Thursday, 12th December 2024

Sameer Acharya: ಸಮೀರ್‌ ಆಚಾರ್ಯ ದಾಂಪತ್ಯದಲ್ಲಿ ಕಲಹ; ಪತ್ನಿ ಮೇಲೆ ಹಲ್ಲೆ ನಡೆಸಿದ ಬಿಗ್‌ ಬಾಸ್‌ ಮಾಜಿ ಸ್ಪರ್ಧಿ

Sameer Acharya

ಹುಬ್ಬಳ್ಳಿ: ಬಿಗ್‌ ಬಾಸ್‌ ಕನ್ನಡ ಸೀಸನ್‌ 11 (Bigg Boss Kannada 11) ಆರಂಭವಾಗಿದೆ. ಈ ಮಧ್ಯೆ ಬಿಗ್‌ ಬಾಸ್‌ ಮಾಜಿ ಸ್ಪರ್ಧಿಯೊಬ್ಬರು ಎಡವಟ್ಟು ಮಾಡಿಕೊಂಡಿದ್ದು, ಅವರ ಪತ್ನಿ ಠಾಣೆ ಮೆಟ್ಟಿಲೇರಿದ್ದಾರೆ. ನಾವು ಹೇಳ ಹೊರಟಿರುವುದು ಬಿಗ್‌ ಬಾಸ್‌ ಕನ್ನಡ ಸೀಸನ್‌ 5ರ ಸ್ಪರ್ಧಿ ಸಮೀರ್‌ ಆಚಾರ್ಯ (Sameer Acharya) ಅವರ ಬಗ್ಗೆ. ಅರೆ ಇವರಿಗೇನಾಯ್ತು? ಪತ್ನಿ ಜತೆ ವಿಡಿಯೊ ಮಾಡುತ್ತ ಆತ್ಮೀಯರಾಗಿಯೇ ಇದ್ದರಲ್ಲ? ಮುಂತಾದ ನಿಮ್ಮ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

ಬಿಗ್‌ ಬಾಸ್‌ ಮೂಲಕ ಜನಪ್ರಿಯರಾದ ಸಮೀರ್‌ ಆಚಾರ್ಯ ಸೋಷಿಯಲ್‌ ಮೀಡಿಯಾದಲ್ಲಿಯೂ ಗಮನ ಸೆಳೆದಿದ್ದಾರೆ. ತಮ್ಮ ಪತ್ನಿ ಶ್ರಾವಣಿ ಸಮೀರ್‌ ಆಚಾರ್ಯ ಅವರೊಂದಿಗೆ ವಿಡಿಯೊ, ರೀಲ್ಸ್‌ ಮಾಡಿ ಆಗಾಗ ಶೇರ್‌ ಮಾಡುತ್ತಿರುತ್ತಾರೆ. ಜತೆಗೆ ದಂಪತಿ ತಮ್ಮ ಮಗಳ ಜತೆ ಕಳೆಯುವ ಆತ್ಮೀಯ ಕ್ಷಣಗಳನ್ನು, ಪ್ರವಾಸದ ವಿವರಗಳನ್ನು ಸೆರೆ ಹಿಡಿದು ಅಪ್‌ಲೋಡ್‌ ಮಾಡುತ್ತಿರುತ್ತಾರೆ. ಈ ಮೂಲಕ ಸಾವಿರಾರು ಫಾಲೋವರ್ಸ್‌ ಹೊಂದಿದ್ದಾರೆ. ಅಲ್ಲದೆ ಈ ಜೋಡಿ ʼಕನ್ನಡದ ಕೋಟ್ಯಾಧಿಪತಿʼ, ʼರಾಜಾ ರಾಣಿʼ ಶೋದಲ್ಲಿಯೂ ಕಾಣಿಸಿಕೊಂಡಿತ್ತು. ಇವರ ದಾಂಪತ್ಯ ಜೀವನದಲ್ಲಿ ಭಿನ್ನಾಭಿಪ್ರಾಯ ಉಂಟಾಗಿದ್ದು, ಸದ್ಯ ಪೊಲೀಸ್‌ ಸಮ್ಮುಖದಲ್ಲಿ ರಾಜಿ ಮಾಡಿಸಲಾಗಿದೆ.

ಏನಿದು ಘಟನೆ?

ಪತ್ನಿ ಶ್ರಾವಣಿ ಸಮೀರ್ ಆಚಾರ್ಯ ಮೇಲೆ ಸಮೀರ್ ಆಚಾರ್ಯ ತಮ್ಮ ತಂದೆ-ತಾಯಿಯೊಂದಿಗೆ ಸೇರಿ ಮನಬಂದಂತೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಭಾನುವಾರ (ಸೆಪ್ಟೆಂಬರ್‌ 29) ಶ್ರಾವಣಿ ಸಮೀರ್ ಆಚಾರ್ಯ ಮನೆ ಕೆಲಸದಲ್ಲಿ ನಿರತರಾಗಿದ್ದರು. ಈ ವೇಳೆ ಮಗಳು ಜೋರಾಗಿ ಅಳಲು ಆರಂಭಿಸಿದ್ದಳು. ಹೀಗಾಗಿ ಶ್ರಾವಣಿ ಮಗಳಿಗೆ ಗದರಿದ್ದಾರೆ. ಇದನ್ನು ಕಂಡ ಸಮೀರ್ ಆಚಾರ್ಯ ತಂದೆ ತನ್ನ ಸೊಸೆ ಶ್ರಾವಣಿಗೆ ಬೈದಿದ್ದಾರೆ.

ಇದೇ ವಿಚಾರಕ್ಕೆ ಮನೆ ಮಂದಿಯಲ್ಲಿ ವಾಗ್ವಾದ ಆರಂಭವಾಗಿದೆ. ಸಮೀರ್‌ ಆಚಾರ್ಯ ಕೂಡ ಈ ಜಗಳದಲ್ಲಿ ಭಾಗಿಯಾಗಿದ್ದಾರೆ. ಸಮೀರ್ ಆಚಾರ್ಯ ಸೇರಿದಂತೆ ಅತ್ತೆ, ಮಾವ ಸೇರಿಕೊಂಡು ಶ್ರಾವಣಿ ಮೇಲೆ ಮನಬಂದಂತೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಈ ವೇಳೆ ಶ್ರಾವಣಿ ಇನ್‌ಸ್ಟಾಗ್ರಾಂನಲ್ಲಿ ಲೈವ್ ಹೋಗಿದ್ದಾರೆ. ಇದರಿಂದ ಮತ್ತಷ್ಟು ಕೆರಳಿದ ಸಮೀರ್‌ ಆಚಾರ್ಯ ಶ್ರಾವಣಿಯ ಮೊಬೈಲ್‌ ಕಿತ್ತು ಒಡೆದು ಹಾಕಿದ್ದಾರೆ. ಘಟನೆಯಲ್ಲಿ ಶ್ರಾವಣಿಯ ಮುಖ, ಕೈಗಳಿಗೆ ಗಾಯಗಳಾಗಿವೆ.

ತಮ್ಮ ಮೇಲೆನ ಹಲ್ಲೆಯನ್ನು ಖಂಡಿಸಿ ಶ್ರಾವಣಿ ಮಹಿಳಾ ಠಾಣೆ ಮೆಟ್ಟಿಲೇರಿದ್ದಾರೆ. ಇತ್ತ ಸಮೀರ್ ತಂದೆ ಅವರಿಗೂ ಗಾಯಗಳಾಗಿವೆ. ಠಾಣೆಗೆ ಎಲ್ಲರನ್ನೂ ಕರೆಸಿ ಕೌನ್ಸಲಿಂಗ್ ಮಾಡಿದ ಪೊಲೀಸರು ದಂಪತಿ, ಅತ್ತೆ-ಮಾವರನ್ನ ಒಂದು ಮಾಡಿದ ಮನೆಗೆ ಕಳಿಸಿದ್ದಾರೆ. ಶ್ರಾವಣಿ ಯಾವುದೇ ದೂರು ದಾಖಲಿಸಿಲ್ಲ. ಹೀಗಾಗಿ ಪ್ರಕರಣ ಸುಖಾಂತ್ಯ ಕಂಡಿದೆ.

ಸಮೀರ್‌ ತಮ್ಮ ಪತ್ನಿಯ ಮೇಲೆ ರೇಗಾಡುತ್ತಿರುವ ಘಟನೆ ಈ ಹಿಂದೆಯೂ ನಡೆದಿತ್ತು. ಅದೂ ಕ್ಯಾಮೆರಾದ ಮುಂದೆ. ಕೆಲವು ವರ್ಷಗಳ ಹಿಂದೆ ʼಕನ್ನಡದ ಕೋಟ್ಯಾಧಿಪತಿʼ ಗೇಮ್‌ ಶೋದಲ್ಲಿ ಸಮೀರ್‌ ಮತ್ತು ಶ್ರಾವಣಿ ಭಾಗವಹಿಸಿದ್ದರು. ಈ ವೇಳೆ ಶ್ರಾವಣಿ ಪ್ರಶ್ನೆಯೊಂದಕ್ಕೆ ಸರಿ ಉತ್ತರ ಸೂಚಿಸಿದ್ದರು. ಆದರೆ ಸಮೀರ್‌ ಈ ವೇಳೆ ಪತ್ನಿ ಮೇಲೆ ರೇಗಿದ್ದರು. ಈ ವಿಚಾರಕ್ಕೆ ಸಮೀರ್‌ ಸಾಕಷ್ಟು ಟ್ರೋಲ್‌ಗೆ ಒಳಗಾಗಿದ್ದರು.

ಈ ಸುದ್ದಿಯನ್ನೂ ಓದಿ: Bigg Boss kannada 11 : ಬಿಗ್‌ಬಾಸ್‌ ಮನೆಗೆ ಎಂಟ್ರಿ ಕೊಟ್ಟ ಸ್ಪರ್ಧಿಗಳ ವಿವರ ಇಲ್ಲಿದೆ