷ್ಣೋಯ್ (Lawrence Bishnoi) ಗ್ಯಾಂಗ್‌ನ ಸದಸ್ಯ ಎಂದು ಹೇಳಿಕೊಂಡು ಆತ ಬೆದರಿಕೆ ಸಂದೇಶ ಕಳುಹಿಸಿದ್ದಾನೆ. ಸಲ್ಮಾನ್ ಖಾನ್ ಹಾಗೂ ಸಿಕಂದರ್‌ ಸಿನಿಮಾದ ‘ಮೈ ಸಿಕಂದರ್ ಹೂನ್’ ಹಾಡಿನ ಸಾಹಿತ್ಯ ರಚನೆಕಾರನಿಗೆ ವ್ಯಕ್ತಿ ಕೊಲೆ ಬೆದರಿಕೆ ಹಾಕಿದ್ದಾನೆ. ಈ ಹಾಡನ್ನು ಬರೆದವರು ಯಾರೇ ಆಗಲಿ ಬಿಡುವುದಿಲ್ಲ. ಈ ಹಾಡನ್ನು ಬರೆದವರನ್ನು ಮುಂದಿನ ಒಂದು ತಿಂಗಳಲ್ಲಿ ಅವರ ಜೀವನ ಅಂತ್ಯಗೊಳಿಸುತ್ತೇವೆ ಧೈರ್ಯವಿದ್ದರೆ ಸಲ್ಮಾನ್‌ ಹಾಗೂ ಸಾಹಿತ್ಯ ರಚನೆಕಾರ ನಮ್ಮಿಂದ ಬಚಾವ್‌ ಆಗಲಿ ಎಂದು ಬೆದರಿಕೆ ಹಾಕಿದ್ದಾನೆ. ಜೀವ ಉಳಿಯಬೇಕೆಂದರೆ 5 ಕೋಟಿ ರೂ. ನೀಡುವಂತೆ ಕಿಡಿಗೇಡಿ ಬೇಡಿಕೆ ಇಟ್ಟಿದ್ದ ಎಂಬುದು ತಿಳಿದು ಬಂದಿದೆ. ಸಂದೇಶವನ್ನು ಸ್ವೀಕರಿಸಿದ ಪೊಲೀಸರು ತನಿಖೆ ಆರಂಭಿಸಿದರು ಮತ್ತು ಮೊಬೈಲ್ ಸಂಖ್ಯೆ ಕರ್ನಾಟಕದ್ದು ಎಂದು ತಿಳಿಯುತ್ತಲೇ ಮುಂಬೈನಿಂದ ರಾಯಚೂರಿಗೆ ಬಂದ ವರ್ಲಿ ಪೊಲೀಸರು ಸ್ಥಳೀಯ ಪೊಲೀಸರ ಸಹಾಯದೊಂದಿಗೆ ವೆಂಕಟೇಶ್‌ ನಾರಾಯಣ ದಾಸರ್‌ನನ್ನು ಹೆಚ್ಚಿನ ತನಿಖೆಗೆ ಮುಂಬೈಗೆ ಕರೆದೊಯ್ದಿದ್ದಾರೆ.

ಬಾಬಾ ಸಿದ್ಧಿಕಿ ಹತ್ಯೆಯ ನಂತರ ಸಲ್ಮಾನ್‌ ಖಾನ್‌ಗೆ ಕೊಲೆ ಬೆದರಿಕೆಗಳು ಜೋರಾಗಿದ್ದು, ವ್ಯಕ್ತಿಯೊಬ್ಬ ಸಲ್ಮಾನ್‌ ಖಾನ್‌ಗೆ ಬೆದರಿಕೆ ಹಾಕಿದ್ದ. ಮುಂಬೈನ ಸಂಚಾರ ನಿಯಂತ್ರಕ ಕೊಠಡಿಗೆ ಸಂದೇಶ ಕಳುಹಿಸಿರುವ ವ್ಯಕ್ತಿ ತಾನು ಲಾರೆನ್ಸ್‌ ಬಿಷ್ಣೋಯ್‌ ಸಹೋದರ ಎಂದು ಹೇಳಿದ್ದಾನೆ. ಸಲ್ಮಾನ್‌ ಜೀವಂತವಾಗಿರಬೇಕೆಂದರೆ ಆತ ನಮಗೆ ಐದು ಕೋಟಿ ನೀಡಬೇಕು ಹಾಗೂ ದೇವಸ್ಥಾನಕ್ಕೆ ಬಂದು ನಮ್ಮ ಸಮಾಜದವರೊಂದಿಗೆ ಕ್ಷಮೆ ಕೇಳಬೇಕು. ಅವನು ಹಾಗೆ ಮಾಡದೆ ಇದ್ದಲ್ಲಿ ಅವನನ್ನು ಕೊಲೆ ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದ.

ಇದನ್ನೂ ಓದಿ: Salman Khan: ನಟ ಸಲ್ಮಾನ್‌ ಖಾನ್‌ಗೆ ಮತ್ತೆ ಲಾರೆನ್ಸ್‌ ಬಿಷ್ಣೋಯ್‌ ಗ್ಯಾಂಗ್‌ನಿಂದ ಜೀವ ಬೆದರಿಕೆ

ಜಾರ್ಖಂಡ್‌ನ ಜೆಮ್‌ಶೆಡ್‌ಪುರದ ವ್ಯಕ್ತಿಯೊಬ್ಬ ಸಲ್ಮಾನ್‌ ಖಾನ್‌ಗೆ ಬೆದರಿಕೆ ಹಾಕಿ ಎರಡು ಕೋಟಿ ರೂ. ಬೇಡಿಕೆ ಇಟ್ಟಿದ್ದ. ನಂತರ ಆತನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದರು. ಸಲ್ಮಾನ್‌ ಮೇಲೆ ಈ ಹಿಂದೆ ಹಲವು ಬಾರಿ ಕೊಲೆ ಪ್ರಯತ್ನಗಳು ನಡೆದಿದ್ದು, ಬಿಷ್ಣೋಯ್‌ ಸಮಾಜ ಪವಿತ್ರವೆಂದು ಪರಿಗಣಿಸಲಾದ ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಭಾಗಿಯಾದಾಗಿನಿಂದಲೂ ಲಾರೆನ್ಸ್‌ ಬಿಷ್ಣೋಯ್‌ ಗ್ಯಾಂಗ್‌ ಸಲ್ಮಾನ್‌ ಖಾನ್‌ ಮೇಲೆ ದ್ವೇಷ ಸಾಧಿಸುತ್ತಾ ಬಂದಿದೆ. ಈ ಹಿಂದೆ ಸಲ್ಮಾನ್‌ ಖಾನ್‌ ಮನೆ ಮೇಲೆ ಗುಂಡಿನ ದಾಳಿ ಕೂಡಾ ನಡೆದಿತ್ತು