Sunday, 15th December 2024

Shah Rukh Khan: ದೀಪಿಕಾ ಪಡುಕೋಣೆ, ಮಗು ನೋಡಲು ಆಸ್ಪತ್ರೆಗೆ ಭೇಟಿ ನೀಡಿದ ಶಾರುಖ್‌ ಖಾನ್‌

Shah Rukh Khan

ಮುಂಬೈ: ಬಾಲಿವುಡ್‌ ನಟಿ, ಕನ್ನಡತಿ ದೀಪಿಕಾ ಪಡುಕೋಣೆ (Deepika Padukone) ಮಗುವಿಗೆ ಜನ್ಮ ನೀಡಿದ್ದಾರೆ. ಸೆಪ್ಟೆಂಬರ್‌ 8ರಂದು ದೀಪಿಕಾ ಪಡುಕೋಣೆ-ರಣವೀರ್‌ ಸಿಂಗ್‌ ದಂಪತಿಗೆ ಹೆಣ್ಣು ಮಗು ಜನಿಸಿದೆ. ಮುಂಬೈಯ ಎನ್‌.ಎನ್‌. ರಿಲಯನ್ಸ್‌ ಫೌಂಡೇಷನ್‌ ಆಸ್ಪತ್ರೆಯಲ್ಲಿ ದೀಪಿಕಾಗೆ ಹೆರಿಯಾಗಿದ್ದು, ಸದ್ಯ ತಾಯಿ-ಮಗು ಆರೋಗ್ಯದಿಂದಿದ್ದಾರೆ. ತಾಯಿ-ಮಗುವನ್ನು ಭೇಟಿಯಾಗಲು ಆಸ್ಪತ್ರೆಗೆ ಬಾಲಿವುಡ್‌ ಬಾದ್‌ಷಾ ಶಾರುಖ್‌ ಖಾನ್‌ (Shah Rukh Khan) ತೆರಳಿದ್ದು, ಸದ್ಯ ಈ ವೀಡಿಯೊ ವೈರಲ್‌ ಆಗಿದೆ.

ದೀಪಿಕಾ ಮತ್ತು ಶಾರುಖ್‌ ಮಧ್ಯೆ ಒಂದೊಳ್ಳೆ ಬಾಂಧವ್ಯವಿದೆ. ಹಲವು ವರ್ಷಗಳಿಂದ ಇಬ್ಬರೂ ಉತ್ತಮ ಸ್ನೇಹಿತರಾಗಿದ್ದಾರೆ. ದೀಪಿಕಾ ಬಾಲಿವುಡ್‌ಗೆ ಪರಿಚಯವಾಗಿದ್ದೇ ಶಾರುಖ್‌ ಖಾನ್‌ ಚಿತ್ರದ ಮೂಲಕ. 2007ರಲ್ಲಿ ತೆರೆಕಂಡ ಶಾರುಖ್‌ ಅಭಿನಯದ ʼಓಂ ಶಾಂತಿ ಓಂʼ ಸಿನಿಮಾ ಮೂಲಕ ದೀಪಿಕಾ ಹಿಂದಿ ಚಿತ್ರರಂಗಕ್ಕೆ ಕಾಲಿಟ್ಟರು. ಮೊದಲ ಚಿತ್ರವೇ ಸೂಪರ್‌ ಹಿಟ್‌ ಆಗಿತ್ತು. ಬಳಿಕ ಇವರು ʼಚೆನ್ನೈ ಎಕ್ಸ್‌ಪ್ರೆಸ್‌ʼ, ʼಹ್ಯಾಪಿ ನ್ಯೂ ಇಯರ್‌ʼ ಮತ್ತು ಕಳೆದ ವರ್ಷ ತೆರೆಕಂಡ ʼಪಠಾಣ್‌ʼ ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿ ಹಿಟ್‌ ಜೋಡಿ ಎನಿಸಿಕೊಂಡಿದ್ದಾರೆ. ಅಲ್ಲದೆ ಇವರು ಆಗಾಗ ಕಾರ್ಯಕ್ರಮಗಳಲ್ಲಿ ಜೊತೆಯಾಗಿ ಕಾಣಿಸಿಕೊಂಡು ತಮ್ಮ ಸ್ನೇಹವನ್ನು ಕಾಪಾಡಿಕೊಂಡು ಬಂದಿದ್ದಾರೆ.

ಗುರುವಾರ ರಾತ್ರಿ ಶಾರುಖ್ ಖಾನ್ ತಮ್ಮ ರೋಲ್ಸ್ ರಾಯ್ಸ್​ ಕಾರಿನಲ್ಲಿ ಆಸ್ಪತ್ರೆಗೆ ಆಗಮಿಸಿ ದೀಪಿಕಾ-ರಣವೀರ್ ಅವರನ್ನು ಮಾತನಾಡಿಸಿ ಶುಭಾಸಯ ತಿಳಿಸಿದ್ದಾರೆ. ಮಗುವನ್ನು ನೋಡಿ ಹರಸಿದ್ದಾರೆ.

ದೀಪಿಕಾ ಯೋಗಕ್ಷೇಮ ವಿಚಾರಿಸಿದ್ದ ಮುಕೇಶ್ ಅಂಬಾನಿ

ವಿಶೇಷ ಎಂದರೆ ಎರಡು ದಿನಗಳ ಹಿಂದೆ ದೇಶದ ಶ್ರೀಮಂತ ಉದ್ಯಮಿ, ರಿಲಯನ್ಸ್ ಸಂಸ್ಥೆಯ ಮುಖ್ಯಸ್ಥ ಮುಕೇಶ್‌ ಅಂಬಾನಿ ಅವರು ಆಸ್ಪತ್ರೆಗೆ ಭೇಟಿ ನೀಡಿ ತಾಯಿ-ಮಗಳ ಯೋಗ ಕ್ಷೇಮ ವಿಚಾರಿಸಿ, ರಣವೀರ್‌ ಸಿಂಗ್‌ಗೆ ಅಭಿನಂದನೆ ತಿಳಿಸಿದ್ದರು. ಅಲ್ಲದೆ ಚಿತ್ರರಂಗದ ಗಣ್ಯರು, ಅಭಿಮಾನಿಗಳಿಂದ ದೀಪಿಕಾ-ರಣವೀರ್‌ಗೆ ಅಭಿನಂದನೆಗಳ ಪ್ರವಾಹವನ್ನೇ ಹರಿದು ಬಂದಿದೆ. ದೀಪಿಕಾ ಹಾಗೂ ರಣವೀರ್ ಇನ್​ಸ್ಟಾಗ್ರಾಮ್ ಮೂಲಕ ಮಗು ಜನಿಸಿದ ಬಗ್ಗೆ ಮಾಹಿತಿ ನೀಡಿದ್ದರು. ಈ ಪೋಸ್ಟ್​ಗೆ ಆಲಿಯಾ ಭಟ್, ಪ್ರಿಯಾಂಕಾ ಚೋಪ್ರಾ, ಕತ್ರಿನಾ ಕೈಫ್, ಸಾರಾ ಅಲಿ ಖಾನ್, ಕರೀನಾ ಕಪೂರ್‌ ಸೇರಿದಂತೆ ಅನೇಕರು ಶುಭಾಶಯ ತಿಳಿಸಿದ್ದಾರೆ.

ಸದ್ಯ ದೀಪಿಕಾ ಸಿನಿಮಾಗಳಿಂದ ಬ್ರೇಕ್‌ ತೆಗೆದುಕೊಂಡಿದ್ದಾರೆ. ದೀಪಿಕಾ ಅಭಿನಯದ ʼಸಿಂಗಂ ಅಗೈನ್‌ʼ ಚಿತ್ರ ರಿಲೀಸ್‌ಗೆ ರೆಡಿಯಾಗಿದೆ. ಈ ಸಿಮಾದಲ್ಲಿ ಅವರು ಖಾಕಿ ತೊಟ್ಟಿದ್ದು, ಎಸಿಪಿ ಶಕ್ತಿ ಶೆಟ್ಟಿ ಭಲೇರಾವ್‌ (ಲೇಡಿ ಸಿಂಗಂ) ಆಗಿ ಅಬ್ಬರಿಸಿದ್ದಾರೆ. ರೋಹಿತ್‌ ಶೆಟ್ಟಿ ನಿರ್ದೇಶನದ ಈ ಸಿನಿಮಾದಲ್ಲಿ ಅಜಯ್‌ ದೇವಗನ್‌, ಕರೀನಾ ಕಪೂರ್‌, ರಣವೀರ್‌ ಸಿಂಗ್‌ ಮತ್ತಿತರರು ನಟಿಸಿದ್ದಾರೆ. ಈ ವರ್ಷದ ಜೂನ್‌ನಲ್ಲಿ ತೆರೆಕಂಡ ದೀಪಿಕಾ ಪಡುಕೋಣೆ ಅಭಿನಯದ ʼಕಲ್ಕಿ 2898 ಎಡಿʼ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಚಿಂದಿ ಉಡಾಯಿಸಿದ್ದು, 1,000 ಕೋಟಿ ರೂ.ಗಿಂತ ಅಧಿಕ ಗಳಿಕೆ ಕಂಡಿದೆ.

ಈ ಸುದ್ದಿಯನ್ನೂ ಓದಿ: Deepika Padukone: ದೀಪಿಕಾ ಪಡುಕೋಣೆ- ರಣವೀರ್‌ ದಂಪತಿಗೆ ಹೆಣ್ಣು ಮಗು ಜನನ