ಬೆಂಗಳೂರು: ಅನಾರೋಗ್ಯದಿಂದ ಬಳಲುತ್ತಿದ್ದ ಕನ್ನಡದ ಹಿರಿಯ ನಟ ಸತ್ಯಜಿತ್ ಅವರು ನಗರದ ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
650ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅವರು ನಟಿಸಿದ್ದ ಸತ್ಯಜಿತ್ ಆ ಮೂಲಕ ಚಿತ್ರರಂಗದಲ್ಲಿ ಹೆಸರು ಮಾಡಿದ್ದರು. ಚಂದನವನದ ಹಲವಾರು ಸ್ಟಾರ್ ಕಲಾವಿದರ ಸಿನಿಮಾಗಳಲ್ಲಿ ನಟಿಸುವ ಅವಕಾಶ ಅವರಿಗೆ ಸಿಕ್ಕಿತ್ತು.
ಕಳೆದ ಸೋಮವಾರ ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆಸ್ಪತ್ರೆಗೆ ಸತ್ಯಜಿತ್ ದಾಖಲಿಸಿದ ದಿನ ಮಾಧ್ಯಮದವರ ಜತೆ ಮಾತನಾಡಿದ್ದ ಪುತ್ರ ಆಕಾಶ್, ತಂದೆಯ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ದಿನದಿಂದ ದಿನಕ್ಕೆ ಆರೋಗ್ಯ ಹದಗೆಡುತ್ತಲೇ ಇದೆ. ಸೂಕ್ತ ಸಮಯ ದಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದಿದ್ದರು.
ಗ್ಯಾಂಗ್ರಿನ್ನಿಂದಾಗಿ ಅವರ ಒಂದು ಕಾಲು ಕತ್ತರಿಸಲಾಗಿತ್ತು. ಬಳಿಕ ಸಕ್ಕರೆ ಕಾಯಿಲೆ ಮತ್ತು ಇನ್ನಿತರೆ ವಯೋ ಸಹಜ ಸಮಸ್ಯೆಗಳಿಂದ ಬಳಲುತ್ತಿದ್ದರು. ಬಳಿಕ ಕುಟುಂಬದ ಹಣಕಾಸಿನ ಸ್ಥಿತಿಯು ಉತ್ತಮವಾಗಿರಲಿಲ್ಲ. ಅದಲ್ಲದೆ ಮಗಳ ಮೇಲೆಯೂ ಸತ್ಯಜಿತ್ ಅಸಮಾಧಾನವಾಗಿತ್ತು. ಕುಟುಂಬ ಮತ್ತು ಆರೋಗ್ಯ ಸಮಸ್ಯೆಗಳಿಂದ ಸತ್ಯಜಿತ್ ತುಂಬಾ ಕೊರಗಿ ಹೋಗಿದ್ದರು.
2018ರಲ್ಲಿ ತೆರೆಕಂಡ ಪ್ರಿಯಾಂಕಾ ಉಪೇಂದ್ರ ಅಭಿನಯದ ಸೆಕೆಂಡ್ ಹಾಫ್ ಚಿತ್ರದ ಸತ್ಯಜಿತ್ ಅಭಿನಯಿಸಿದ್ದರು. ಇದೇ ಸತ್ಯಜಿತ್ ಅಭಿನಯಿಸಿದ ಕೊನೆಯ ಚಿತ್ರ.