Monday, 4th November 2024

ಇಹಲೋಕ ತ್ಯಜಿಸಿದ ಹಿರಿಯ ಕಲಾವಿದ ಶನಿ ಮಹಾದೇವಪ್ಪ

ಬೆಂಗಳೂರು: ಡಾ.ರಾಜ್ ಕುಮಾರ್ ಹಾಗೂ ಇನ್ನಿತರ ಮಹಾನ್‌ ಕಲಾವಿದರೊಂದಿಗೆ ನಟಿಸಿದ್ದ ಕನ್ನಡದ ಚಿತ್ರರಂಗದ ಹಿರಿಯ ಕಲಾವಿದ ಶನಿ ಮಹಾದೇವಪ್ಪ(90 ವರ್ಷ)ಭಾನುವಾರ ಇಹಲೋಕ ತ್ಯಜಿಸಿದ್ದಾರೆ.

ದೈವೀ ಮಹಾತ್ಮೆ ಹಾಗೂ ದೇಶದ ಹಿಂದಿನ ಪೌರಾಣಿಕ ಕಥೆಗಳ ಕುರಿತು ಆಧುನಿಕ ಭಾರತಕ್ಕೆ ನೈಜ ಚಿತ್ರಣವನ್ನು ಉಣ ಬಡಿಸಿದಂತಹ ಕವಿರತ್ನ ಕಾಳಿದಾಸ , ಭಕ್ತ ಕುಂಬಾರ ,ಶ್ರೀನಿವಾಸ ಕಲ್ಯಾಣ ಸೇರಿದಂತೆ ಸುಮಾರು 500 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಸಿದ್ದಾರೆ.

ಭಾನುವಾರ ಸಂಜೆ 4 ಗಂಟೆಗೆ ಕೆಸಿ ಜನರಲ್ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅವರ ಆರೋಗ್ಯ ಸ್ಥಿತಿ ತೀರ ಹದಗೆಟ್ಟಿತ್ತು ಎಂದು ಹೇಳಲಾಗುತ್ತಿದೆ. ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಬೆಳಕವಾಡಿಯ ಶನಿ ಮಹಾದೇವಪ್ಪ ಅಪ್ಪಟ ಕನ್ನಡ ಅಭಿಮಾನಿಯಾಗಿದ್ದರು. ತಮಿಳು ಚಿತ್ರರಂಗದಿಂದ ಸಾಕಷ್ಟು ಅವಕಾಶ ಬಂದರೂ, ಕನ್ನಡದಲ್ಲಿ ಮಾತ್ರ ನಟಿಸುವೇ ಎಂದು ಹೇಳಿದ್ದರು.

ರಾಜಾ ವಿಕ್ರಮ ನಾಟಕದಲ್ಲಿ ಶನಿ ದೇವರ ಪಾತ್ರ ಮಾಡುತ್ತಿದ್ದ ಕಾರಣ ಮಹಾದೇವಪ್ಪ ಅವರು ಶನಿ ಮಹಾದೇವಪ್ಪ ಆಗಿ ಗುರುತಿಸಿಕೊಂಡರು. ಪೋಷಕ, ಹಾಸ್ಯ, ಖಳ ನಟನಾಗಿ ನಟಿಸುತ್ತಿದ್ದ ಶನಿ‌ ಮಹಾದೇವಪ್ಪ ಬೆಳ್ಳಿ ತೆರೆ ಮೇಲೆ ರಾರಾಜಿಸಿದ್ದರು.