Friday, 22nd November 2024

Sandalwood News: ಸ್ಮೈಲ್ ಗುರು ರಕ್ಷಿತ್ ಸಿನಿಮಾಗೆ ‘ಭೀಮ’ ಬಲ; ಸಮುದ್ರದ ಆಳದಲ್ಲಿ’ಅಮ್ಮು’ ಟೈಟಲ್ ಟೀಸರ್ ರಿಲೀಸ್

Sandalwood News

ಬೆಂಗಳೂರು: ಡಾ. ಪುನೀತ್ ರಾಜ್ ಕುಮಾರ್ ಜೊತೆ ‘ಆಕಾಶ್’, ‘ಅರಸು’, ಪ್ರಜ್ವಲ್ ದೇವರಾಜ್‌ ನಟನೆಯ ‘ಮೆರವಣಿಗೆ’ಯಂತಹ ಸೂಪರ್ ಹಿಟ್ ಸಿನಿಮಾಗಳ ನಿರ್ದೇಶಕ ಮಹೇಶ್ ಬಾಬು ಅವರ ಹೊಸ ಸಿನಿಮಾದ ಟೈಟಲ್ ಬಿಡುಗಡೆ ಮಾಡಲಾಗಿದೆ. ವಿಭಿನ್ನವಾಗಿ ಚಿತ್ರತಂಡ ಶೀರ್ಷಿಕೆಯನ್ನು ಅನಾವರಣ ಮಾಡಿದೆ. ಪುದುಚೇರಿಯ 82 ಸಮುದ್ರದ ಆಳದಲ್ಲಿ ಸ್ಕೂಬಾ ಡೈಯಿಂಗ್ ಮೂಲಕ ʼಅಮ್ಮುʼ ಚಿತ್ರತಂಡ ಟೈಟಲ್ ರಿವೀಲ್ ಮಾಡಿದರೆ, ಬೆಂಗಳೂರಿನ ಎಂಎಂಬಿ ಲೆಗಸಿಯಲ್ಲಿ ಶೀರ್ಷಿಕೆ ಬಿಡುಗಡೆ ಕಾರ್ಯಕ್ರಮ ನಡೆಯಿತು. ʼಭೀಮʼ ದುನಿಯಾ ವಿಜಯ್ ಕುಮಾರ್ ಮಹೇಶ್ ಬಾಬು ಅವರ ಹೊಸ ಪ್ರಯತ್ನಕ್ಕೆ ಸಾಥ್ ಕೊಟ್ಟರು (Sandalwood News).

ಮಹೇಶ್ ಬಾಬು ಅವರು ಪ್ರತಿ ಸಿನಿಮಾದಲ್ಲಿಯೂ ಹೊಸ ಪ್ರತಿಭೆಗಳನ್ನು ಪರಿಚಯಿಸುತ್ತಿದ್ದಾರೆ. ಈಗ ಅವರು ಈ ಸಿನಿಮಾ ಮೂಲಕ ‘ಕನ್ನಡತಿ’, ‘ಅವನು ಮತ್ತೆ ಶ್ರಾವಣಿ 2’ದಂತಹ ಧಾರಾವಾಹಿಗಳಲ್ಲಿ ನಟಿಸಿದ್ದ ʼಸ್ಮೈಲ್ ಗುರು’ ರಕ್ಷಿತ್ ಅವರನ್ನು ಹೀರೋ ಆಗಿ ಕನ್ನಡ ಚಿತ್ರರಂಗಕ್ಕೆ ಪರಿಚಯ ಮಾಡುತ್ತಿದ್ದಾರೆ. ಇದು ನಾಯಕನಾಗಿ ರಕ್ಷಿತ್‌ಗೂ ಮೊದಲ ಹೆಜ್ಜೆ.

ದುನಿಯಾ ವಿಜಯ್ ಮಾತನಾಡಿ, ʼʼನಮಗೆ ಸಿನಿಮಾ ಬಿಟ್ಟರೆ ಬೇರೆ ಗೊತ್ತಿಲ್ಲ. ನಿಮ್ಮೆಲ್ಲರ ಆಶೀರ್ವಾದ, ಎಲ್ಲಾ ಹೀರೋ ಅಭಿಮಾನಿಗಳ ಆಶೀರ್ವಾದ ಈ ಮಕ್ಕಳ ಮೇಲೆ ಇರಲಿ. ತಪ್ಪು ಮಾಡಿದರೆ ತಿದ್ದಿ. ನಾವು ಸಿನಿಮಾಗಾಗಿ ತುಂಬಾ ತ್ಯಾಗ ಮಾಡಿದ್ದೇವೆ. ಕಥೆ ಹೇಳದೆ ಮಹೇಶ್ ಅಣ್ಣನಿಗೆ ನಾವು ಸಿನಿಮಾ ಮಾಡಿ ಎಂದು ಕೇಳಿಕೊಳ್ಳುತ್ತೇವೆ. ತುಂಬಾ ಹಳೆ ನಿರ್ದೇಶಕರು. ಅದ್ಭುತ ವ್ಯಕ್ತಿತ್ವ. ಬದಲಾಗದೆ, ಏನೂ ಅಹಂ ಇಲ್ಲದೇ ಇರುವುವವರು. ಇಡೀ ಸಿನಿಮಾ ತಂಡಕ್ಕೆ ಒಳ್ಳೆಯದಾಗಲಿʼʼ ಎಂದರು.

ನಿರ್ದೇಶಕ ಮಹೇಶ್ ಬಾಬು ಮಾತನಾಡಿ, ʼʼವಜ್ರೇಶ್ವರಿ ಕಂಬೈನ್ಸ್ ಮೂಲಕ ನನ್ನನ್ನು ನಿರ್ದೇಶಕರಾಗಿ ಪರಿಚಯಿಸಿದವರು ಪಾರ್ವತಮ್ಮ, ರಾಜ್ ಕುಮಾರ್ ಹಾಗೂ ಅವರ ಕುಟುಂಬ. ಶಿವಣ್ಣ, ರಾಘಣ್ಣ, ಎಲ್ಲದಕ್ಕಿಂತ ಹೆಚ್ಚಿನದಾಗಿ ಅಪ್ಪು. ಅನುರಾಗ್, ಮಿಥುನ್ ಹಾಗೂ ಬಚ್ಚನ್ ಚೇತು- ಈ ಮೂರು ಜನ ಸಿನಿಮಾ ಮಾಡಬೇಕು ಎಂದರು. ಈ ಚಿತ್ರ ಆಗಲು ಮುಖ್ಯ ಕಾರಣ ರಕ್ಷಿತ್. ಅವರು ಕಥೆ ಮಾಡಿ ನನ್ನ ಬಳಿ ಹೇಳಿದರು. ಕಥೆ ಕೇಳಿ ನನಗೆ ಇಷ್ಟ ಆಯ್ತು. ಈ ಚಿತ್ರಕ್ಕೆ ಫ್ಯಾಷನೇಟ್ ನಿರ್ಮಾಪಕರು ಸಿಕ್ಕಿದ್ದಾರೆ. ವರ್ಕ್ ಶಾಪ್ ಮಾಡಿದೆ. ಜೆರುಶಾ, ಅಮೃತಾ ಇಬ್ಬರು ಚೆನ್ನಾಗಿ ಅಭಿನಯಿಸುತ್ತಾರೆ. ರಕ್ಷಿತ್ ಒಳ್ಳೆ ನಟ. ಒಂದೊಳ್ಳೆ ತಂಡ ನನಗೆ ಸಿಕ್ಕಿದೆʼʼ ಎಂದು ಸಂತಸ ಹಂಚಿಕೊಂಡರು.

ʼಸ್ಮೈಲ್ ಗುರುʼ ರಕ್ಷಿತ್ ಮಾತನಾಡಿ, ʼʼನಾನು ಬ್ಯಾಕ್‌ಗ್ರೌಂಡ್ ಡ್ಯಾನ್ಸರ್ ಆಗಿ ನನ್ನ ಕರಿಯರ್ ಶುರು ಮಾಡಿದ್ದೆ. ಬಳಿಕ ರಿಯಾಲಿಟಿ ಶೋ ಟ್ರೈ ಮಾಡಿದೆ. ಮತ್ತೆ ಮಾಡಿದ್ದು ʼಸ್ಮೈಲ್ ಗುರುʼ ಶಾರ್ಟ್ ಸಿನಿಮಾ. ʼಪದ್ಮಾವತಿʼ ಕಲರ್ಸ್ ಕನ್ನಡ ಸೀರಿಯಲ್‌ನಿಂದ ನನ್ನ ಕರಿಯರ್‌ನ ಎರಡನೇ ಹಂತ ಆರಂಭವಾಯ್ತು. ನನ್ನ ಸಿನಿಮಾ ಕನಸು ಈಗ ನನಸಾಗಿದೆ. ಈಗ ಟೈಟಲ್ ರಿವೀಲ್ ಆಗಿದೆ. ವಿಭಿನ್ನವಾಗಿ ಟೈಟಲ್ ಲಾಂಚ್ ಮಾಡಿದ್ದೇವೆʼʼ ಎಂದರು.

ʼಅಮ್ಮುʼ ಸಿನಿಮಾದಲ್ಲಿ ʼಸ್ಮೈಲ್ ಗುರುʼ ರಕ್ಷಿತ್‌ಗೆ ಜೋಡಿಯಾಗಿ ʼಟಗರು ಪಲ್ಯʼ ಖ್ಯಾತಿಯ ಅಮೃತಾ ಪ್ರೇಮ್ ಹಾಗೂ ʼವೀರಮದಕರಿʼ ಸಿನಿಮಾದಲ್ಲಿ ಬಾಲನಟಿಯಾಗಿ ಅಭಿನಯಿಸಿದ್ದ ಜೆರುಶಾ ಸಾಥ್ ಕೊಡುತ್ತಿದ್ದಾರೆ. ಎಂಎಂಎಂ ಪಿಕ್ಚರ್ಸ್ ಹಾಗೂ ಎ ಕ್ಲಾಸ್ ಸಿನಿ ಫಿಲ್ಮಂಸ್ ಬ್ಯಾನರ್‌ನಡಿ ಅನುರಾಗ್ ಆರ್. ಹಾಗೂ ಮಿಥುನ್ ಕೆ.ಎಸ್. ಸೇರಿ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಅನೂಪ್ ಸೀಳಿನ್ ಸಂಗೀತ ನಿರ್ದೇಶನ ಮಾಡಲಿದ್ದು, ಸತ್ಯ ಅವರು ಛಾಯಾಗ್ರಹಣ ನಿರ್ವಹಿಸಲಿದ್ದಾರೆ. ಸತೀಶ್ ಚಂದ್ರಯ್ಯ ಅವರ ಸಂಕಲನ ಈ ಚಿತ್ರಕ್ಕಿರಲಿದೆ. ನಾಯಕ ʼಸ್ಮೈಲ್ ಗುರುʼ ರಕ್ಷಿತ್ ಕಥೆ ಬರೆದಿದ್ದು, ವಿಜಯ್ ಈಶ್ವರ್ ಸಂಭಾಷಣೆ ಒದಗಿಸಲಿದ್ದಾರೆ.