ಬೆಂಗಳೂರು: ಕನ್ನಡ ಚಲನಚಿತ್ರದಲ್ಲಿ “ಅಪ್ಪು’ ಎಂದೇ ಖ್ಯಾತ ನಟ ಪುನೀತ್ ರಾಜ್‌ಕುಮಾರ್ (46) ಶುಕ್ರವಾರ ನಿಧನರಾದರು.
ಅವರಿಗೆ ಗುರುವಾರ ರಾತ್ರಿಯೇ ಲಘು ಹೃದಯಾಘಾತವಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ.
ಪುನೀತ್ ರಾಜ್‌ಕುಮಾರ್ ವ್ಯಾಯಾಮ ಮಾಡುವ ಸಂದರ್ಭ ಲಘು ಹೃದಯಾಘಾತ ಆಗಿತ್ತು. ನಂತರ ಪುನೀತ್ ಆರೋಗ್ಯದಲ್ಲಿ ಏರುಪೇರು ಉಂಟಾಗಿತ್ತು. ನಂತರ ಶುಕ್ರವಾರ ಬೆಳಿಗ್ಗೆ ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಈಗಾಗಲೇ ವಿಕ್ರಂ ಆಸ್ಪತ್ರೆಗೆ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದ್ದು, ನಟ ಪುನೀತ್ ರಾಜ್‌ಕುಮಾರ್ ಸಾವು ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಲಕ್ಷಾಂತರ ಅಭಿಮಾನಿಗಳಿಗೆ ನಿಜಕ್ಕೂ ಆಘಾತ ಮೂಡಿಸಿದೆ.
ಕನ್ನಡ ಚಿತ್ರರಂಗದಲ್ಲಿಯೇ ಅತ್ಯಂತ ಫಿಟ್ ಆಗಿದ್ದ ಪುನೀತ್ ರಾಜಕುಮಾರ್ ಹಲವು ಚಿತ್ರಗಳಲ್ಲಿ ನಟಿಸಿ ದ್ದರು. ಕನ್ನಡದ ನಟ ಡಾ. ರಾಜಕುಮಾರ್‌ರವರ ಮೂರನೇ ಪುತ್ರ ಪುನೀತ್ ರಾಜಕುಮಾರ್ ಬಾಲ್ಯದಿಂದಲೇ ಚಿತ್ರರಂಗದಲ್ಲಿ ಛಾಪು ಮೂಡಿಸಿದ್ದರು.
ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಅಂತಿಮ ದರ್ಶನದ ವ್ಯವಸ್ಥೆ ಮಾಡಲಾಗುತ್ತಿದ್ದು, ಪೊಲೀಸರು ಭೇಟಿ ನೀಡಿ ಸ್ಥಳ ಪರಿಶೀಲಿಸಿದ್ದಾರೆ.
ಪುನೀತ್ ರಾಜಕುಮಾರ್ ಜೇಮ್ಸ್ ಸಿನಿಮಾದ ಕೆಲಸಗಳತ್ತ ಗಮನ ಹರಿಸುತ್ತಿದ್ದರು. ಆ ಚಿತ್ರಕ್ಕೆ ಚೇತನ್‌ಕುಮಾರ್ ನಿರ್ದೇಶಕ. ಅಲ್ಲದೇ, ಪವನ್‌ಕುಮಾರ್ ನಿರ್ದೇಶನದ ‘ದ್ವಿತ್ವ’ ಚಿತ್ರದಲ್ಲೂ ಅಪ್ಪು ನಟಿಸುತ್ತಿದ್ದರು.
ಕಂಠೀರವ ಸ್ಟೇಡಿಯಮ್‌ಗೆ ಬೆಂಗಳೂರು ಜಿಲ್ಲಾಧಿಕಾರಿ ಮಂಜುನಾಥ್ ಭೇಟಿ ನೀಡಿದ್ದು, ಕ್ರೀಡಾಂಗಣ ಸುತ್ತಮುತ್ತ ಬ್ಯಾರಿಕೇಡ್ ಅಳವಡಿಕೆ ಮಾಡಲಾಗಿದೆ.
ಪುನೀತ್ ರಾಜ್‌ಕುಮಾರ್ ಬದುಕಿದ್ದಾಗಲೇ ನೇತ್ರದಾನಕ್ಕೆ ಸಹಿ ಮಾಡಿದ್ದರು. ಅಷ್ಟೇ ಅಲ್ಲದೇ ರಾಜಕುಮಾರ್ ಕುಟುಂಬದವರೆಲ್ಲರೂ ನೇತ್ರದಾನಕ್ಕೆ ನಿರ್ಧರಿಸಿದ್ದಾರೆ. ಎಲ್ಲರ ಅಚ್ಚುಮೆಚ್ಚಿನ ನಟ ಪುನೀತ್ ರಾಜ್‌ಕುಮಾರ್ ಅವರ ನೇತ್ರದಾನ ಮಾಡಲು ನಿರ್ಧರಿಸಲಾಗಿದೆ. ಇದರೊಂದಿಗೆ ನಟ ಪುನೀತ್ ತಂದೆಯ ಹಾದಿಯಲ್ಲೇ ಸಾಗಿದ್ದಾರೆ.